ಕಾವೇರಿತು ನರ್ಸ್‍ಗಳ ಕಾಯಂ ಹೋರಾಟ

ಸೇವೆ ಕಾಯಂಗೆ ಆಗ್ರಹಿಸಿ ಸತತ 24 ದಿನಗಳಿಂದ ಅಹೋರಾತ್ರಿ ಮುಷ್ಕರ ನಡೆಸುತ್ತಿರುವ ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯದ (ಕಿಮ್ಸ್) ನರ್ಸ್ ಗಳ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on: 

ಬೆಂಗಳೂರು: ಸೇವೆ ಕಾಯಂಗೆ ಆಗ್ರಹಿಸಿ ಸತತ 24 ದಿನಗಳಿಂದ ಅಹೋರಾತ್ರಿ ಮುಷ್ಕರ ನಡೆಸುತ್ತಿರುವ ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯದ (ಕಿಮ್ಸ್) ನರ್ಸ್ ಗಳ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.

ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ ಸಂಘದ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾರಣ ಪರಿಸ್ಥಿತಿ ಉದ್ವಿಗ್ನವಾಗಿತ್ತು. ನಂತರ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿ ರೈತ ಸಂಘ ಮತ್ತು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಒಕ್ಕಲಿಗರ ಸಂಘಕ್ಕೆ ಬುಧವಾರ ಮುತ್ತಿಗೆ ಹಾಕಿ ಬೀಗ ಹಾಕಲು ಯತ್ನಿಸಿದರು. ಈ ವೇಳೆ ಕಿಮ್ಸ್ ನ ಕಾಯಂ ಸಿಬ್ಬಂದಿ ಪ್ರತಿಭಟನಾಕಾರರನ್ನು ತಡೆದಾಗ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು.

ಮುತ್ತಿಗೆಗೆ ಬಂದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಹಾಗಾಗಿ ಆಸ್ಪತ್ರೆ ಮುಂದೆ ಪರಿಸ್ಥಿತಿ ಉದ್ವಿಗ್ನಗೊಂಡಿತು. ಪೊಲೀಸರ ಕಾವಲಿದ್ದರೂ ಪರಿಸ್ಥಿತಿ ಕೈಮೀರಿದ್ದರಿಂದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಸ್ಥಳಕ್ಕೆ ಬಂದ ಹಿರಿಯ ಅಧಿಕಾರಿಗಳು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರೊಂದಿಗೆ ಮಾತುಕತೆ ನಡೆಸಿ ಸಮಾಧಾನಪಡಿಸಿದರು. ನಂತರ ಸಂಧಾನ ಯಶಸ್ವಿಯಾದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರ ನ್ನು ಸ್ಥಳದಿಂದ ವಾಪಸ್ ಕಳುಹಿಸಿದರು. ಬಳಿಕ ಪರಿಸ್ಥಿತಿ ಹತೋಟಿಗೆ ಬಂದಿತು.

ಮನವಿಗೆ ಕಿಮ್ಮತ್ತಿಲ್ಲದ್ದಕ್ಕೆ ಮುತ್ತಿಗೆ: 2010ನೇ ಸಾಲಿನಲ್ಲಿ ನೇಮಕವಾಗಿದ್ದ ನರ್ಸ್‍ಗಳ ವಜಾ ಆದೇಶ ಹಿಂಪಡೆಯಬೇಕು. ನರ್ಸ್‍ಗಳ ಸೇವೆ ಕಾಯಂ ಮಾಡಬೇಕು ಎಂದು ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಒಕ್ಕಲಿಗರ ಸಂಘದ ಅಧ್ಯಕ್ಷ ಅಪಾಜ್ಜಿಗೌಡರಿಗೆ ಮನವಿ ಮಾಡಿದ್ದರು. ಅಲ್ಲದೆ ಈ ಬಗ್ಗೆ ಮಾತುಕತೆಗೆ ಆಹ್ವಾನಿಸಿದ್ದರು. ಆದರೆ ಅಪ್ಪಾಜಿಗೌಡರು ಸಭೆಗೆ ಹಾಜರಾಗಿರಲಿಲ್ಲ. ಇದರಿಂದ ಅಸಮಾಧಾನಗೊಂಡಿದ್ದ ಕೋಡಿಹಳ್ಳಿ ಚಂದ್ರಶೇಖರ್, ಆದೇಶ ಹಿಂಪಡೆಯಲು ಗಡುವು ನೀಡಿದ್ದರು. ಕಿಮ್ಸ್ಆಡಳಿತ ಮಂಡಳಿ ಗಡುವು ಹಾಗೂ ಮನವಿಗೂ ಸೊಪ್ಪು ಹಾಕದೆ, ಸೇವೆ ಕಾಯಂ ಅಸಾಧ್ಯ ಎಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ತಮ್ಮ ಸಂಘ ಹಾಗೂ ಕನ್ನಡಪರ ಸಂಘಟನೆ ಕಾರ್ಯಕರ್ತರ ಜತೆ ಕಿಮ್ಸ್ ಗೆ ಮುತ್ತಿಗೆ ಹಾಕಿ ಬೀಗ ಹಾಕಲು ಯತ್ನಿಸಿದರು. ಸುದ್ದಿ ತಿಳಿದ ಕಾಯಂ ಸಿಬ್ಬಂದಿ ಸಂಘದ ಅಧ್ಯಕ್ಷ ವಿದ್ಯಾಶಂಕರ್ ಆಸ್ಪತ್ರೆ ಆವರಣ ಪ್ರವೇಶ ದ್ವಾರಕ್ಕೆ ಬೀಗ ಹಾಕಿಸಿದ್ದರು. ಅಲ್ಲದೇ, ಕೋಡಿಹಳ್ಳಿ ಚಂದ್ರಶೇಖರ್ ಆಸ್ಪತ್ರೆಯ ಒಳಗೆ ಪ್ರವೇಶಿಸದಂತೆ ಸಿಬ್ಬಂದಿ ತಡೆದರು.

ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ನಡೆದ ಪ್ರತಿಭಟನೆ, ವಾಗ್ವಾದದ ಘಟನೆ ಬಗ್ಗೆ ವರದಿಗೆ ತೆರಳಿದ್ದ ದೃಶ್ಯ ಮಾಧ್ಯಮದವರ ಮೇಲೆ ಅಲ್ಲಿನ ಸಿಬ್ಬಂದಿ ಹರಿಹಾಯ್ದರು. ಸಂಘದ ಅಧ್ಯಕ್ಷ ಅಪ್ಪಾಜಿಗೌಡ ಹಾಗೂ ಅವರ ಬೆಂಬಲಿಗರು ಕ್ಯಾಮೆರಾ ಕಿತ್ತುಕೊಳ್ಳಲು ಯತ್ನಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com