

ಬೆಂಗಳೂರು: ಕಾರುಗಳ ಮುಖಾಮುಖಿ ಡಿಕ್ಕಿಯಲ್ಲಿ ಓರ್ವ ಮೃತಪಟ್ಟು ಏಳು ಮಂದಿ ಗಾಯಗೊಂಡಿರುವ ಘಟನೆ ಶನಿವಾರ ಮುಂಜಾನೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚೋಳರಪಾಳ್ಯ ನಿವಾಸಿ ಮಹದೇವ(25) ಮೃತಪಟ್ಟವರು. ಸುಂಕದಕಟ್ಟೆ ಜನಪ್ರಿಯ ಅಪಾಟ್ರ್ ಮೆಂಟ್ ಬಳಿ ಇನೋವಾ ಮತ್ತು ಎಸ್ಟೀಂ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಎಸ್ಟೀಂ ಕಾರಿನ ಚಾಲಕನ ಪಕ್ಕದ ಆಸನದಲ್ಲಿ ಕುಳಿತ್ತಿದ್ದ ಮಹದೇವ ಅವರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಇನ್ನು ಚಾಲಕ ಹಾಗೂ ಹಿಂದಿನ ಆಸನದಲ್ಲಿದ್ದ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿದ್ದು, ಇನೋವಾ ಕಾರಿನ ಐವರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಎಸ್ಟೀಂ ಕಾರು ಏಕಮುಖ ರಸ್ತೆಯಲ್ಲಿ ಸಂಚರಿಸಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮಾಕ್ಷಿಪಾಳ್ಯ ನಿವಾಸಿ ಗುಡ್ಡತಿಮ್ಮಯ್ಯ ಎ.ಕುಮಾರ್ ಹಾಗೂ ನಾಲ್ವರು ಸ್ನೇಹಿತರು ಮಾಗಡಿ ರಸ್ತೆ ಹುಲಿಕುಂಟೆಯ ನ್ಯಾಷನಲ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ
ಕಾರ್ಯಕ್ರಮ ಮುಗಿಸಿಕೊಂಡು ತಮ್ಮ ಇನೋವಾ ಕಾರಿನಲ್ಲಿ ಬೆಂಗಳೂರಿಗೆ ವಾಪಸಾಗುತ್ತಿದ್ದರು.
ಈ ವೇಳೆ ಏಕಮುಖ ರಸ್ತೆಯಲ್ಲಿ ವೇಗವಾಗಿ ನುಗ್ಗಿದ ಎಸ್ಟೀಂ ಕಾರು ಇನೋವಾಗೆ ಡಿಕ್ಕಿ ಹೊಡೆದ ಪರಿಣಾಮ ಇನೋವಾ ಕಾರಿನಲ್ಲಿದ್ದ ಎಚ್.ಅಶೋಕ್(40), ನರೇಂದ್ರಕುಮಾರ್(47), ಎ.ಕೆ.ರಾಮಣ್ಣ945), ಭೈರಪ್ಪ(48) ಹಾಗೂ ಚಾಲಕ ಗುಡ್ಡತಿಮ್ಮಯ್ಯ ಎ. ಕುಮಾರ್ ಸಣ್ಣಪುಟ್ಟದಾಗಿ ಗಾಯಗೊಂಡಿದ್ದಾರೆ. ಗಂಭೀರವಾಗಿ ಗೊಂಡಿರುವ ಎಸ್ಟೀಂ ಕಾರಿನ ಚಾಲಕ ಅರುಣ್ ಕುಮಾರ್ ಮತ್ತು ನವೀನ್ ಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದರು.