ಚುನಾವಣೆ ಅಕ್ರಮ ತಡೆಗೆ ಮುಂದಾದ ಸಿರಿಗೆರೆ ಶ್ರೀ
ಕ.ಪ್ರ.ವಾರ್ತೆ,ಚಿಕ್ಕಮಗಳೂರು, ಏ.7
ಚುನಾವಣೆಗಳಲ್ಲಿ ನಡೆಯುವ ಅಕ್ರಮ ಮತ್ತು ಭ್ರಷ್ಟಚಾರ ತಡೆಗಟ್ಟಿ ನ್ಯಾಯಸಮ್ಮತವಾಗಿ ನಡೆಸುವಂತೆ ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಸಿರಿಗೆರೆಯ ತರಳಬಾಳು ಮಠಾಧೀಶರಾದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿನೂತನ ಪ್ರಯೋಗ ಆರಂಭಿಸಿದ್ದಾರೆ.
ಈ ಬಾರಿ ಚಿಕ್ಕಮಗಳೂರು ವಿಧಾನಸಭಾ ಚುನಾವಣೆಯಲ್ಲಿ ಈ ಪ್ರಯೋಗ ಮಾಡಲಾಗುತ್ತಿದೆ. ಕಳೆದ ಮಾ. 28ರಂದು ಚಿಕ್ಕಮಗಳೂರು ಕ್ಷೇತ್ರದ ಸಂಭವನೀಯ ಅಭ್ಯರ್ಥಿಗಳು ಸಿರಿಗೆರೆಯ ತರಳಬಾಳು ಮಠಕ್ಕೆ ತೆರಳಿ, ಈ ಚುನಾವಣೆಯಲ್ಲಿ ಯಾವುದೇ ರೀತಿಯಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ಮಾಡುವುದಿಲ್ಲ ಎಂದು ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದರು.
ಈ ವಿಷಯವನ್ನು ಶ್ರೀಗಳು ಮತದಾರರಿಗೆ ತಿಳಿಸಲು ಭಾನುವಾರದಂದು ಸಮಯ ನಿಗದಿಪಡಿಸಿದ್ದರು. ಅದರಂತೆ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡ, ಅಭ್ಯರ್ಥಿಗಳ ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಸುಮಾರು ನಾಲ್ಕು ಗಂಟೆಗೂ ಹೆಚ್ಚು ಕಾಲ ಸುದೀರ್ಘ ಸಭೆ ನಡೆಸಿದರು.
ಎಲ್ಲರಿಗೂ ಗೌರವ: ಸಭೆ ಆರಂಭಗೊಂಡ ಪ್ರಥಮದಲ್ಲಿ ಶ್ರೀಗಳು ಮಾತನಾಡಿ, ನಮ್ಮ ಸಂವಿಧಾನ ಧರ್ಮ ನಿರಪೇಕ್ಷ ಹಾಗೂ ಜಾತ್ಯತೀತವಾದುದು. ಯಾವುದೇ ಧರ್ಮವನ್ನು ಉಪೇಕ್ಷೆ ಮಾಡಬಾರದು. ಎಲ್ಲಾ ಧರ್ಮಗಳಿಗೆ ಗೌರವ ನೀಡುವುದು ನಮ್ಮ ಸಂವಿಧಾನದ ಮೂಲ ಉದ್ದೇಶ. ಹೆಚ್ಚು ಜನಸಂಖ್ಯೆ ಹೊಂದಿರುವವರಿಗೆ ಮಣೆ ಹಾಕುವುದು, ಕಡಿಮೆ ಜನಸಂಖ್ಯೆ ಹೊಂದಿರುವ ಜನಾಂಗವನ್ನು ನಿರ್ಲಕ್ಷಿಸಬಾರದು. ಬಡವ ಇರಲಿ, ಶ್ರೀಮಂತ ಇರಲಿ ಎಲ್ಲರನ್ನೂ ಸಮಾನವಾಗಿ ನೋಡುವುದು ಸಂವಿಧಾನದ ಮೂಲ ಧ್ಯೇಯ.
