

ಮೈಸೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಮೈಸೂರಿನ ನ್ಯಾಯಾಲಯವು ವ್ಯಕ್ತಿಯೊಬ್ಬರಿಗೆ ರು.1 ಕೋಟಿ ದಂಡ ವಿಧಿಸಿ ತೀರ್ಪು ನೀಡಿದೆ.
ಮಂಗಳೂರಿನ ಶಿವಭಾಗ್ ನಲ್ಲಿರುವ ಸಂಜಯ್ ಅಪಾರ್ಟ್ ಮೆಂಟ್ ನಿವಾಸಿ ಬಿ.ರಾಜೇಂದ್ರ ಎಂಬವರು ತಮ್ಮ ಬೀಗರಾದ ಮೈಸೂರಿನ ಪಿ.ಪ್ರಭುರಾಮ್ ಅವರಿಂದ ತಮ್ಮ ವ್ಯವಹಾರಿಕ ಉದ್ದೇಶಕ್ಕಾಗಿ ರು.2 ಕೋಟಿ ಸಾಲ ಕೇಳಿದ್ದರು. ಹೀಗಾಗಿ ಪ್ರಭುರಾಮ್ ಅವರು ರಾಜೇಂದ್ರ ಅವರಿಗೆ 2007ರಲ್ಲಿ ರು.1.85ಕೋಟಿ ಸಾಲವಾಗಿ ನೀಡಿದ್ದರು.
ಪ್ರಭುರಾಮ್ ಅವರು ತಾನು ನೀಡಿದ ಸಾಲದ ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ ರಾಜೇಂದ್ರ ಮಂಗಳೂರಿನ ಶಿವಬಾಗ್ ವಿಭಾಗದ ಕೆನರಾ ಬ್ಯಾಂಕ್ ನ ರು.1 ಕೋಟಿ ಮತ್ತು ರು.85 ಲಕ್ಷದ ಎರಡು ಚೆಕ್ ಗಳನ್ನು ನೀಡಿದ್ದರು. ಈ ನಡುವೆ ರಾಜೇಂದ್ರ ಅವರು ರು.80 ಲರ್ಶ ಮರುಪಾವತಿ ಮಾಡಿ, ಉಳಿದ ಹಣವನ್ನು ಪ್ರಭುರಾಮ್ ಗೆ ಹಿಂದಿರುಗಿಸಲಿಲ್ಲ. ಹೀಗಾಗಿ, ಪ್ರಭುರಾಮ್ ಅವರು ತಮ್ಮ ಬಳಿಯಿದ್ದ ಎರಡು ಚೆಕ್ ಗಳ ಪೈಕಿ ರು.85 ಲಕ್ಷ ಮೊತ್ತದ ಚೆಕ್ ಅನ್ನು ಮೈಸೂರಿನ ಎಸ್ ಬಿಎಂ ಬ್ಯಾಂಕ್ ಗೆ ಹಾಜರುಪಡಿಸಿದಾಗ ಸದರಿ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲ ಎಂಬ ಕಾರಣದಿಂದ ಆ ಚೆಕ್ ಬೌನ್ಸ್ ಆಗಿತ್ತು. ಚೆಕ್ ಮೊತ್ತವನ್ನು 15 ದಿನದೊಳಗಾಗಿ ಹಿಂದಿರುಗಿಸುವಂತೆ ಕೋರಿ ಪ್ರಭುರಾಮ್ ಅವರು ವ ಕೀಲರ ಮೂಲಕ ನೋಟಿಸ್ ನೀಡಿದರೂ ಸಹ ರಾಜೇಂದ್ರ ಆ ಮೊತ್ತವನ್ನು ಹಿಂದಿರುಗಿಸಲಿಲ್ಲ.
ಆಗ ಪ್ರಭುರಾಮ್ ಅವರು ರಾಜೇಂದ್ರ ಅವರ ವಿರುದ್ಧ ಮೈಸೂರಿನ ಪ್ರಧಾನ ಪ್ರಥಮ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎ. ನಾಗಿರೆಡ್ಡಿ ಅವರು ಬಿ. ರಾಜೇಂದ್ರ ಅವರಿಗೆ ರು.1 ಕೋಟಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಈ ದಂಡದ ಮೊತ್ತವನ್ನು ಪಾವತಿಸಲು ವಿಫಲವಾದಲ್ಲಿ 2 ತಿಂಗಳ ಸಾದ ಸೆರೆವಾಸ ಅನುಭವಿಸಲು ಅವರು ಆದೇಶಿಸಿದ್ದಾರೆ.
ಈ ರು.1 ಕೋಟಿಯಲ್ಲಿ ರು.99.95 ಲಕ್ಷವನ್ನು ದೂರುದಾರರಾದ ಪಿ. ಪ್ರಭುರಾಮ್ ಅವರಿಗೆ ನೀಡಲು, ಉಳಿದ ರು.5 ಸಾವಿರವನ್ನು ಸರ್ಕಾರಕ್ಕೆ ಭರಿಸುವಂತೆ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಫಿರ್ಯಾದುದಾರ ಪಿ. ಪ್ರಭುರಾಮ್ ಅವರ ಪರವಾಗಿ ವಕೀಲ ಕೆ. ಈಶ್ವರ ಭಟ್ ವಾದಿಸಿದ್ದರು.