ಮಕ್ಕಳ ಅಭಿವೃದ್ಧಿಗೆ ಬೇಸಿಗೆ ಶಿಬಿರ ಸಹಕಾರಿ
ಕಪ್ರ ವಾರ್ತೆ, ಚಿಕ್ಕಮಗಳೂರು, ಏ.5
ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಬೇಸಿಗೆ ಶಿಬಿರ ಸಹಕಾರಿ. ಮಕ್ಕಳ ಶಿಬಿರಗಳ ಸಾಧಕ-ಬಾಧಕಗಳ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಇಂತಹ ಶಿಬಿರಗಳು ಸೂಕ್ತ ಉತ್ತರ ನೀಡುತ್ತವೆ ಎಂದು ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಹೇಳಿದ್ದಾರೆ.
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರದಿಂದ 10 ದಿನಗಳ ಕಾಲ ಆಯೋಜಿಸಿರುವ ಉಚಿತ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿ, ನಗರ ಪ್ರದೇಶಗಳಲ್ಲಿ ದೊಡ್ಡ ಕಟ್ಟಡಗಳಲ್ಲಿ ಈಜುಕೊಳ, ಕಂಪ್ಯೂಟರ್, ಕ್ರಿಕೆಟ್ ಸೇರಿದಂತೆ ಭಾರಿ ಶುಲ್ಕದ ಮಕ್ಕಳ ಶಿಬಿರಗಳು ಸಾಮಾನ್ಯವಾಗಿವೆ. ಒಂದು ರೀತಿಯಲ್ಲಿ ಇವು ಮಕ್ಕಳ ಬಾಲ್ಯದ ಸಹಜ ಚಟುವಟಿಕೆಗಳನ್ನು ಮೊಟಕುಗೊಳಿಸುತ್ತಿವೆ. ಮಕ್ಕಳ ಶಿಬಿರಗಳು ವಾಣಿಜ್ಯೀಕರಣಗೊಳ್ಳುತ್ತಿರುವ ದಿನಗಳಲ್ಲಿ ಸಾಮಾನ್ಯ ಶಾಲಾ ಕಟ್ಟಡದಲ್ಲಿ ಉಚಿತ ಶಿಬಿರದ ಮೂಲಕ ನೈತಿಕ ಪ್ರಜ್ಞೆ ಜೊತೆಗೆ ಮಕ್ಕಳ ಸಹಜ ಚಟುವಟಿಕೆಗಳಿಗೆ ಪೂರಕವಾದ ಇಂತಹ ಶಿಬಿರಗಳು ವ್ಯಾಪಕತೆ ಪಡೆದರೆ ಉತ್ತಮ ಎಂದರು.
ಹಳ್ಳಿಯ ಮನೆ: ಹಿಂದಿನ ದಿನಗಳಲ್ಲಿ ರಜೆ ಬಂದಾಗ ಅಜ್ಜ-ಅಜ್ಜಿಯರ ಹಳ್ಳಿಯ ಮನೆಯಲ್ಲಿ ಮಜಾ ಅನುಭವಿಸುತ್ತಿದ್ದ ಸವಿನೆನಪುಗಳನ್ನು ಹಂಚಿಕೊಂಡ ಖಾದರ್ ಶಾ, ಇಂದಿನ ಒತ್ತಡದ ಅದರಲ್ಲೂ ನಗರ ಪ್ರದೇಶದ ಬದುಕಿನಲ್ಲಿ ಸಹಜ ಬಾಲ್ಯದ ಆಟೋಟಗಳ ಅನುಭವ ಶಿಬಿರದಲ್ಲಾಗಬೇಕು. ಇಲ್ಲಿ ಕಲಿತ ಒಳ್ಳೆಯ ಸಂಗತಿಗಳನ್ನು ಜೀವನದಲ್ಲಿ ಅನುಸರಿಸುವುದರಿಂದ ಒಳಿತಿದೆ ಎಂದು ಹೇಳಿದರು.
ಪ್ರತಿಷ್ಠಾನದ ಅಧ್ಯಕ್ಷೆ ಗೌರಮ್ಮ ಬಸವೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಓದು-ಬರಹಗಳಲ್ಲೆ ಹೆಚ್ಚಿನ ಸಮಯ ಕಳೆಯುವ ನಗರದ ಮಕ್ಕಳಿಗೆ, ಬೇಸಿಗೆ ಶಿಬಿರ ಹೊಸ ಅನುಭವವನ್ನು ಕಟ್ಟಿಕೊಡುತ್ತದೆ. ಪರಸ್ಪರ ಪ್ರೀತಿ- ವಿಶ್ವಾಸ ಬೆಳೆಯುವುದರ ಜೊತೆಗೆ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿಸುತ್ತದೆ ಎಂದರು.
ಯುರೇಕಾ ಅಕಾಡೆಮಿ ಪ್ರಾಂಶುಪಾಲ ದೀಪಕ್ ದೊಡ್ಡಯ್ಯ ವ್ಯಕ್ತಿತ್ವ ಬದಲಾವಣೆಗೆ ಪೂರಕ ಅಂಶಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿ, ಉನ್ನತವಾದ ಕನಸು ಕಾಣುವುದರ ಜೊತೆಗೆ ಅದರ ಸಾಕಾರಕ್ಕೂ ವಿಶೇಷ ಪ್ರಯತ್ನ ಅಗತ್ಯ. ಒಳ್ಳೆಯ ಹವ್ಯಾಸ ಮತ್ತು ಅಭ್ಯಾಸ ಬೆಳೆಸಿಕೊಳ್ಳಬೇಕೆಂದರು. ಸಾಹಿತಿ ಚಟ್ನಳ್ಳಿ ಮಹೇಶ್, ಸೂರಿ ಶ್ರೀನಿವಾಸ ಉಪಸ್ಥಿತರಿದ್ದರು. ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಸ್ವಾಗತಿಸಿದರು.
ಕಾರ್ಯದರ್ಶಿ ಸುಮಿತ್ರಾ ಶಾಸ್ತ್ರಿ ವಂದಿಸಿದರು. ಲೋಕೇಶ್ವರಾಚಾರ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಶಾಲೆಗಳ 45ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