ಪರಿಪೂರ್ಣ, ಅಪರೂಪದ ಸಂವಿಧಾನ ನಮ್ಮ ದೇಶದಲ್ಲಿದೆ. ಆದರೆ, ಆಗಿನ ಮಹನೀಯರು ಹೋರಾಟ, ಬಲಿದಾನ ಮಾಡಿ ಸ್ವಾತಂತ್ರ ತಂದುಕೊಟ್ಟಿದ್ದಾರೆ. ಧ್ಯೇಯಕ್ಕೆ ಅನುಗುಣವಾಗಿ ಸಾಧ್ಯವಾಗುವ ಮಟ್ಟಿಗೆ ಅಪರೂಪದ ನಿಯಮಗಳನ್ನು ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಿಸ್ವಾರ್ಥ ಭಾವನೆ ಇತ್ತು.
ಕ್ರಮೇಣ ಅದು ಕ್ಷೀಣಗೊಂಡು ಸ್ವಾರ್ಥ ಭಾವನೆ ಹೆಚ್ಚು ಬೆಳೆದಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಚಾರ ಮಾಡಿದಂತೆ. ಈಗೀನ ರಾಜಕೀಯ ಧುರೀಣರ ನಡವಳಿಕೆ ಊಹೆ ಮಾಡಲು ಸಾಧ್ಯವಾಗದ ಮಟ್ಟಿಗೆ ಬೆಳೆದಿದೆ. ಈ ಬೆಳವಣಿಗೆ ಸಂವಿಧಾನ ರಚನೆ ಸಂದರ್ಭದಲ್ಲಿ ಗಮನಕ್ಕೆ ಬಂದಿರಲಿಲ್ಲ ಎಂದೆನಿಸುತ್ತದೆ.
ಅಶಾಂತಿ ತಾಂಡವ: ಭ್ರಷ್ಟಾಚಾರದ ವಿರುದ್ಧ ದೇಶದಲ್ಲಿ ದೊಡ್ಡ ಕೂಗು ಕೇಳಿ ಬರುತ್ತಿದೆ. ಇದನ್ನು ತಡೆಯುವ ಕೆಲಸ ಆಗಬೇಕಾಗಿದೆ. ಸ್ವಾರ್ಥ ರಾಜಕೀಯ ಕಾರಣದಿಂದಾಗಿ ಅಶಾಂತಿ ತಾಂಡವವಾಡುತ್ತಿದೆ. ಮೌಲ್ಯ ಅಪಮೌಲ್ಯವಾಗುತ್ತಿದೆ. ನಮ್ಮ ದೇಶದ ಕಾನೂನು, ನಿಯಮಗಳು ಬೇರೆ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಇಲ್ಲ. ಯೂರೋಪ್ ಮತ್ತು ಅಮೆರಿಕಾ ರಾಷ್ಟ್ರಗಳಲ್ಲಿ ಪಕ್ಷಾಂತರಿಗಳು ಇಲ್ಲ.
ಇದೀಗ ನಮ್ಮ ದೇಶದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಬೇರೆ ದೇಶಗಳಲ್ಲಿ ಇಲ್ಲದ ಕಾನೂನು ಮಾಡುವ ಅವಶ್ಯಕತೆ ಇದೆ. ಯಾವ ದೇಶದಲ್ಲಿ ಪಕ್ಷದ ಮುಖಂಡರಿಗೆ ಶಿಸ್ತು ಬರುವುದಿಲ್ಲವೋ ಅಲ್ಲಿ ಪ್ರಜಾಪ್ರಭುತ್ವ ಯಶಸ್ವಿ ಆಗುವುದಿಲ್ಲ. ರಾಜಕೀಯ ಶುದ್ಧೀಕರಣ ಮಾಡಬೇಕಾಗಿದೆ. ಇದಕ್ಕಾಗಿ 1994ರಲ್ಲಿ 5 ಕ್ಷೇತ್ರಗಳಲ್ಲಿ ಈ ಪ್ರಯತ್ನ ನಡೆದಿತ್ತು. ಅದರಲ್ಲಿ ಯಶಸ್ವಿ ಕಾಣಲಾಯಿತು.
