

ಬೆಂಗಳೂರು: ದೇಶಾದ್ಯಂತ ಗೋಮಾಂಸ ಸೇವನೆ, ನಿಷೇಧದ ಬಗ್ಗೆ ತೀವ್ರ ಚರ್ಚೆ ಆಗುತ್ತಿರುವ ಬೆನ್ನಲ್ಲೇ ಮಾಜಿ ಪ್ರಧಾನಿ ಎಚ್ .ಡಿ ದೇವೇಗೌಡ ಗೋಮಾಂಸ ಸೇವನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಅವರವರ ಆಹಾರ ಪದ್ಧತಿ ಅವರಿಗೆ ಸಂಬಂಧಪಟ್ಟ ವಿಷಯ. ಈ ವಿಚಾರದಲ್ಲಿ ಚರ್ಚೆ, ಹೊಡೆದಾಟ, ಗಲಾಟೆ ಸರಿಯಲ್ಲ. ಗೋ ಮಾಂಸ ತಿನ್ನೋರು ತಿನ್ನಲಿ, ಬೇಡ ಅನ್ನೋಕೆ ನಾವ್ಯಾರು? ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪತ್ರಕರ್ತರ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಜಾತಿ, ಧರ್ಮ, ತಿನ್ನುವ ಆಹಾರದ ವಿಷಯದಲ್ಲಿ ದೇಶ ಒಡೆಯೋದು ಸರಿಯಲ್ಲ. ಈ ಹಿಂದೆ ತಮಿಳುನಾಡಿನಲ್ಲಿ ದೇವರನ್ನು ಪೂಜಿಸಬೇಡಿ, ದೇವಸ್ಥಾನಕ್ಕೆ ಹೋಗಬೇಡಿ ಎಂದು ಪೆರಿಯಾರ್ ದೊಡ್ಡ ಚಳವಳಿಯನ್ನೇ ಮಾಡಿದ್ದರು. ಹಾಗಂತ ಅಲ್ಲಿನ ಜನ ದೇವಸ್ಥಾನಕ್ಕೆ ಹೋಗೋದನ್ನು ಬಿಟ್ಟಿದ್ದಾರಾ? ಎಂದು ಪ್ರಶ್ನಿಸಿದರು.
ಗೋ ಮಾಂಸ ತಿನ್ನುವವರು ತಿನ್ನುತ್ತಾರೆ. ಅವರವರ ಆಹಾರ ಪದ್ಧತಿ ಅನುಸರಿಸುತ್ತಾರೆ. ಹಾಗಂತ ಆಹಾರದ ವಿಚಾರದಲ್ಲಿ ರಾಜಕೀಯ, ಗೂಂಡಾಗಿರಿ ಸರಿಯಲ್ಲ ಎಂದರು. ಶ್ರೀಕೃಷ್ಣ ಹುಟ್ಟಿಲ್ಲ, ರಾಮ ಹುಟ್ಟಿಲ್ಲ. ರಾಮ ಯಾವ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಓದಿದ್ದಾನೆಎಂದೆಲ್ಲಾ ಪ್ರಶ್ನಿಸಿದ್ದಾರೆ. ಇಂತಹ ಚರ್ಚೆಯಿಂದ ಏನು ಪ್ರಯೋಜನವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.