ಜಿಲ್ಲಾ ಸುದ್ದಿ

ಓಕಳಿಪುರ ಅಷ್ಟಪಥ ಕಾರಿಡಾರ್‍ಗೆ ಚಾಲನೆ

ಓಕಳಿಪುರ ಅಷ್ಟಪಥ ಕಾರಿಡಾರ್‍ಗೆ ಚಾಲನೆ
ಓಕಳಿಪುರ ಅಷ್ಟಪಥ ಕಾರಿಡಾರ್‍
Published On :

ಬೆಂಗಳೂರು: ಎಂಟು ಪಥದ ಓಕಳಿಪುರ ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆಯ ಮೊದಲ ಹಂತದ ಕಾಮಗಾರಿ ಕೊನೆಗೂ ಆರಂಭವಾಗಿದೆ.

ಮೊದಲ ಹಂತವಾಗಿ ಈ ಪ್ರದೇಶದಲ್ಲಿನ 9 ಮರಗಳನ್ನು ಕಡಿಯಲಾಗುತ್ತಿದ್ದು, ಸದ್ಯಕ್ಕೆ 3 ಮರಗಳನ್ನು ಕಡಿದು ಸಾಗಿಸಲಾಗಿದೆ. ಇವುಗಳಲ್ಲಿ 2 ಮರಗಳು ಬೀಳುವ ಹಂತದಲ್ಲಿದ್ದು, ಕಡಿದ ಕೊಂಬೆಗಳನ್ನು ಸ್ಥಳದಿಂದ ತೆರವು ಮಾಡಲಾಗಿದೆ. 4 ಹಂತಗಳಲ್ಲಿರುವ ಯೋಜನೆಯಲ್ಲಿ ಒಟ್ಟು 44 ಮರಗಳನ್ನು ಕಡಿಯಬೇಕಿದ್ದು, ಕಾಮಗಾರಿ ವೇಗ ಪಡೆದುಕೊಂಡಿದೆ. ಮೊದಲ ಹಂತದ ಕಾಮಗಾರಿಗೆ ಚಾಲನೆ ದೊರೆತಿದ್ದು, 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ ಎ.ಎಸ್.ರಮೇಶ್ ತಿಳಿಸಿದ್ದಾರೆ.

ಓಕಳಿಪುರ ವೃತ್ತದಿಂದ ಆರಂಭವಾಗಿ ಖೋಡೇಸ್ ವೃತ್ತದವರೆಗೆ ಕಾಮಗಾರಿ ನಡೆಯಲಿದೆ. 2012ರಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ರು.183.77 ಕೋಟಿ ಮೊತ್ತದ 8 ಪಥದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಪ್ರದೇಶದಲ್ಲಿ ರೈಲ್ವೆ ಇಲಾಖೆಯ ಭೂ ವಿವಾದದಿಂದ ಕಾಮಗಾರಿ ಆರಂಭವಾಗಿರಲಿಲ್ಲ. ಎರಡು ವರ್ಷಗಳಲ್ಲಿ ಇಲಾಖೆಯೊಂದಿಗೆ ಹಲವು ಬಾರಿ ಸಭೆ ನಡೆಸಿದ್ದ ಬಿಬಿಎಂಪಿ ಅಧಿಕಾರಿಗಳು, 20ಕ್ಕೂ ಅಧಿಕ ಕಾಮಗಾರಿ ವಿನ್ಯಾಸಗಳನ್ನು ಸಿದ್ಧಪಡಿಸಿದ್ದರು. ಈಗ ಕಾಮಗಾರಿಗೆ ಇದ್ದ ಅಡೆತಡೆಗಳು ನಿವಾರಣೆಯಾಗಿವೆ.