ಹಳ್ಳಿ ಹೈಕಮಾಂಡ್ ಆಗಬೇಕು. ದಿಲ್ಲಿ ಹೈಕಮಾಂಡ್ ಆಗಬಾರದು. ಭ್ರಷ್ಟಾಚಾರ ನಿರ್ಮೂಲನೆ ಆಗದೆ ಸ್ವಚ್ಛ ಆಡಳಿತ ಸಾಧ್ಯವಿಲ್ಲ. ಅದುದರಿಂದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಸಂಭವನೀಯ ಅಭ್ಯರ್ಥಿಗಳು ಮಾ.28ರಂದು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಅದರಲ್ಲಿ ಯಾವುದೇ ಭ್ರಷ್ಟಚಾರ ಮಾಡುವುದಿಲ್ಲ ಎಂದು ಹೇಳಿ ಸಹಿ ಮಾಡಿದ್ದಾರೆ. ಮದುವೆ ಆಗಿಲ್ಲ ಎಂದು ಹೇಳಬಾರದೆಂಬ ಉದ್ದೇಶದಿಂದ ಪೋಟೋ ತೆಗೆಸುತ್ತಾರೆ.
ಅದೇ ರೀತಿಯಲ್ಲಿ ಸಂಭವನೀಯ ಅಭ್ಯರ್ಥಿಗಳ ಪೋಟೋ ತೆಗೆಸಲಾಗಿದೆ. ಈ ಪ್ರಯೋಗ ಯಾವ ಪಕ್ಷದ ಪರ ಅಥವಾ ವಿರುದ್ಧ ಅಲ್ಲ. ನಮ್ಮ ಸಂವಿಧಾನ ಎತ್ತಿ ಹಿಡಿದು, ಕೊಳಕು ರಾಜಕಾರಣ ದೂರ ಮಾಡುವುದು ಇದರ ಮೂಲ ಉದ್ದೇಶವಾಗಿದೆ. ಮತದಾರರು ನೈತಿಕ ಮೌಲ್ಯ ಎತ್ತಿ ಹಿಡಿಯಬೇಕು ಎಂದರು.
ಬಹಿರಂಗ ಸಭೆ ತೀರ್ಮಾನ: ಇದೇ ಸಂದರ್ಭ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿರುವ ಅಭ್ಯರ್ಥಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮಾತನಾಡಿದರು. ಬಳಿಕ ಅಭ್ಯರ್ಥಿಗಳು ಎರಡನೇ ಬಾರಿಗೆ ಪ್ರಮಾಣ ಮಾಡಿದರು. ಏ.21ರಂದು ಚಿಕ್ಕಮಗಳೂರಿನಲ್ಲಿ ಸಾರ್ವಜನಿಕ ಬಹಿರಂಗ ಸಭೆ ನಡೆಸುವ ತೀರ್ಮಾನ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ, ವಿಧಾನಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ, ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಧರ್ಮೇಗೌಡ, ಕಾಂಗ್ರೆಸ್ ಅಭ್ಯರ್ಥಿ ಶಾಂತೇಗೌಡ, ಬಿಎಸ್ಪಿ ಅಭ್ಯರ್ಥಿ ಕೆ.ಟಿ. ರಾಧಾಕೃಷ್ಣ, ಪಕ್ಷದ ಮುಖಂಡರಾದ ಎಸ್.ಎಲ್. ಭೋಜೇಗೌಡ, ಪ್ರೇಮ್ಕುಮಾರ್, ಸಿ.ಎಚ್. ಲೋಕೇಶ್, ಪಿ.ವಿ. ಲೋಕೇಶ್, ರೇಣುಕಾರಾಧ್ಯ, ಸ್ನೇಕ್ ನರೇಶ್, ಕಲ್ಲೇಶ್, ಶಂಕರಲಿಂಗೇಗೌಡ ಇದ್ದರು.
