

ಬೆಂಗಳೂರು: ಹೊನ್ನೇರಿನಿಂದ ಕೃಷಿ ಆರಂಬಿsಸಿದ್ದ ಕೃಷಿಕ ವರ್ಗ ಸುಗ್ಗಿ ಪರ್ವ ಕಾಲದಲ್ಲಿ ಬಂದು ನಿಂತಿದ್ದಾರೆ. ಸೂರ್ಯ ತನ್ನ ಪಥವನ್ನು ಬದಲಿಸುವ ಸಂಕ್ರಮಣ ಕಾಲ ಆರಂಭವಾಗುತ್ತಿದೆ.
ಇನ್ನೇನು ಮತ್ತೆ ಬೆಂಗಳೂರಿನ ಜನತೆಯೂ ಈ ಸುಂದರ ಸಂದರ್ಭದಲ್ಲಿ ಸಂಭ್ರಮಿಸಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಸಂಕ್ರಾಂತಿಗೆ ದಿನಗಣನೆ ಆರಂಭವಾಗಿದ್ದು ಜನರು ಸಡಗರದೊಂದಿಗೆ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಕೊಳ್ಳುವ ಭರಾಟೆಯಲ್ಲಿದ್ದಾರೆ. ಎಲ್ಲರ ಮನೆ-ಮನಗಳಲ್ಲಿ ಸಂಕ್ರಾಂತಿ ಸಂಭ್ರಮ ನೆಲೆಸಿದೆ. ನಗರದಲ್ಲೂ ಎಳ್ಳು-ಬೆಲ್ಲ ಹಬ್ಬದ ತಯಾರಿ ಜೋರಾಗಿದ್ದು ಮಾರುಕಟ್ಟೆಗಳತ್ತ ಜನ ತೆರಳಿ ಸಾಮಗ್ರಿಗಳನ್ನು ಖರೀದಿಸುತ್ತಿರುವುದು ಸಹಜವಾಗಿದೆ.
ಕಳೆದ ಕೆಲ ದಿನಗಳಿಂದ ಬೀಳುತ್ತಿರುವ ಚಳಿಯ ನಡುವೆಯೂ ಜನ ಖರೀದಿಗೆ ಮುಂದಾಗುತ್ತಿದ್ದಾರೆ. ನಗರದ ಪ್ರಮುಖ ರಸ್ತೆಗಳ ಇಕ್ಕೆಲಗಳು, ಕೃಷ್ಣರಾಜೇಂದ್ರ ಮಾರುಕಟ್ಟೆ, ಮಲ್ಲೇಶ್ವರಂ, ಗಾಂಧಿಬಜಾರ್, ಜಯನಗರ ಬಿಡಿಎ ಕಾಂಪ್ಲೆಕ್ಸ್, ಮತ್ತಿಕೆರೆ, ಎನ್.ಆರ್. ಕಾಲೊನಿ ಮುಂತಾದ ಭಾಗಗಳಲ್ಲಿ ಕಬ್ಬು, ಹೂವು, ಹಣ್ಣು ಮತ್ತು ತೆಂಗಿನಕಾಯಿ ಮಾರಾಟ ಜೋರಾಗಿದೆ. ತರಕಾರಿ ಬೆಲೆ ಏರಿಕೆ ಹಾದಿಯಲ್ಲಿದೆ. ಹೂವು ಮಾಮೂಲಿ ದರಕ್ಕಿಂತ ಕೊಂಚ ಹೆಚ್ಚಾಗಿದೆ. ಆದರೆ ಹಬ್ಬಕ್ಕೆ ಅಗತ್ಯವಾದ ಕಡಲೆ ಬೀಜ, ಗೆಣಸು, ಅವರೆಕಾಯಿ ಹಬ್ಬದ ಹಿನ್ನೆಲೆಯಲ್ಲಿ ಕೊಂಚ ಏರಿಕೆಯಾಗಿದ್ದು ತಲೆ ಕೆಡಿಸಿಕೊಳ್ಳುವಂಥದ್ದೇನಿಲ್ಲ. ಅಗತ್ಯ ಧಾನ್ಯಗಳ, ಹೂ ಹಣ್ಣುಗಳ ದರ ಗಗನಕ್ಕೇರಿರುವ ನಡುವೆ ಸಂಕ್ರಾಂತಿ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಲೆ ಏರಿಕೆಯ ನಡುವೆಯೇ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಕಬ್ಬು, ಗೆಣಸು, ಕಡಲೇಕಾಯಿ ಮಾರಾಟ ಭರದಿಂದ ಸಾಗಿದೆ. ಸಂಕ್ರಾಂತಿ ಹಬ್ಬಕ್ಕೆ ಅಗತ್ಯವೆನಿಸಿದ ಅಕ್ಕಿ, ಬೇಳೆ, ಧಾನ್ಯಗಳ ಬೆಲೆಯೊಂದಿಗೆ ಹೂವು ಹಣ್ಣಿನ ಬೆಲೆಗಳು ಸಹ ಗಗನಕ್ಕೇರಿವೆ.
