ಹುಬ್ಬಳ್ಳಿಗೆ ಬಂದಿಳಿದ ಸ್ಯಾಂಡಲ್ ವುಡ್ ತಾರೆಯರು

ಮಹದಾಯಿ ಹೋರಾಟಕ್ಕೆ ಈಗ ಮತ್ತಷ್ಟು ತಾರಾಬಲ ಬಂದಿದೆ. ಮಹದಾಯಿ ಹಾಗೂ ಕಳಸಾ-ಬಂಡೂರಿ ಯೋಜನೆಗಳ ಅನುಷ್ಠಾನಕ್ಕೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟವನ್ನು ಸಿನಿಮಾ ತಾರೆಯರೂ...
ಹುಬ್ಬಳ್ಳಿಗೆ ಆಗಮಿಸಿರುವ ಕನ್ನಡ ಚಿತ್ರ ತಾರೆಯರು
ಹುಬ್ಬಳ್ಳಿಗೆ ಆಗಮಿಸಿರುವ ಕನ್ನಡ ಚಿತ್ರ ತಾರೆಯರು
Updated on: 

ಹುಬ್ಬಳ್ಳಿ: ಮಹದಾಯಿ ಹೋರಾಟಕ್ಕೆ ಈಗ ಮತ್ತಷ್ಟು ತಾರಾಬಲ ಬಂದಿದೆ. ಮಹದಾಯಿ ಹಾಗೂ ಕಳಸಾ-ಬಂಡೂರಿ ಯೋಜನೆಗಳ ಅನುಷ್ಠಾನಕ್ಕೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟವನ್ನು ಸಿನಿಮಾ ತಾರೆಯರೂ ಬೆಂಬಲಿಸಿದ್ದು, ಇಂದು  ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ.

  ಚಿತ್ರನಟರಾದ ಭಾರತಿ ವಿಷ್ಣುವರ್ಧನ್, ಜಯಮಾಲಾ, ಶ್ರುತಿ, ದೊಡ್ಡಣ್ಣ, ಸುಂದರರಾಜ್, ಪ್ರಮಿಳಾ ಜೋಷಾಯ್, ರಾಕ್‍ಲೈನ್ ವೆಂಕಟೇಶ, ವಿಜಯ ರಾಘವೇಂದ್ರ, ಪೂಜಾ ಗಾಂಧಿ, ಅನಿರುದ್ಧ, ಹೇಮಾ ಚೌಧರಿ, ನಿಸಾಸಂ ಸತೀಶ್, ಅವಿನಾಶ್, ವಿಜಯಲಕ್ಷ್ಮಿ ಸಿಂಗ್ ಹುಬ್ಬಳ್ಳಿಗೆ ಬಂದಿದ್ದಾರೆ. ಭಾನುವಾರ ಬೆಳಗ್ಗೆ 11 ಗಂಟೆಗೆ ಹುಬ್ಬಳ್ಳಿಯ ಮೂರು ಸಾವಿರ ಮಠಕ್ಕೆ ತೆರಳುವ ಚಿತ್ರತಂಡ, ಅಲ್ಲಿ ಪೂಜೆ ಸಲ್ಲಿಸಲಿದ್ದಾರೆ. ನಂತರ ಸಾವಿರಾರು ರೈತರ ಜತೆಗೂಡಿ ಹುಬ್ಬಳ್ಳಿಯ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಿದ್ದಾರೆ. ಮೂರುಸಾವಿರ ಮಠದಿಂದ ಹೊರಡುವ ಮೆರವಣಿಗೆ ಪದ್ಮಾ ಟಾಕೀಸ್, ಕೊಪ್ಪಿಕರ ರಸ್ತೆ, ಲ್ಯಾಮಿಂಗ್ಟನ್ ರಸ್ತೆ ಮೂಲಕ ಹಾದು ಚನ್ನಮ್ಮ ವೃತ್ತ ತಲುಪಲಿದೆ. ಸಂಗೊಳ್ಳಿ ರಾಯಣ್ಣ ಹಾಗೂ ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡುವರು. ಬಳಿಕ ಚನ್ನಮ್ಮ ವೃತ್ತದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ನಟ-ನಟಿಯರು ಮಾತನಾಡಲಿದ್ದಾರೆ. ರಾಜಕಾರಣಿಗಳಿಗೆ ಬುದಿಟಛಿ ಕಲಿಸಿ: ನರಗುಂದದಲ್ಲಿ ಹೋರಾಟದ 59ನೇ ದಿನದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಚಿತ್ರನಟ ಶರಣ್, ರೈತರ ಸಂಕಷ್ಟಕ್ಕೆ ಸ್ಪಂದಿಸದ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸುವಂತೆ ರೈತರಿಗೆ ಕರೆ ನೀಡಿದ್ದಾರೆ. ರಂಗ ಕಲಾವಿದೆ ರಂಗನಟಿ ಸುಮತಿಶ್ರೀ ನವಲಿ ಹಿರೇಮಠ ಹಾಗೂ ಅವರ ಕಲಾ ತಂಡವೂ ಹೋರಾಟದ ವೇದಿಕೆಗೆ ಬಂದು ಬೆಂಬಲ ಸೂಚಿಸಿತು. ಆದಿಶಕ್ತಿ ಕಲಾ ತಂಡದ ಇಮಾಮಸಾಬ್ ವಲ್ಲೆಪ್ಪನವರ ನೇತೃತ್ವದಲ್ಲಿ ಕಲಾವಿದರು ಕ್ರಾಂತಿ ಗೀತೆಗಳನ್ನು ಹಾಡಿದರು.

ವಾರದ ಗಡವು: ಮಹದಾಯಿಗಾಗಿ 59 ದಿನಗಳಿಂದ ಹೋರಾಟ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ನಿಯೋಗ ತೆಗೆದುಕೊಂಡು ಹೋಗಿದ್ದು ಬಿಟ್ಟರೆ ಮತ್ತೇನೂ ಮಾಡಿಲ್ಲ. ವಾರದೊಳಗೆ ಇದರ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸಬೇಕು. ಇಲ್ಲವಾದರೆ ಹೋರಾಟದ ರೂಪ ಬದಲಿಸಬೇಕಾಗುತ್ತದೆ ಎಂದು ರೈತ ಸೇನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಎಚ್ಚರಿಸಿದ್ದಾರೆ. ಮಹದಾಯಿ ನದಿ ತಿರುವ ಹಾಗೂ ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಡಾ. ಪಂಡಿತ ಪುಟ್ಟರಾಜ್ ಗವಾಯಿಗಳ ಭಕ್ತ ಕಲಾವೃಂದದ ಸದಸ್ಯರು ವೇಷಭೂಷಣ ತೊಟ್ಟು ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ನವಲಗುಂದದಲ್ಲೂ ಸರಣಿ ಪ್ರತಿಭಟನೆ 31ನೇ ದಿನಕ್ಕೆ ಕಾಲಿಟ್ಟಿದೆ. ಧಾರವಾಡದಲ್ಲಿ ಅಂಜುಮನ್-ಇ-ಇಸ್ಲಾಂ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ರೈತ-ಕೃಷಿ ಕಾರ್ಮಿಕರ ಸಂಘಟನೆಗಳು ಪ್ರತಿಭಟನೆ ನಡೆಸಿ, ಪ್ರಧಾನಿ ಮೋದಿ ಪ್ರತಿಕೃತಿ ದಹಿಸಿದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com