ಬಾಂಗ್ಲಾದೇಶದ ಮಹಿಳೆಯ ಬಟ್ಟೆ ಬಿಚ್ಚಿಸಿ ಹಲ್ಲೆ

ಬೆಂಗಳೂರು: ಮಾಲ್ ವೊಂದರಲ್ಲಿ ಚಪ್ಪಲಿ ಖರೀದಿಸಿ ಹಣ ಪಾವತಿಸಲಿಲ್ಲ ಎಂಬ ಕಾರಣಕ್ಕೆ ಬಾಂಗ್ಲಾದೇಶ ಮೂಲದ ಮಹಿಳೆಯ ಬಟ್ಟೆ ಬಿಚ್ಚಿ ಹಲ್ಲೆ ನಡೆಸಿ,ಅಮಾನವೀಯವಾಗಿ ವರ್ತಿಸಿದ್ದಲ್ಲದೇ, ಆಕೆಯಿಂದ 60 ಸಾವಿರ ಹಣ ದೋಚಿದ ಘಟನೆ ಹೆಬ್ಬಗೋಡಿಯ ಪ್ರತಿಷ್ಠಿತ ಮಾಲ್ ವೊಂದರಲ್ಲಿ ನಡೆದಿದೆ.
ಹಲ್ಲೆಗೊಳಗಾಗಿರುವ ರಶೀದಾ ಬೇಗಂ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಹೆಬ್ಬಗೋಡಿ ಪೊಲೀಸರು, ಆರೋಪಿ ಮಂಜುಳಾ ಎಂಬಾಕೆಯನ್ನು ಬಂಧಿಸಿದ್ದಾರೆ. ತಾನು ಸಮಾಜ ಸೇವಕಿ, ರಾಜಕಾರಣಿ ಎಂದು ಹೇಳಿಕೊಂಡಿರುವ ಆಕೆ, ಹೆಬ್ಬಗೋಡಿ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದೇ ವೇಳೆ ರಶೀದಾ ಅವರ ಮೇಲೆ ಹಲ್ಲೆ ನಡೆಸಿ ಅಮಾನವೀಯವಾಗಿ ವರ್ತಿಸಿದ ಮಾಲ್ ನ ಇಬ್ಬರು ಮಹಿಳಾ ಭದ್ರತಾ ಸಿಬ್ಬಂದಿ ತಲೆಮರೆಸಿಕೊಂಡಿದ್ದು, ಆವರ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಘಟನೆ: ಹೃದ್ರೋಗದಿಂದ ಬಳಲುತ್ತಿರುವ ಪತಿಯ ಚಿಕಿತ್ಸೆಗೆಂದು ರಶೀದಾ 15 ದಿನಗಳ ಹಿಂದೆ ನಗಗಕ್ಕೆ ಆಗಮಿಸಿದ್ದಾರೆ. ಹೊಸೂರು ರಸ್ತೆಯ ನಾರಾಯಣ ಹೃದಯಾಲಯದಲ್ಲಿ ಪತಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಮೇ 25ರಂದು ಶಸ್ತ್ರಚಿಕಿತ್ಸೆಯಾಗಿತ್ತು. ಪತಿಯ ವಸ್ತ್ರ ಬದಲಿಸುವಂತೆ ನರ್ಸ್ ಗಳು ಸೂಚಿಸಿದ ಹಿನ್ನೆಲೆಯಲ್ಲಿ ರಶೀದಾ ಬಟ್ಟೆ ತರಲು ಬೊಮ್ಮಸಂದ್ರದ ಡಿ-ಮಾರ್ಟ್ ಗೆ ತೆರಳಿದ್ದರು.
ಬಟ್ಟೆ ಸೇರಿ ಮತ್ತಿತರ ಅಗತ್ಯ ನಸ್ತುಗಳನ್ನು ಖರೀದಿಸಿದ್ದರು. ಜತೆಗೆ ಚಪ್ಪಲಿಯನ್ನೂ ಕೊಂಡು ಕಾಲಿಗೆ ಹಾಕಿಕೊಂಡಿದ್ದರು. ಖರೀದಿಸಿದ ವಸ್ತುಗಳಿಗೆ ಬಿಲ್ ಹಾಕಿಸುವಾಗ ಚಪ್ಪಲಿಗೆ ಬಿಲ್ ಹಾಕುವುದನ್ನು ಮರೆತಿದ್ದರು. ಮಳಿಗೆಯಿಂದ ಹೊರಗೆ ಹೋಗುವಾಗ ಸೆಕ್ಯುರಿಟಿ ಗಾರ್ಡ್ ಬಿಲ್ ಪರಿಶೀಲಿಸಲು ತಡೆದಿದ್ದಾನೆ. ಆಗ, ರಶೀದಾ ಚಪ್ಪಲಿಗೆ ಹಣ ಪಾವತಿಸದಿರುವುದು ಪತ್ತೆಯಾಗಿದೆ.