ಚಿಕ್ಕಮಗಳೂರಿನಿಂದ ಸ್ನೇಕ್ ನರೇಶ್ ಸ್ಪರ್ಧೆ
ವೃತ್ತಿ- ಹಾವು ಹಿಡಿಯುವುದು.
ಈವರೆಗೆ ಹಿಡಿದಿರುವ ಹಾವುಗಳ ಸಂಖ್ಯೆ- 15,000.
ಇವರು ಈ ಬಾರಿ ಚಿಕ್ಕಮಗಳೂರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.
ನಗರದ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಸಿರಿಗೆರೆಯ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಚಿಕ್ಕಮಗಳೂರು ಕ್ಷೇತ್ರದ ಸಂಭವನೀಯ ಅಭ್ಯರ್ಥಿ ಹಾಗೂ ರಾಜಕೀಯ ಪಕ್ಷಗಳ ಮುಖಂಡರ ಸಭೆಯ ವೇದಿಕೆಯಲ್ಲಿ ಆಸಿನರಾಗಿದ್ದ ಸ್ನೇಕ್ ನರೇಶ್ ತಾವು ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿದ್ದು ಹೀಗೆ.
ಅಭಿಮಾನಿಗಳಿಗೆ ನನ್ನ ನಮಸ್ಕಾರ...,
ನಾನು, 10 ವರ್ಷಗಳಿಂದ ಹಾವು ಹಿಡಿಯುವ ಕೆಲಸ ಮಾಡುತ್ತಿದ್ದೇನೆ. ಈವರೆಗೆ 15 ಸಾವಿರ ಹಾವುಗಳನ್ನು ಹಿಡಿದಿದ್ದೇನೆ. ಹಾವು ಕಚ್ಚಿದ್ದರಿಂದ ಬೆರಳು ಕಳೆದುಕೊಂಡಿದ್ದೇನೆ. 3 ವರ್ಷದ ಹಿಂದೆ ಹಾವು ಹಿಡಿಯುವುದು ತಮ್ಮ ವೃತ್ತಿ ಎಂದು ತಿಳಿದು ಹೆಂಡತಿ, ಮಕ್ಕಳು ನನ್ನಿಂದ ದೂರ ಹೋಗಿದ್ದರು. ಹಾವು ಹಿಡಿದಿದ್ದಕ್ಕಾಗಿ ಮತ ಕೊಟ್ಟು ಋಣ ತೀರಿಸಿ. ನಾನು ಚುನಾವಣಾ ಪ್ರಚಾರಕ್ಕೆ ಹೋದರೆ 500 ರಿಂದ 1000 ಜನ ನನ್ನೊಂದಿಗೆ ಬರುತ್ತಾರೆ. ಸೋತರೆ ಹಾವು ಹಿಡಿಯುವ ಕೆಲಸ ಮುಂದುವರೆಸುತ್ತೇನೆ. ಗೆದ್ದರೆ ಜನ ಸೇವೆ ಮಾಡುತ್ತೇನೆ.
ನನ್ನಲ್ಲಿ ಮೊಬೈಲ್ ಇದೆ. ಅದರ ಸ್ವಿಚ್ ಆಫ್ ಮಾಡೋದಿಲ್ಲ. ದಿನದ 24 ಗಂಟೆ ಸೇವೆ ಸಲ್ಲಿಸುತ್ತಿದ್ದೇನೆ.
ಹೀಗೆ ಹೇಳುತ್ತಿದ್ದಂತೆ ಅವರ ಮೊಬೈಲ್ ರಿಂಗಾಯ್ತು, ಯಾರೂ ಹಾವು ಹಿಡಿಯುವುದಕ್ಕಾಗಿ ಪೋನ್ ಮಾಡಿರಬಹುದು ಎಂದು, ತಮ್ಮ ಮಾತನ್ನು ಮುಂದುವರೆಸಿ, ಇತ್ತೀಚೆಗೆ ನಾಗೇನಹಳ್ಳಿಗೆ ಹಾವು ಹಿಡಿಯಲು ಹೋಗಿದ್ದಾಗ ಅಲ್ಲಿನ ಜನರು ನನ್ನ ಪರವಾಗಿ ಚುನಾವಣಾ ಪ್ರಚಾರ ಮಾಡಿದರು ಎಂದು ಹೇಳಿದರು.
