

ಬೆಂಗಳೂರು: ಪೂಜೆ ಮಾಡಿಸಿದರೆ ವಿದ್ಯಾಬುದ್ಧಿ ಬರುತ್ತೆ ಎಂದು ನಂಬಿದ ವಿದ್ಯಾರ್ಥಿನಿಯೊಬ್ಬಳು ಜ್ಯೋತಿಷಿಗೆ ಹಣ, ಚಿನ್ನಾಭರಣ ಸುರಿದು ಕಳೆದುಕೊಂಡಿದ್ದಾಳೆ.
ಪೂಜೆಯಿಂದಾಗಿ ನೆನಪಿನ ಶಕ್ತಿ ಹೆಚ್ಚಾಗಲಿಲ್ಲವೆಂದು ಗೊತ್ತಾದ ಮೇಲೆ ಜ್ಯೋತಿಷಿಯ ಕಪಟ ನಾಟಕದ ಬಗ್ಗೆ ಮನೆಯವರಿಗೆ ಹೇಳಿದ್ದಾಳೆ. ಹೋಗಿ ಹಣ, ಬಂಗಾರ ವಾಪಸ್ ಕೇಳಿದರೂ ಕೊಡದ ಜ್ಯೋತಿಷಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಅಂದಹಾಗೆ ಜ್ಯೋತಿಷಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ.
ಅಂದಹಾಗೆ ಜ್ಯೋತಿಷಿ ಗಣೇಶ(35 ) ಪೊಲೀಸರ ಅತಿಥಿ. ಮೋಸ ಹೋದ ವಿದ್ಯಾರ್ಥಿನಿ ಹೆಸರು ರಾಜಗೋಪಾಲಾನಗರ ಚೌಡೇಶ್ವರಿ ನಗರ ನಿವಾಸಿ ಚಂದನಾ(17). ಜ್ಯೋತಿಷಿ ಗಣೇಶ, ಈಕೆಗಷ್ಟೇ ಅಲ್ಲದೇ ಇನ್ನೂ ಹಲವರಿಗೆ ಇದೇ ರೀತಿ ಹೇಳಿ ಸುಲಿಗೆ ಮಾಡುತ್ತಿದ್ದ ಎಂದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಪರಿಹಾರಕ್ಕಾಗಿ ಸ್ವಾಮೀಜಿ ಮೊರೆ: ಚಂದನಾಗೆ ಎಷ್ಟೇ ವ್ಯಾಸಾಂಗ ಮಾಡಿದರೂ ವಿದ್ಯೆ ಹತ್ತುತ್ತಿರಲಿಲ್ಲ. ಇದರಿಂದ ಬೇಸತ್ತ ಆಕೆ, ಪೇಪರ್ ನಲ್ಲಿ ಬಂದ ಜಾಹೀರಾತು ನೋಡಿ ಸ್ವಾಮೀಜಿ ಬಳಿಗೆ ಹೋಗಿದ್ದಾಳೆ. ಓದಲು ಆಗುತ್ತಿಲ್ಲ, ಪರಿಹಾರ ಸೂಚಿಸಿ ಎಂದು ಕೇಳಿಕೊಂಡಿದ್ದಾಳೆ. ಬುದ್ದಿ ಶಕ್ತಿ ಹೆಚ್ಚಿಸಲು ವಿಶೇಷ ಪೂಜೆ ಮಾಡುತ್ತೇನೆ ಅದಕ್ಕಾಗಿ ಹಣ ತರುತ್ತೇನೆ ಎಂದು ಜ್ಯೋತಿಷಿ ಹೇಳಿದ್ದಾನೆ. ಬುದ್ಧಿಶಕ್ತಿ ಹೆಚ್ಚಿಸಿಕೊಳ್ಳಲು ಮುಂದಾದ ವಿದ್ಯಾರ್ಥಿನಿ ಹಣ ಹಾಗೂ ಆಭರಣ ನೀಡಿ ಆತನ ಬಳಿ ಪೂಜೆ ಮಾಡಿಸಿದ್ದಾಳೆ.
ಪೂಜೆಗಾಗಿ ಜ್ಯೋತಿಷಿ ವಸೂಲು ಮಾಡಿದ್ದು ಹಣ ಮತ್ತು 80 ಗ್ರಾಂ ಚಿನ್ನ. ಇದೆಲ್ಲಾ ಆದ ಮೇಲೆ ಎಚ್ಚೆತ್ತ ವಿದ್ಯಾರ್ಥಿನಿ ಜ್ಯೋತಿಷಿ ಬಳಿ ಹೋಗಿ ವಿಷಯ ತಿಳಿಸಿ ಹಣ ಮತ್ತು ಆಭರಣ ವಾಪಸ್ ನೀಡುವಂತೆ ಕೇಳಿಕೊಂಡಿದ್ದಳು ಆದರೆ ಆರೋಪಿ ಅದಕ್ಕೆ ನಿರಾಕರಿಸಿದ್ದ.