

ಬೆಂಗಳೂರು; ದೂರು ದಾಖಲು ಅನುಚಿತ ವರ್ತನೆ ಪ್ರದರ್ಶಿಸಿದ ಎಂಬ ಆರೋಪದ ಮೇಲೆ ಖಾಸಗಿ ಬಸ್ ನಿರ್ವಾಹಕನ ವಿರುದ್ಧ ಯುವತಿಯೊಬ್ಬರು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೇರಳ ಮೂಲದ ಲಕ್ಷ್ಮಿ ಎಂಬುವರು ದೂರುದಾರರು. ಇವರು ಕುಂಬಳಗೋಡಿನ ಖಾಸಗಿ ಕಾಲೇಜಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿ. ಕಾರ್ಯ ನಿಮಿತ್ತ ಗೋವಾಗೆ ತೆರಳಿದ್ದ ಇವರು ಎಸ್‍ಆರ್ ಎಸ್ ಟ್ರಾವೆಲ್ಸ್‍ನಲ್ಲಿ ಶುಕ್ರವಾರ ಬೆಂಗಳೂರಿಗೆ ಪ್ರಯಾಣಿಸಿದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಯಶವಂತಪುರ ಬಳಿ ಬಸ್ ಬಂದಾಗ ಸಹ ಪ್ರಯಾಣಿಕರ ಎದುರೇ ನಿರ್ವಾಹಕ ಅನುಚಿತವಾಗಿ ವರ್ತಿಸಿದ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.
ಈತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಯುವತಿ ದೂರಿನ ಮೇರೆಗೆ ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿರುವ ಪೊಲೀಸರು ಸದ್ಯದಲ್ಲೇ ಆತನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಲಿದ್ದಾರೆ.