ಮಂಗಳೂರು: ಕಿನ್ನಿಗೋಳಿ ಪೇಟೆಯ ಹೃದಯ ಭಾಗದ ಎಸ್‍ಕೆ ಗೋಲ್ಡ್‍ಸ್ಮಿತ್ ಇಂಡಸ್ಟ್ರಿಯಲ್ ಬ್ಯಾಂಕ್ನಿಂದ ಶುಕ್ರವಾರ ರಾತ್ರಿ ಅಂದಾಜು 4 ಕೋಟಿ ರುಪಾಯಿಗೂ ಮಿಕ್ಕಿ ನಗ, ನಗದು ದೋಚಲಾಗಿದೆ. ರಾಜ್ಯ ಹೆದ್ದಾರಿಗೆ ತಾಗಿಕೊಂಡೇ ಇರುವ ಕಟ್ಟಡದ ಮೊದಲ ಮಹಡಿ-ಯಲ್ಲಿ ಬ್ಯಾಂಕ್ ಇದೆ. ಬ್ಯಾಂಕ್ ಹಿಂಭಾಗದಲ್ಲಿ ನೂತನ ಕಟ್ಟಡ ನಿರ್ಮಾಣವಾಗುತ್ತಿದೆ. ಕಳ್ಳರು ಹಿಂಬದಿಯಿಂದ ಶಟರ್ ಮುರಿದಿದ್ದಾರೆ. ನಂತರ ನಕಲಿ ಕೀ ಮೂಲಕ ಒಳಗಡೆಯ ಬಾಗಿಲ ಬೀಗ ತೆರೆದು ಒಳ ಪ್ರವೇಶಿಸಿ ನಗ, ನಗದು ದೋಚಿದ್ದಾರೆ. ಪರಾರಿಯಾಗುವ ಮುನ್ನ ಬ್ಯಾಂಕ್‍ನ ಸಿಸಿ ಟಿವಿಯನ್ನು ರೆಕಾರ್ಡರ್ ಸಮೇತ ಹೊತ್ತೊಯ್ದಿದ್ದಾರೆ. ಶನಿವಾರ ಬೆಳಗ್ಗೆ ಬ್ಯಾಂಕ್ ಸಮೀಪದ ಅಂಗಡಿಯವರು ಬಾಗಿಲು ತೆರೆಯಲು ಬಂದಾಗ ಘಟನೆ ಬೆಳಕಿಗೆ ಬಂದಿದೆ. ವಿಷಯ ಹರಡುತ್ತಿದ್ದಂತೆ ಗ್ರಾಹಕರ ದಂಡೇ ಬ್ಯಾಂಕ್ ಎದುರು ನೆರೆಯಿತು. ಬ್ಯಾಂಕ್‍ನಲ್ಲಿ ಚಿನ್ನದ ಅಡವು ಸಾಲಕ್ಕೆ ಅತೀ ಕಡಿಮೆ ಬಡ್ಡಿದರ ವಿಧಿಸಲಾಗುತ್ತಿದೆ. ಕೋಟಿಗಟ್ಟಲೆ ವಹಿವಾಟು ನಡೆಸುತ್ತಿರುವ ಈ ಬ್ಯಾಂಕಿನಲ್ಲಿ ಸೂಕ್ತ ಕಾವಲುಗಾರನಿಲ್ಲ. ಶುಕ್ರವಾರ ರಾತ್ರಿ ಸುರಿದ ಭಾರೀ ಸಿಡಿಲು ಮಳೆ ದರೋಡೆಗೆ ವರವಾಗಿದೆ. ಮೂಲ್ಕಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನದಳ ಬಂದಿದ್ದು, ಕಳ್ಳರು ಬಂದಿದ್ದ ಕಟ್ಟಡದ ಹಿಂದಿನ ದಾರಿಯಲ್ಲಿ ಸಾಗಿದ ಶ್ವಾನ ಕಿನ್ನಿಗೋಳಿ ರಾಜ್ಯ ಹೆದ್ದಾರಿಗೆ ಸೇರಿಕೊಂಡಿದೆ.