ಈ ಬಗ್ಗೆ ಸೆಕ್ಯುರಿಟಿ ಗಾರ್ಡ್ ಮಹಿಳಾ ಸಿಬ್ಬಂದಿಗೆ ತಿಳಿಸಿದ್ಧ. ಹೀಗಾಗಿ, ಸ್ಥಳಕ್ಕೆ ಬಂದ ಮಹಿಳಾ ಭದ್ರತಾ ಸಿಬ್ಬಂದಿ, ರಶೀದಾ ಅವರನ್ನು 1ನೇ ಮಹಡಿಗೆ ಕರೆದೊಯ್ದಿದ್ದಾರೆ. ಅದೇ ವೇಳೆ, ಅಲ್ಲೇ ಇದ್ದ ಆರೋಪಿ ಮಂಜುಳಾ ತಾನೂ ಮಹಿಳಾ ಪೊಲೀಸ್ ಇನ್ಸ್ ಪೆಕ್ಟರ್ ಎಂದು ಹೇಳಿ ರಶೀದಾ ಅವರಿಗೆ ಧಮಿಕಿ ಹಾಕಿದ್ದರು. ಅಧಿಕಾರ ಇಲ್ಲದಿದ್ದರೂ ರಶೀದಾ ಅವರನ್ನು ಪ್ರಶ್ನಿಸಿದ್ದಾರೆ. ತಾನು ಮರೆತು ಬಿಲ್ ಪಾವತಿಸಿಲ್ಲ, ಕಟ್ಟುತ್ತೇನೆ ಎಂದು ರಶೀದಾ ಪರಿಪರಿಯಾಗಿ ಬೇಡಿಕೊಂಡರೂ ಕೇಳದೆ, ಬಟ್ಟೆ ಬಿಚ್ಚಿಸಿ ಥಳಿಸಿದ್ದಾರೆ.
ಮಂಜುಳಾಳ ಕೃತ್ಯಕ್ಕೆ ಅಲ್ಲಿನ ನೌಕರರೂ ಸಾಥ್ ನೀಡಿದ್ದಾರೆ. ಈ ಎಲ್ಲ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದೈಹಿಕ ಹಿಂಸೆ ನೀಡಿದ್ದಲ್ಲದೆ, ರಶೀದಾ ಬಳಿಯಿದ್ದ 60 ಸಾವಿರ ನಗದು, 5 ಸಾವಿರ ಬಾಂಗ್ಲಾ ಕರೆನ್ಸಿ ಕಸಿದು ಮಂಜುಳಾ ಪರಾರಿಯಾಗಿದ್ದಳು.
ಬಳಿಕ ರಶೀದಾ ಆಸ್ಪತ್ರೆ ಸಿಬ್ಬಂದಿಯೊಡನೆ ಹೆಬ್ಬುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಸಿಬ್ಬಂದಿಯೇ ಸೂಚಿಸಿದ್ದರು:
ಆರೋಪಿ ಮಂಜುಳಾ ಪೊಲೀಸ್ ಠಾಣೆ ಬಳಿ ನಾಲ್ಕೈದು ಬಾರಿ ಓಡಾಡುತ್ತಿರುವುದನ್ನು ಗಮನಿಸಿದ್ದ ಮಾರ್ಟ್ ನ ಸಿಬ್ಬಂದಿ, ಆಕೆಯನ್ನು ಪೊಲೀಸ್ ಎಂದೇ ಭಾವಿಸಿ ರಶೀದಾಳನ್ನು ವಿಚಾರಣೆ ನಡೆಸುವಂತೆ ಹೇಳಿದ್ದಾರೆ.
ಪೊಲೀಸರು, ಮಂಜುಳಾ ರಾಜಕೀಯ ಹಿನ್ನೆಲೆಯಿರುವ ವ್ಯಕ್ತಿಯೆಂದು ಆರಂಭದಲ್ಲಿ ಎಫ್ ಐಆರ್ ದಾಖಲಿಸಲು ಹಿಂದೇಟು ಹಾಕಿದ್ದರು. ಆದರೆ ಮಾಧ್ಯಮಗಳಲ್ಲಿ ವಿಷಯ ಬರುತ್ತಿದ್ದಂತೆ ಗುರುವಾರ ರಾತ್ರಿ ಎಫ್ ಐಆರ್ ದಾಖಲಿಸಿಕೊಂಡು ಐಪಿಸಿ ಕಲಂ 384 ಪ್ರಕರಣ ಮಾತ್ರ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


