

ಬೆಂಗಳೂರು: ಅಮೆರಿಕ ಹಾಗೂ ಭಾರತದ ನಡುವೆ ಉತ್ತಮ ಬಾಂಧವ್ಯ ಹಾಗೂ ಬಂಡವಾಳ ಹೂಡಿಕೆ ಮಾಡುವ ಸಲುವಾಗಿ ಯುಎಸ್- ಇಂಡಿಯಾ ಬಂಡವಾಳ ವೇದಿಕೆ ಮತ್ತು ಎಫ್ ಕೆಸಿಸಿಐ ಒಡಂಬಡಿಕೆಗೆ ಸಹಿ ಹಾಕಿದೆ.
ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಫ್ ಕೆಸಿಸಿಐನ ಅಧ್ಯಕ್ಷ ಸಂಪತ್ ರಾಮನ್ ಹಾಗೂ ಯುಎಸ್-ಇಂಡಿಯಾ ಬಂಡವಾಳ ವೇದಿಕೆಯ ಅಧ್ಯಕ್ಷ ಮನೋಜ್ ಗುರ್‍ಶಾನಿ ಒಡಂಬಡಿಕೆಗೆ ಸಹಿ ಹಾಕಿದರು. ಇದೇ ವೇಳೆ ಯುಎಸ್-ಇಂಡಿಯಾ ಬಂಡವಾಳ ವೇದಿಕೆಯ ದಕ್ಷಿಣ ಭಾರತ ಕೇಂದ್ರಕ್ಕೆ ಚಾಲನೆ ನೀಡಲಾಯಿತು. ಅಮೆರಿಕ ಮೂಲದ ಸಂಸ್ಥೆಯೊಂದಿಗೆ ಭಾರತೀಯ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪರಸ್ಪರ ಪರಿಚಯ ಹಾಗೂ ಬಂಡವಾಳ ಹೂಡಿಕೆಯ ಅವಕಾಶವನ್ನು ಗುರುತಿಸುವುದು ವೇದಿಕೆಯ ಮುಖ್ಯ ಉದ್ದೇಶವಾಗಿದೆ.
ನಾನಾ ಕ್ಷೇತ್ರಗಳಾದ ಬಯೋಟೆಕ್, ತ್ಯಾಜ್ಯ ನೀರಿನ ನಿರ್ವಹಣೆ, ಉತ್ಪಾದನಾ ಕ್ಷೇತ್ರ, ಇಂಧನ ಹಾಗೂ ಕೃಷಿ ಚಟುವಟಿಕೆಗಳಲ್ಲಿ ಬಂಡವಾಳ ಹೂಡಲು ಹಾಗೂ ಭಾರತೀಯ ಸಂಸ್ಥೆಗಳೊಂದಿಗೆ ಯುಎಸ್ ಸಂಸ್ಥೆ ವಿಲೀನ ಮಾಡುವ ಕುರಿತು ವೇದಿಕೆ ಹೆಚ್ಚು ಗಮನಹರಿಸುತ್ತಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಸಂಸ್ಥೆಗಳಿಗೆ ಆರ್ಥಿಕ ಹಾಗೂ ತಂತ್ರಜ್ಞಾನದ ಸಹಾಯ ಕಲ್ಪಿಸಲು ಈ ವೇದಿಕೆ ಸಹಕಾರಿಯಾಗಲಿದೆ ಎಂದು ಎಫ್ ಕೆಸಿಸಿಐನ ಅಧ್ಯಕ್ಷ ಸಂಪತ್ ರಾಮನ್ ತಿಳಿಸಿದರು. ಸದ್ಯ ವೇದಿಕೆ ಜತೆ ಕೈಜೋಡಿಸಲು 50ಕ್ಕೂ ಹೆಚ್ಚು ಭಾರತೀಯ ಸಂಸ್ಥೆಗಳು ವೇದಿಕೆಯ ಸದಸ್ಯತ್ವ ಪಡೆಯಲು ಮುಂದೆ ಬಂದಿರುವುದಾಗಿ ಸಂಪತ್ ರಾಜನ್ ತಿಳಿಸಿದರು.
ಭಾರತೀಯ ಸಂಸ್ಥೆಯೊಂದಿಗೆ ಯುಎಸ್ ಸಂಸ್ಥೆ ವಿಲೀನ ಪ್ರಕ್ರಿಯೆಗೆ ಮುಂದಾದರೆ ವೇದಿಕೆ ಅಗತ್ಯ ಮಾಹಿತಿಗಳಾದ ಕಾನೂನು, ನೀತಿ ನಿಯಮ ಮತ್ತು ಶಾಸನಬದ್ದಗಳ ಕುರಿತು ಮಾಹಿತಿ ಒದಗಿಸಲು ವೇದಿಕೆ ಸಹಕಾರಿಯಾಗಲಿದೆ ಎಂದು ಸಂಪತ್ ರಾಜನ್ ತಿಳಿಸಿದರು. ಕಾರ್ಯಕ್ರಮದಲ್ಲಿ ಐಟಿ ದಿಗ್ಗಜ ಮೋಹನ್‍ದಾಸ್ ಪೈ, ಯುಎಸ್-ಇಂಡಿಯಾ ಬಂಡವಾಳ ವೇದಿಕೆಯ ನಿರ್ದೇಶಕಿ ಶೀತಲ್ ಕಪೂರ್, ವೇದಿಕೆಯ ದಕ್ಷಿಣ ಭಾರತದ ಕೇಂದ್ರದ ಮುಖ್ಯಸ್ಥ ನವೀನ್ ಹಾಗೂ ಉದ್ಯಮಿಗಳು ಭಾಗವಹಿಸಿದ್ದರು.