ಆಗ ಶ್ರೀಗಳು ಮಾತನಾಡಿ, ನಾವೆಲ್ಲಾ ಇಲ್ಲಿ ಸೇರಿರುವುದು ಹಾವು ಹಿಡಿಯಲು ಎಂದರು.
ದೋಷರೋಪಣೆ ಪರಸ್ಪರ ತೀವ್ರವಾಗಿದೆ. ತನಿಖಾ ಸಂಸ್ಥೆ ನಾವಲ್ಲ. ಪರ- ವಿರೋಧ ಹೇಳಿಕೆ ನೀಡಿದರೆ ಕೊಳಕು ರಾಜಕೀಯದಲ್ಲಿ ನಾವು ಸೇರಿದಂತಾಗುತ್ತದೆ. ಅಕ್ರಮಗಳನ್ನು ತಡೆಯಲು ಎಲ್ಲಾ ಪಕ್ಷದವರಿಗೆ ತಲಾ 21 ಜನರಿರುವ ಸಮಿತಿಯನ್ನು ರಚನೆ ಮಾಡುವಂತೆ ತಿಳಿಸಿದ್ದೇನೆ. ಆ ಕೆಲಸವೂ ಆಗಿದೆ. ನಿಮ್ಮ ನಿಮ್ಮ ಪಕ್ಷದವರನ್ನು ನಿಯಂತ್ರಿಸಲು ಹದ್ದಿನ ಕಣ್ಣಿಡಿ, ಚುನಾವಣಾ ಆಯೋಗಕ್ಕೆ ತಿಳಿಸಿ. ಯಾವುದಾದರೂ ಅಕ್ರಮ ಕಂಡು ಬಂದರೆ ಘಟನಾ ಸ್ಥಳಕ್ಕೆ ಖುದ್ದಾಗಿ ಹೋಗಿ ಖಂಡಿಸಿ.
-ಸಿರಿಗೆರೆ ಶ್ರೀಗಳು
ಗುರುಗಳ ಆಶಯದಂತೆ ನಡೆದುಕೊಳ್ಳಲಾಗುವುದು. ಕ್ಷೇತ್ರದಲ್ಲಿ ಅಪಪ್ರಚಾರ ನಡೆಯುತ್ತಿದೆ, ಇದು ಸರಿಯಲ್ಲ. ನಿಮ್ಮ ನಿರ್ದೇಶನದಂತೆ ನ್ಯಾಯಬದ್ಧವಾಗಿರುತ್ತೇನೆ. ಯಾವುದೇ ದೂರುಗಳು ಗಮನಕ್ಕೆ ಬಂದರೆ ಪರಿಶೀಲಿಸಿ, ಪರಾಮರ್ಶಿಸಿ ನೋಡಬೇಕು.
-ಸಿ.ಟಿ. ರವಿ,
ಉನ್ನತ ಶಿಕ್ಷಣ ಸಚಿವ
ನಾವು ಪ್ರಮಾಣ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷದಿಂದ ಅಕ್ರಮ ನಡೆದಿದ್ದೆಯಾದರೆ ನಮ್ಮ ಪಕ್ಷದ ಅಭ್ಯರ್ಥಿ ಶಾಂತೇಗೌಡರು ಚುನಾವಣಾ ಕಣದಿಂದ ಹಿಂದಕ್ಕೆ ಸರಿಯಲಿದ್ದಾರೆ.
- ಎಂ.ಎಲ್. ಮೂರ್ತಿ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು
ಅಧಿಕಾರ ವಂಚಿತರಾದವರಿಗೆ ಅಧಿಕಾರ ಸಿಗುವ ದಿಕ್ಸೂಚಿ ಇದಾಗಿದೆ. ಸಂವಿಧಾನವೇ ನಮ್ಮ ಚುನಾವಣಾ ಪ್ರಣಾಳಿಕೆ.
