ನಕಲಿ ತಾಯಿಗೆ ಮಗು ಕೊಡಲು ಒಪ್ಪಲಿಲ್ಲ ಕೋರ್ಟ್

ವೇಶ್ಯಾವಾಟಿಕೆ ದಂಧೆ ನಡೆಸುವ ಮನೆಯ ಮೇಲೆ ನಡೆದ ದಾಳಿಯಲ್ಲಿ ಪತ್ತೆಯಾಗಿ ಪೊಲೀಸರಿಂದ ರಕ್ಷಿಸಲ್ಪಟ್ಟಿದ್ದ ಮಗುವನ್ನು ನಕಲಿ ತಾಯಿಯೊಂದಿಗೆ ಕಳುಹಿಸುವುದಕ್ಕೆ ನಿರಾಕರಿಸಿರುವ ಕೋರ್ಟ್...
(ಸಂಗ್ರಹ ಚಿತ್ರ)
(ಸಂಗ್ರಹ ಚಿತ್ರ)
Updated on: 

ವೇಶ್ಯಾವಾಟಿಕೆ ದಂಧೆ ನಡೆಸುವ ಮನೆಯಲ್ಲಿ ಸಿಕ್ಕಿದ್ದ ಮಗು ತನ್ನದೆಂದು ಸುಳ್ಳು ಹೇಳಿದ ತಾಯಿಗೆ ಸಾಕ್ಷಿ ಕೇಳಿದ ಕೋರ್ಟ್

ಬೆಂಗಳೂರು: ವೇಶ್ಯಾವಾಟಿಕೆ ದಂಧೆ ನಡೆಸುವ ಮನೆಯ ಮೇಲೆ ನಡೆದ ದಾಳಿಯಲ್ಲಿ ಪತ್ತೆಯಾಗಿ ಪೊಲೀಸರಿಂದ ರಕ್ಷಿಸಲ್ಪಟ್ಟಿದ್ದ ಮಗುವನ್ನು ನಕಲಿ ತಾಯಿಯೊಂದಿಗೆ ಕಳುಹಿಸುವುದಕ್ಕೆ ನಿರಾಕರಿಸಿರುವ ಕೋರ್ಟ್, ಸಂದಿಗ್ಧ ಪರಿಸ್ಥಿತಿಯಲ್ಲಿದ್ದ ಮಗುವಿನ ರಕ್ಷಣೆಗೆ ಧಾವಿಸಿದೆ.

ತಾನೇ ಮಗುವಿನ ತಾಯಿಯಾಗಿದ್ದು, ನವಜೀವನ ಖಾಸಗಿ ಸಂಸ್ಥೆಯು ಅಕ್ರವಾಗಿ ವಶದಲ್ಲಿರಿಸಿಕೊಂಡಿರುವ ಮಗುವನ್ನು ತನ್ನ ವಶಕ್ಕೆ ನೀಡಬೇಕೆಂದು ಕೋರಿ ಮಹಿಳೆಯೊಬ್ಬರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೋಹನ್ ಶಾಂತನಗೌಡರ ಮತ್ತು ನ್ಯಾ.ಕೆ.ಎನ್.ಫಣೀಂದ್ರ ಅವರಿದ್ದ ನ್ಯಾಯಪೀಠ, ಮಗುವನ್ನು ವಶಕ್ಕೆ ಪಡೆಯಲು ಇಷ್ಟು ದಿನ ಬಾರದೆ, ಈಗ ಅರ್ಜಿ ಸಲ್ಲಿಸಲು ಕಾರಣವೇನು ಎಂದು ಪ್ರಶ್ನಿಸಿತು. ಅಲ್ಲದೆ, ಮಗು ತನ್ನದೇ ಎನ್ನುವುದಕ್ಕೆ ಡಿಎನ್ ಎ ಪರೀಕ್ಷೆಯ ದಾಖಲೆ ಸಲ್ಲಿಸಿ ಸಂಬಂಧಿಸಿದ ನ್ಯಾಯಾಲಯದ ಆದೇಶ ಪಡೆದ ಬಳಿಕ ಮಗುವನ್ನು ವಶಕ್ಕೆ ಪಡೆಯಬಹುದು ಎಂದು ಸೂಚಿಸಿ ಅರ್ಜಿಯನ್ನು ವಜಾಗೊಳಿಸಿತು.