ಕಾಕಡ, ಕನಕಾಂಬರ ಮೊದಲಾದ ಹೂವಿನ ಬೆಲೆಗಳು ಕೆಜಿಗೆ ರು.700 ವರೆಗಿದ್ದರೆ, ಸೇವಂತಿಗೆ, ಬಟನ್ಸ್ ಮೊದಲಾದ ಹೂವಿನ ಬೆಲೆಗಳು ರು.300 ರವರೆಗೂ ಇವೆ. ತರಕಾರಿಗಳ ಬೆಲೆಗಳು ಸಹ ಹಬ್ಬಕ್ಕು ಮುನ್ನವೇ ಏರಿಕೆಯಾಗಿವೆ.
ಬೆಲೆ ಎಷ್ಟಿದೆ?: ಜೋಡಿ ಕಬ್ಬಿಗೆ ರು.80 ರಿಂದ ರು.130, ಎಳ್ಳು ಕೆಜಿಗೆ ರು.260 ರವರೆಗೆ ಮಾರಾಟವಾಗುತ್ತಿದೆ. ಅವುಗಳ ಬಣ್ಣ ಮತ್ತು ಗಾತ್ರ ಆಧರಿಸಿ ಬೆಲೆ ನಿರ್ಧಾರ ಮಾಡಲಾಗಿದೆ.
ಕೆ.ಆರ್. ಮಾರುಕಟ್ಟೆಯಿಂದ ಬೆಳಗ್ಗೆ ತಂದ ಕಬ್ಬುಗಳನ್ನು ಚಿಲ್ಲರೆ ವ್ಯಾಪಾರಿಗಳು ಗಾಡಿ ಮೇಲೆ ಇಟ್ಟುಕೊಂಡು ಮನೆ ಮನೆ ಬಾಗಿಲಿಗೆ ತೆರಳಿ ಮಾರುತ್ತಿದ್ದಾರೆ. ಹೂವು-ಹಣ್ಣುಗಳ ಬೆಲೆಯಲ್ಲೇನೂ ಕಡಿಮೆಯಿಲ್ಲ. ದರಗಳು ಈ ಬಾರಿಯೂ ಏರಿಕೆಯಾಗಿವೆ. ಹಬ್ಬಕ್ಕೆ ಎರಡು ದಿನ ಇರುವಂತೆಯೇ ಅಗತ್ಯ ವಸ್ತುಗಳ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಹೂವು-ಹಣ್ಣಿನ ಬೆಲೆಗಳು ಗಗನಕ್ಕೇರಿವೆ. ಹಬ್ಬದ ಹಿಂದಿನ ದಿನ ಇನ್ನೂ ಬೆಲೆಗಳು ಇನ್ನಷ್ಟು ಏರುವ ಸಾಧ್ಯತೆಯಿದೆ. ಕನಕಾಂಬರ ಹೂವು ಕೆ.ಜಿ.ಗೆ ರು.500ದಿಂದ ರು.700 ದಾಟಿದೆ.
ಗುಂಡು ಮಲ್ಲಿಗೆ ರು.100 ರಿಂದ ರು.150, ಮಳ್ಳೆ ಹೂವು, ಕಾಕಡವೂ ರು.400ಕ್ಕೆ ಏರಿದೆ. ಪರಿಮಳ ಬೀರುವ ಕೇದಗೆ ಒಂದು ದಿಂಡಿಗೆ ರು.50ರಿಂದ ರು.100ವರೆಗೆ ಮಾರಾಟವಾಗುತ್ತಿದೆ. ಹಣ್ಣುಗಳ ಬೆಲೆ ಜತೆಗೆ ಬೇಳೆ ಕಾಳುಗಳ ಬೆಲೆಯಲ್ಲೂ ಏರಿಕೆಯಾಗಿದೆ.