10 ನಿಮಿಷ ಸಂಚಾರ ಕಾರಿಡಾರ್ ಯೋಜನೆ ಪೂರ್ಣಗೊಂಡರೆ ರಾಜಾಜಿನಗರ, ನಾಗರಬಾವಿ, ಮಾಗಡಿ ರಸ್ತೆ, ಡಾ.ರಾಜ್‍ಕುಮಾರ್ ರಸ್ತೆ, ಓಕಳಿಪುರ, ಸಿಬಿಡಿ ಸೇರಿದಂತೆ ಹಲವು ಕಡೆಗಳಿಂದ ನಗರದ ರೈಲು ನಿಲ್ದಾಣಕ್ಕೆ ಬರುವ ವಾಹನಗಳ ಸಂಚಾರ ಸುಗಮವಾಗಲಿದೆ. ರಾಜ್‍ಕುಮಾರ್ ರಸ್ತೆಯಿಂದ ಆರಂಭವಾಗಿ ಖೇಡೇಸ್ ವೃತ್ತದವರೆಗೆ 2 ಕಿಮೀ ದೂರವಿದ್ದು, ವಾಹನ ದಟ್ಟಣೆ ಹೆಚ್ಚಿರುವ ಸಂದರ್ಭಗಳಲ್ಲಿ ಈ ದೂರ ತಲುಪಲು ಸಾಮಾನ್ಯವಾಗಿ 40 ನಿಮಿಷದಿಂದ 1 ಗಂಟೆಯ ಅವಧಿ ಬೇಕಾಗುತ್ತದೆ. ಕಾರಿಡಾರ್ ನಿರ್ಮಾಣವಾದರೆ ಈ ದಾರಿಯನ್ನು 10 ನಿಮಿಷಗಳಲ್ಲಿ ಕ್ರಮಿಸಬಹುದು ಎಂದು ಅಂದಾಜಿಸಲಾಗಿದೆ. ನೈರುತ್ಯ ರೈಲ್ವೆ ಇಲಾಖೆಗೆ ಸೇರಿದ್ದ 3.16 ಎಕರೆ ಜಾಗವನ್ನು ಬಿಬಿಎಂಪಿ ವಶಪಡಿಸಿಕೊಳ್ಳಬೇಕಿತ್ತು. ಆದರೆ ಇದಕ್ಕೆ ಬದಲಾಗಿ ಹಣ ಅಥವಾ ಮತ್ತೊಂದು ಜಾಗವನ್ನು ರೈಲ್ವೆ ಇಲಾಖೆಗೆ ನೀಡುವ ಬಗ್ಗೆ ಚರ್ಚೆ ನಡೆದಿತ್ತು.

ಓಕಳಿಪುರ ಕಾಮಗಾರಿ ವಿಳಂಬ
ಓಕಳಿಪುರನಿಂದ ಕಾರಿಡಾರ್ ರಸ್ತೆ ವರೆಗಿನ 8ಲೇನ್ ರಸ್ತೆ ನಿರ್ಮಿಸುವ ಕಾಮಗಾರಿ ವಿಳಂಬವಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಕಾಮಗಾರಿ ನಡೆಸುವ ರೈಲ್ವೆ ಇಲಾಖೆಗೆ ಅಗತ್ಯ ಹೊಂದಾಣಿಕೆ ಅನುದಾನ ರು.20 ಕೋಟಿಯನ್ನು ಸದ್ಯದಲ್ಲೇ ಬಿಡುಗಡೆ ಮಾುವಂತೆ ಸೂಚಿಸಲಾಗಿದೆ. ಅದೇರೀತಿ ಸ್ಟೀಲ್ ಸೇತುವೆಗಳು, ಕಾಂಕ್ರೀಟ್ ಸೇತುವೆಗಳನ್ನು ಮಾಡಲಾಗುತ್ತಿದೆ. ಉತ್ತರ, ದಕ್ಷಿಣ ಮತ್ತು ಪೂರ್ವ ಹಾಗೂ ಪಶ್ಚಿಮ ದಿಕ್ಕುಗಳಿಂದ ನಗರವನ್ನು ಸಂಪರ್ಕಿಸುವ ರಾಷ್ಟ್ರೀಯ ಸೇತುವೆಗಳನ್ನು ಸಂಪರ್ಕಿಸುವ ಮೂರು ಮೇಲು ಸೇತುವೆಗಳು ನೂತನ ಯೋಜನೆಗಳಾಗಿವೆ. ಈ  ಎಲ್ಲಾ ಕಾಮಗಾರಿಗಳನ್ನು ಈಗ ಬಜೆಟ್‍ನಲ್ಲಿ ಸೇರಿಸಿ ಟೆಂಡರ್ ಪ್ರಕ್ರಿಯೆ ಆರಂಭಿಸಲುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.