ಚಿಕ್ಕಮಗಳೂರು

ಮತದಾರರಿಂದ ಬಿಜೆಪಿಗೆ ತಕ್ಕ ಪಾಠ: ಎಸ್.ಎಂ. ಕೃಷ್ಣ

Published On :

ಕ.ಪ್ರ.ವಾರ್ತೆ, ಕೊಪ್ಪ, ಏ.28:
ರಾಜ್ಯದಲ್ಲಿ ಬಿಜೆಪಿ ನಾಯಕರ ಆಂತರಿಕ ಕಲಹ ಮತ್ತು ಭ್ರಷ್ಚಾಚಾರದಿಂದ 5 ವರ್ಷದ ಅಧಿಕಾರದ ಅವಧಿಯಲ್ಲಿ 3 ಜನ ಮುಖ್ಯಮಂತ್ರಿಗಳು ರಾಜ್ಯವನ್ನು ಅಳಿದ್ದು, ಇದರಿಂದ ಬೇಸತ್ತ ಮತದಾರರು ಈ ಬಾರಿ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹೇಳಿದರು.
ಭಾನುವಾರ ಪಟ್ಟಣದಲ್ಲಿ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡರ ಪರ ಮತಯಾಚನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, 1994 ರಲ್ಲಿ ಕಾಂಗ್ರೆಸ್‌ನಲ್ಲಿ ಇದೇ ರೀತಿ ವಾತವರಾಣ ಸೃಷ್ಟಿಯಾಗಿದ್ದರಿಂದ ಮತದಾರ ಬೇಸತ್ತು ಬೇರೆ ಪಕ್ಷಕ್ಕೆ ಬಹುಮತ ನೀಡುವ ಮೂಲಕ ಕಾಂಗ್ರೆಸ್‌ಗೆ ಆ ಚುನಾವಣೆಯಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವ ಸ್ಥಿತಿ ಬಂದಿತ್ತು ಎಂದರು.
ರಾಜ್ಯದಲ್ಲಿ ತನ್ನದೇ ಛಾಪು: ಶೃಂಗೇರಿ ಕ್ಷೇತ್ರ ರಾಜ್ಯದಲ್ಲಿ ತನ್ನದೇ ಛಾಪು ಮೂಡಿಸಿದೆ. ಈ ಕ್ಷೇತ್ರದಿಂದ ಯಾವ ಪಕ್ಷದ ಅಭ್ಯರ್ಥಿ ಗೆದ್ದು ವಿಧಾನಸಭೆ ಮೇಟ್ಟಿಲೇರುತ್ತಾರೋ ಆ ಪಕ್ಷ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ ಎಂಬ ಜನರ ಮಾತಿದೆ.
ಇದಕ್ಕೆ ಪೂರಕವಾಗಿ ಈ ಕ್ಷೇತ್ರದ ಕಾಂಗ್ರೇಸ್‌ನ ಎಲ್ಲಾ ಟಿಕೆಟ್ ಆಕಾಂಕ್ಷಿಗಳೂ ಪಕ್ಷದ ಆದರ್ಶಕ್ಕೆ ಬೆಲೆಕೊಟ್ಟು ಒಟ್ಟು ಗೂಡಿ ಪಕ್ಷ ಕಟ್ಟುವ ದೃಷ್ಟಿಯಿಂದ ಹಾಗೂ ರಾಜೇಗೌಡರನ್ನು ಗೆಲ್ಲಿಸುವ ನಿಟ್ಟಿನಲ್ಲಿ ದುಡಿಯುತ್ತಿದ್ದಾರೆ ಎಂದರು.
1998ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಲು ನನಗೆ ಅವಕಾಶ ಮಾಡಿಕೊಟ್ಟಿದ್ದರಿಂದ ರಾಜ್ಯಕ್ಕೆ ಮಾಹಿತಿ ಮತ್ತು ತಂತ್ರಜ್ಞಾನವನ್ನು ತಂದು ಕೈಗಾರಿಕೊದ್ಯಮಿಗಳು ಬಂಡವಾಳ ಹೂಡುವಂತೆ ಮಾಡಿ ಲಕ್ಷಾಂತರ ಜನ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಿದ್ದರಿಂದ ಇಂದು ಬೆಂಗಳೂರು ಐ.ಟಿ,ಬಿ.ಟಿ ಕ್ಷೇತ್ರದಲ್ಲಿ ವಿಶ್ವಮಟ್ಟದಲ್ಲಿ ಸೆಡ್ಡು ಹೊಡೆದು ನಿಲ್ಲುವಂತಾಗಿದೆ ಎಂದರು.
ಬಿಜೆಪಿಗೆ ತಕ್ಕ ಪಾಠ: ಸಂಸದ ಜಯಪ್ರಕಾಶ್ ಹೆಗ್ಡೆಯವರು ರಾಜ್ಯದ ಅರ್ಥಿಕ ಪರಿಸ್ಥಿತಿ ಮತ್ತು ಅರ್ಥವ್ಯವಸ್ಥೆಯನ್ನು ಹದಗೆಡಿಸಿದ ಬಿಜೆಪಿ ನಾಯಕರುಗಳು, ರಾಜ್ಯ ಸರ್ಕಾರದ ಆದಾಯಕ್ಕಿಂತ ಹೆಚ್ಚು ಬಜೆಟ್ ಮಂಡನೆ ಮಾಡುವ ಮೂಲಕ ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿದ್ದ ಸಾಲಕ್ಕಿಂತ ದುಪ್ಪಟ್ಟು ಹೆಚ್ಚು ಸಾಲ ಮಾಡಿ, ರಾಜ್ಯದ ಸಂಪತ್ತನ್ನು ಕೊಳ್ಳೆಹೊಡೆದು ರಾಜ್ಯವನ್ನು ದುಃಸ್ಥಿತಿಗೆ ತಳ್ಳಿದ್ದಾರೆ. ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಜಿಲ್ಲಾ ಬ್ಲಾಕ್  ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಮೂರ್ತಿ ವಹಿಸಿದ್ದರು.
ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ, ಮುಖಂಡ ಮಾಜಿ ಶಾಸಕ ಬೇಗಾನೆ ರಾಮಯ್ಯ, ಎಚ್.ಜಿ. ವೆಂಕಟೇಶ್, ಎಚ್.ಎಂ. ನಟರಾಜ್, ಸಚಿನ್ ಮೀಗಾ, ಬಿ.ಸಿ. ಗೀತಾ, ಅಂಶುಮಂತ್, ಕೆ.ಜಿ. ಶೋಭಿಂತ್,ಪ್ರಜಾ ಪರೀಷತ್ ವೇದಿಕೆ ಮುಖ್ಯಸ್ಥ ಸುಧೀರ್ ಕುಮಾರ್  ಮರೊಳ್ಳಿ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.