ರೈತರ ಮನವೊಲಿಸಿ ಸಾಲ ವಸೂಲಾತಿ
ಕ.ಪ್ರ. ವಾರ್ತೆ, ಕಡೂರು, ಏ.13
ತಾಲೂಕು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿ ಬೀರೂರಿನ ಗುರುಸಿದ್ದಪ್ಪ ಅವಿರೋಧವಾಗಿ ಆಯ್ಕೆಯಾದರು.
ನಂತರ ಅವರು ಮಾತನಾಡಿ, ಬರಗಾಲ ಇರುವ ಹಿನ್ನೆಲೆಯಲ್ಲಿ ರೈತರ ಮನವೊಲಿಸಿ ಸಾಲ ವಸೂಲಾತಿಗೆ ಕ್ರಮ ಕೈಗೊಂಡು ರೈತರು ಮತ್ತು ಬ್ಯಾಂಕಿನ ಸೇತುವೆಯಾಗಿ ಕಾರ್ಯ ನಿರ್ವಹಿಸಿ ರೈತರ ಅಭಿವೃದ್ಧಿಗೆ ದುಡಿಯುತ್ತೇನೆ ಎಂದರು.
ಬ್ಯಾಂಕ್ ಸಭಾಂಗಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಹಿರಿಯ ಶೇರುದಾರ ಹನುಮಂತಪ್ಪ ಮಾತನಾಡಿ, ಗುರುಸಿದ್ದಪ್ಪನವರನ್ನು ಅವಿರೋಧ ಆಯ್ಕೆ ಮಾಡಿ ಒಂದೇ ಮನೆಯವರಂತೆ ನಡೆದುಕೊಳ್ಳಲಾಗಿದೆ. ರೈತರ ಹಿತಕ್ಕಾಗಿ ದುಡಿಯುವ ಈ ಕ್ಷೇತ್ರದಲ್ಲಿ ಸಂಕಷ್ಟದಲ್ಲಿರುವ ರೈತರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ನೂತನ ಅಧ್ಯಕ್ಷರು ಕೆಲಸ ಮಾಡಲಿ ಎಂದರು.
ಆದ್ಯತೆ ಮೇಲೆ ಸಾಲ: ನಿರ್ದೇಶಕ ಕಲ್ಮರುಡಪ್ಪ, ಕೆ.ಎಚ್. ರಂಗನಾಥ್, ನಟರಾಜ್, ಯರದಕೆರೆ ರಾಜಪ್ಪ, ಶೆಟ್ಟಿಹಳ್ಳಿ ರಾಮಪ್ಪ ಮಾತನಾಡಿ, ಬ್ಯಾಂಕ್ ಮತ್ತು ರೈತರ ಹಿತಾಸಕ್ತಿ ಗಣನೆಗೆ ತೆಗೆದುಕೊಂಡು ನಿರ್ದೇಶಕರೊಂದಿಗೆ ಅಧ್ಯಕ್ಷರು ಕರ್ತವ್ಯ ನಿರ್ವಹಿಸಬೇಕು. ಈ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷ ಗುರುಸಿದ್ದಪ್ಪನವರು ಸ್ಥಿತಿವಂತ ರೈತರು ಹಾಗೂ ಶೇರುದಾರರಿಂದ ಹೆಚ್ಚಿನ ಠೇವಣಿ ಸಂಗ್ರಹಿಸಿ ನಂತರ ಸಂಕಷ್ಟದಲ್ಲಿರುವ ರೈತರಿಗೆ ಆದ್ಯತೆ ಮೇರೆಗೆ ಸಾಲ ನೀಡಲು ಕ್ರಮ ಕೈಗೊಳ್ಳಬೇಕು ಎಂದರು.
ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ಎನ್. ಚಂದ್ರಶೇಖರ್ ಮಾತನಾಡಿ, ಸಾಲ ವಸೂಲಾತಿ ಸಮಯದಲ್ಲಿಯೇ ನೂತನ ಅಧ್ಯಕ್ಷರ ಆಯ್ಕೆ ಅನಿವಾರ್ಯವಾದರೂ ಬ್ಯಾಂಕು ಜಿಲ್ಲೆಯಲ್ಲಿಯೇ ಪ್ರಗತಿಪರ ಬ್ಯಾಂಕಾಗಿರುವುದು ಹೆಮ್ಮೆಯ ಸಂಗತಿ. ಸಾಲ ವಿತರಣೆಗೆ ಅವಕಾಶ ಸಿಗದೇ ಇರುವ ಸಮಯದಲ್ಲಿ ಬ್ಯಾಂಕಿನಿಂದ ರು. 30 ಲಕ್ಷ ಬಂಗಾರದ ಸಾಲ ವಿತರಿಸಲಾಗಿದೆ. ಮುಂದಿನ ಜೂನ್ ನಂತರ ತಾಲೂಕಿನ ರೈತರಿಗೆ ಬಂಗಾರದ ಸಾಲ ವಿಸ್ತರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಉಪಾಧ್ಯಕ್ಷ ತಿಮ್ಮಯ್ಯ, ನಿರ್ದೇಶಕ ಕಲ್ಲೇಶಪ್ಪ, ಮಲ್ಲೇಶಪ್ಪ, ಶ್ರೀಮತಿ ರುದ್ರಮ್ಮ, ಜಡೆ ಮಲ್ಲಪ್ಪ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಮಹೇಶ್ ಒಡೆಯರ್, ಬೀರೂರು ಪುರಸಭಾ ಸದಸ್ಯ ವಿಜಯೇಂದ್ರ ಕುಮಾರ್, ಹಾಲಪ್ಪ, ನಂಜುಂಡಸ್ವಾಮಿ ಸಿಬ್ಬಂದಿ ಅನಿಲ್ ಕುಮಾರ್, ಮಂಜುನಾಥ್, ದತ್ತಾತ್ರೇಯ, ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