- ಕೆ.ಟಿ. ರಾಧಾಕೃಷ್ಣ
ಬಿಎಸ್ಪಿ ಅಭ್ಯರ್ಥಿ
ಚುನಾವಣೆಯಲ್ಲಿ ಅಕ್ರಮ ನಡೆಯಬಾರದೆಂದರೆ, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ದಿನದಿಂದ ಎಲ್ಲಾ ರಾಜಕೀಯ ಪಕ್ಷಗಳ ಪ್ರಮುಖ 150ಕ್ಕೂ ಹೆಚ್ಚು ಕಾರ್ಯಕರ್ತರು ಕ್ಷೇತ್ರವನ್ನು ಬಿಡಬೇಕು.
- ಎಸ್.ಎಲ್. ಬೋಜೇಗೌಡ
ಜೆಡಿಎಸ್ ಮುಖಂಡ
ಸಿರಿಗೆರೆ ಶ್ರೀಗಳ ಎದುರು ಪ್ರಮಾಣ ಮಾಡಲಾಗಿದೆ. ಬೆಂಕಿಯ ಮೇಲೆ ಕೈ ಇಟ್ಟು ಪ್ರಮಾಣ ಮಾಡಿದ್ದೇವೆ ಎಂಬುದನ್ನು ಮರೆಯಬಾರದು.
- ಸಿ.ಎಚ್. ಲೋಕೇಶ್.
ಕೆಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಸುಳ್ಳು ಪ್ರಚಾರ ನಡೆಯುತ್ತಿದೆ. ಹಣ, ಹೆಂಡ ಕೊಡುವವರನ್ನು ಮತದಾರರು ತಿರಸ್ಕರಿಸಬೇಕು.
- ಪ್ರೇಮ್ಕುಮಾರ್
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಸಾತ್ವಿಕ ಅಸಹಾಯಕತೆಗೆ ಅವಕಾಶ ನೀಡಬಾರದು. ಪ್ರಮಾಣ ಮಾಡಿದ್ದೀರಾ, ಅದರಂತೆ ನಡೆದುಕೊಳ್ಳಬೇಕು.
- ಪಿ.ವಿ. ಲೋಕೇಶ್,
ಸಿಪಿಐ ರಾಜ್ಯ ಕಾರ್ಯದರ್ಶಿ
ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಬೇರೆಯವರಿಗೆ ಕಾಣುವುದಿಲ್ಲ ಎಂದುಕೊಂಡರೆ ನಮ್ಮಂತಹ ಮುಟ್ಟಳು ಬೇರೆ ಯಾರೂ ಇಲ್ಲ. ಇದಕ್ಕೆ ಭಗವಂತನೆ ಉತ್ತರ ನೀಡಬೇಕು. ಸೋಲು ಕಂಡರೂ ಪರವಾಗಿಲ್ಲ, ಮಾತಿಗೆ ಕದಿಯುವುದಿಲ್ಲ, ಭ್ರಷ್ಟಚಾರ ಕೊನೆಯಾಗಬೇಕು. ಹಿಂಬಾಲಕರು ತಪ್ಪು ಮಾಡಿದರೆ ಅದರ ಹೊಣೆಯನ್ನು ನಾವೇ ಹೊರಬೇಕು.
-ಎಸ್.ಎಲ್. ಧರ್ಮೇಗೌಡ
ಜೆಡಿಎಸ್ ಅಭ್ಯರ್ಥಿ
ಹಣ, ಹೆಂಡ ಹಂಚಲು ಅವಕಾಶ ನೀಡುವುದಿಲ್ಲ. ನ್ಯಾಯ ಸಮ್ಮತವಾಗಿ ಚುನಾವಣೆಯನ್ನು ಎದುರಿಸಲಾಗುವುದು.
- ಶಾಂತೇಗೌಡ
ಕಾಂಗ್ರೆಸ್ ಅಭ್ಯರ್ಥಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

