

ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ಜಾತಿಗಳ ಮಕ್ಕಳ ವಸತಿ ನಿಲಯಗಳಿಗೆ ಆಹಾರ ಸರಬರಾಜು ಮಾಡುವ ಟೆಂಡರ್‍ನಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪ ಹೊತ್ತಿರುವ ಸಮಾಜ ಕಲ್ಯಾಣ ಸಚಿವರ ತಲೆದಂಡವಾಗಲಿದೆಯೆ?
`ಡೆಕ್ಕನ್ ಕ್ರಾನಿಕಲ್' ಆಂಗ್ಲ ದಿನಪತ್ರಿಕೆ ಜೊತೆ ಮಾತನಾಡಿರುವ ದೆಹಲಿಯ ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರು ಇಂಥದೊಂದು ಸುಳಿವು ನೀಡಿದ್ದಾರೆ. ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಬಿಹಾರ ಫಲಿತಾಂಶದ ಹಿನ್ನೆಲೆಯಲ್ಲಿ, ರಾಜಿನಾಮೆ ಕೇಳುವ ಸಾಧ್ಯತೆಗಳು ದಟ್ಟವಾಗಿವೆ.
ಭ್ರಷ್ಟಾಚಾರ ಸಹಿಸಲ್ಲ: `ಸಚಿವರ ಪ್ರಕರಣದಿಂದ ಕಾಂಗ್ರೆಸ್ ತೀವ್ರ ಮುಜುಗರಕ್ಕೆ ಸಿಲುಕಿಕೊಂಡಿದೆ ಎಂದಿರುವ ಹಿರಿಯ ನಾಯಕರು, ಈ ಘಟನೆಯನ್ನು ಹಿಂದಿನ ರೈಲ್ವೆ ಸಚಿವ ಪವನ್ ಕುಮಾರ್ ಬನ್ಸಾಲಿ ಹಾಗೂ ಮಾಜಿ ಕಾನೂನು ಸಚಿವ ಅಶ್ವಿನಿಕುಮಾರ್ ಪ್ರಕರಣಕ್ಕೆ ಹೋಲಿಸಿದ್ದಾರೆ. ಹಗರಣಕ್ಕೆ ಸಿಲುಕಿದ್ದ ಅವರನ್ನು ಕಾಂಗ್ರೆಸ್ ಮುಲಾಜಿಲ್ಲದೇ ಕೆಳಗಿಳಿಸಿದೆ. ಇವರ ಮೇಲಿನ ಆರೋಪಗಳು ಇದುವರೆಗೆ ಸಾಬೀತಾಗಿರಲಿಕ್ಕಿಲ್ಲ. ನಿಜ. ಆದರೆ, ಆರೋಪಗಳು ಬಂದ ಹಿನ್ನೆಲೆಯಲ್ಲಿ ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಯಿತು ಎಂದು ವಿವರಿಸಿದ್ದಾರೆ.
ಇನ್ನೂ ಕಷ್ಟ
ಆಮ್ ಆದ್ಮಿ ಪಕ್ಷ ಮತ್ತು ಒಂದು ಸರ್ಕಾರೇತರ ಸಂಸ್ಥೆ ಲೋಕಾಯುಕ್ತದಲ್ಲಿ ಪ್ರತ್ಯೇಕವಾಗಿ ದೂರು ದಾಖಲಿಸಿವೆ. ಅದಿವೇಶನಕ್ಕೂ ಮುನ್ನವೇ ಸಚಿವರು ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸಬೇಕಾಗುತ್ತದೆ ಎಂದು ಈ ನಾಯಕರು ಹೇಳಿದ್ದಾಗಿ ಡೆಕ್ಕನ್ ಕ್ರಾನಿಕಲ್ ವರದಿ ಮಾಡಿದೆ.