ಅಗತ್ಯವಿದ್ದಲ್ಲಿ ಹತ್ತಿರದ ಸಂಬಂಧಿಕರು ವಾರಕ್ಕೊಮ್ಮೆ ಮಗುವನ್ನು ಭೇಟಿ ಮಾಡಬಹುದು. ಆಟದ ಸಾಮಾನುಗಳು, ಬಟ್ಟೆ ಮತ್ತು ಆಹಾರ ಪದಾರ್ಥಗಳನ್ನು ನೀಡಬಹುದು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ

ಕೆಂಗೇರಿ ಪೊಲೀಸರು ತಮ್ಮ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ವೇಶ್ಯಾವಾಟಿಕೆ ನಡೆಯುತ್ತಿರುವ ಮಾಹಿತಿ ಆಧರಿಸಿ ಮನೆಯೊಂದರ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ 11 ವರ್ಷದ ರುಕ್ಮಿಣಿ (ಹೆಸರನ್ನು ಬದಲಿಸಲಾಗಿದೆ) ಎಂಬ ಹೆಣ್ಣು ಮಗುವನ್ನು ವಶಕ್ಕೆ ಪಡೆದ ಪೊಲೀಸರು, ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ನೀಡಿದ್ದರು. ಈ ಸಮಿತಿಯು ಮಗುವನ್ನು ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೆ ಒಪ್ಪಿಸಿದ್ದು, ನವಜೀವನ ಎಂಬ ಸ್ವಯಂ ಸೇವಾ ಸಂಸ್ಥೆ ಅಧೀನದಲ್ಲಿ ಶಿಕ್ಷಣ ಕೊಡಿಸುತ್ತಿದ್ದರು.

ರೇಜೋವತಿ ಎಂಬುವರು ಈ ಮಗುವನ್ನು ನವಜೀವನ ಸಂಸ್ಥೆ ಅಕ್ರವಾಗಿ ವಶದಲ್ಲಿರಿಸಿಕೊಂಡಿದ್ದು, ತನ್ನ ವಶಕ್ಕೆ ನೀಡಬೇಕೆಂದು ಕೋರಿದ್ದರು. ವೇಶ್ಯಾವಾಟಿಕೆಯಲ್ಲಿ ಮಗುವಿನ ರಕ್ಷಣೆ  ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ನ್ಯಾಯಮೂರ್ತಿಗಳ ಕೊಠಡಿಯಲ್ಲಿ ಅರ್ಜಿ ವಿಚಾರಣೆ ನಡೆಸಿತು. ಈ ವೇಳೆ ಮಗುವನ್ನು ನಿಮ್ಮ ತಾಯಿಯೊಂದಿಗೆ ಹೋಗುವೆಯಾ? ಎಂದು ಪ್ರಶ್ನಿಸಿದರು. ಇದಕ್ಕೆ ಮಗು ಇವರು ಯಾರು ಎನ್ನುವುದೇ ಗೊತ್ತಿಲ್ಲ. ನಾನು ಇವರೊಂದಿಗೆ ಹೋಗುವುದಿಲ್ಲ ಎಂದು ಹೇಳಿದೆ.

ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಮಗುವನ್ನು ರೇಜೋವತಿಯೊಂದಿಗೆ ಕಳುಹಿಸುವುದಕ್ಕೆ ನಿರಾಕರಿಸಿತು. ಮಗು ನಿಮ್ಮದೇ ಎನ್ನುವುದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿ ವಶಕ್ಕೆ ಪಡೆಯಬಹುದು ಎಂದು ಸೂಚಿಸಿತು.

ಮಕ್ಕಳ ಕಲ್ಯಾಣ ಸಮಿತಿ ನಮಗೆ ನೀಡಿದ ಮಗುವನ್ನು ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಪೋಷಿಸುತ್ತಿದ್ದೇವೆ. ಹೀಗಿರುವಾಗ ಅಪರಿಚಿತ ಮಹಿಳೆಯೊಬ್ಬರು ಬಂದು ಮಗು ತನ್ನದು ಎಂದು ಹೇಳಿದರೆ ಹೇಗೆ ಕಳುಹಿಸಲು ಸಾಧ್ಯ? ಹೈ ಕೋರ್ಟ್ ತೀರ್ಪಿನಿಂದಾಗಿ ಮಗುವಿನ ಶೈಕ್ಷಣಿಕ ಭವಿಷ್ಯಕ್ಕೆ ಸಹಕಾರಿಯಾಗಲಿದೆ.
- ನಿರ್ದೇಶಕರು, ನವಜೀವನ ಸಂಸ್ಥೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com