

ಬೆಂಗಳೂರು: ಗಮನ ಬೇರೆಡೆ ಸೆಳೆದು ಹಣ ದೋಚುವ ಕುಖ್ಯಾತ ತಂಡವನ್ನು ನಗರ ಪೊಲೀಸರು ಪತ್ತೆ ಮಾಡಿ ಬಂಧಿಸಿರುವ ಬೆನ್ನಲ್ಲೇ ಬುಧವಾರ ಉದ್ಯಮಿಯೊಬ್ಬರ ಗಮನ ಬೇರೆಡೆ ಸೆಳೆದ ದುಷ್ಕರ್ಮಿಗಳು ಬರೋಬ್ಬರಿ ರು.4.5 ಲಕ್ಷ ದೋಚಿದ್ದಾರೆ.ಬನ್ನೇರುಘಟ್ಟ ರಸ್ತೆ ಜೆಪಿ ನಗರದಲ್ಲಿ ಬುಧವಾರ ಮಧ್ಯಾಹ್ನ 12.30ರ ಸುಮಾರಿಗೆ ಘಟನೆ ನಡೆದಿದೆ.
ಹುಳಿಮಾವು ನಿವಾಸಿ ಗ್ರಾನೈಟ್ ಉದ್ಯಮಿ ರಾಕೇಶ್ ಹಣ ಕಳೆದುಕೊಂಡವರು. ಇಂಡಿಯನ್ ಓವರ್ ಸೀಸ್ ಬ್ಯಾಂಕ್‍ಗೆ ಹಣ ಕಟ್ಟಲೆಂದು ಮನೆಯಿಂದ ರು.4.5 ಲಕ್ಷ ಬ್ಯಾಗ್ ನಲ್ಲಿಟ್ಟುಕೊಂಡು ತಮ್ಮ ಮಹೇಂದ್ರ ಲೋಗನ್ ಕಾರಿನಲ್ಲಿ ಚಾಲಕನೊಂದಿಗೆ ತೆರಳುತ್ತಿದ್ದರು. ಕಾರು ಬನ್ನೇರುಘಟ್ಟ ಮುಖ್ಯರಸ್ತೆ ಜೆ.ಪಿ ನಗರ ಕೆಎಫ್ ಸಿ ಮುಂದೆ ಬರುತ್ತಿದ್ದಾಗ ಹಿಂದಿನಿಂದ ಬೈಕ್‍ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಟೈರ್ ಕಾರಿನ ಪಂಕ್ಚರ್ ಆಗಿದೆ ನೋಡಿ ಎಂದು ಹೇಳಿದ್ದಾನೆ.
ಚಾಲಕ ಗ್ಲಾಸ್ ಕೆಳಗಿಳಿಸಿ ನೋಡಿದಾಗ ಟೈರ್‍ನಲ್ಲಿ ನಿಜಕ್ಕೂ ಗಾಳಿ ಕಡಿಮೆಯಾಗಿತ್ತು. ಹೀಗಾಗಿ, ವಾಹನವನ್ನು ರಸ್ತೆ ಬದಿ ನಿಲ್ಲಿಸಿ ರಾಕೇಶ್ ಮತ್ತು ಚಾಲಕ ಇಬ್ಬರು ಕೆಳಗಿಳಿದಿದ್ದಾರೆ.
ಟೈರ್ ಪರಿಶೀಲಿಸಿ ಬರುವಷ್ಟರಲ್ಲಿ ಮುಂದಿನ ಸೀಟಿನಲ್ಲಿಟ್ಟಿದ್ದ ಹಣದ ಬ್ಯಾಗ್ ನಾಪತ್ತೆಯಾಗಿತ್ತು. ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.