ಚಿಕ್ಕಮಗಳೂರು

ಶ್ರದ್ಧಾಭಕ್ತಿಯಿಂದ ನಾಗರ ಪಂಚಮಿ ಆಚರಣೆ

Published On :

ಚಿಕ್ಕಮಗಳೂರು: ಅಣ್ಣ ತಂಗಿಯರ ಹಬ್ಬವೆಂದೆ ಕರೆಯಲಾಗುವ ನಾಗರ ಪಂಚಮಿ ಹಬ್ಬವನ್ನು ಕಾಫಿ ಕಣವೆ ಚಿಕ್ಕಮಗಳೂರಿನಲ್ಲಿ ಭಾನುವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಹಬ್ಬದ ಪ್ರಯುಕ್ತ ನಗರದ ವಿವಿಧ ದೇವಾಲಯಗಳಲ್ಲಿ ನಸುಕಿನಲ್ಲಿ ಕುಟುಂಬ ಸಮೇತರಾಗಿ ತೆರಳಿದ ಭಕ್ತರು ಅಲ್ಲಿನ ನಾಗದೇವತೆ ವಿಗ್ರಹಕ್ಕೆ ಮತ್ತು ಹುತ್ತಕ್ಕೆ ಹಾಲೆರೆದು ಪೂಜೆ ಸಲ್ಲಿಸಿದರು. ಬ್ರಾಹ್ಮಣ ಸಮುದಾಯದ ಮನೆಗಳಲ್ಲಿ ಹುತ್ತದ ಮಣ್ಣಿನಿಂದ ನಾಗ ದೇವತೆ ವಿಗ್ರಹವನ್ನು ಮಾಡಿ ಅದನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.
ಇದೇ ವೇಳೆ ಅಕ್ಕ, ತಂಗಿ ಮತ್ತು ಅಣ್ಣ ತಮ್ಮಂದಿರುವ ಪರಸ್ಪರ ಹಾಲೆರೆದು ಶುಭಾ ಕೋರಿದರು. ಸುಬ್ರಹ್ಮಣ್ಯ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ವಿಶೇಷ ಪೂಜೆ ಪುನಸ್ಕಾರ ನಡೆಯಿತು. ವಾಡಿಕೆಯಂತೆ ಸುರಿಯಬೇಕಾಗಿದ್ದ ಮಳೆ ಕಳೆದ ನಾಲ್ಕು ದಿನಗಳಿಂದ ಬಿಡುವು ನೀಡಿರುವ ಕಾರಣ, ಭಕ್ತರು ಮಳೆಯಲ್ಲಿ ನೆನೆಯದೆ ನಿರಾತಂಕವಾಗಿ ಹಬ್ಬವನ್ನು ಆಚರಿಸಿದರು.
ರಂಭಾಪುರೀ ಪೀಠದಲ್ಲಿ ನಾಗರ ಪಂಚಮಿ: ವೀರಶೈವ ಪಂಚಪೀಠಗಳಲ್ಲಿ ಪ್ರಮುಖವಾದ ಬಾಳೆಹೊನ್ನೂರಿನ ರಂಭಾಪುರೀ ಪೀಠದಲ್ಲಿ ವಾರ್ಷಿಕ ನಾಗರ ಪಂಚಮಿಯನ್ನು ಶ್ರದ್ಧಾ ಭಕ್ತಿಯಿಂದ ಭಾನುವಾರ ಆಚರಿಸಲಾಯಿತು. ರಂಭಾಪುರೀ ಮಠಾಧೀಶರಾದ ಶ್ರೀ ಪ್ರಸನ್ನ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಭಕ್ತರೊಂದಿಗೆ ಮಠದ ಆವರಣದಲ್ಲಿರುವ ನಾಗಬನಕ್ಕೆ ತೆರಳಿ ನಾಗ ದೇವತೆ ವಿಗ್ರಹಕ್ಕೆ ಹಾಲೆರೆದು ಪೂಜೆ ಸಲ್ಲಿಸಿದರು.
ಪಾವಿತ್ರ್ಯತೆಯ ಮನೋಭಾವ ಇರಲಿ: ನಂತರ ಆಶೀರ್ವಚನ ನೀಡಿದ ಸ್ವಾಮೀಜಿ ಅವರು, ದೇವರು, ಧರ್ಮ ಮತ್ತು ಪರಂಪರೆಗಳಲ್ಲಿ ಪಾವಿತ್ರ್ಯತೆಯ ಮನೋಭಾವ ಇರಲಿ. ವೈಚಾರಿಕತೆ ಹೆಚ್ಚಿದಂತೆ ನಾಸ್ತಿಕ ಪ್ರವೃತ್ತಿ ಬೆಳೆದು ಬರುವುದು ಒಳ್ಳೆಯದಲ್ಲ. ವೈಚಾರಿಕತೆ ಎಷ್ಟೇ ಬೆಳೆದರೂ ಪರವಾಗಿ ಇಲ್ಲ. ಅದರೆ, ನಾಸ್ತಿಕ ಮನೋಭಾವ ಬೇಡ ಎಂದು ಹೇಳಿದರು. ಅಸುರೀ ಗುಣಗಳು ನಾಶವಾಗಿ ದೈವೀ ಗುಣಗಳು ಬೆಳೆದು ಬರಬೇಕಾಗಿದೆ. ಪೂರ್ವಜರು ಏನೇ ಸಂಪ್ರದಾಯ ಪರಂಪರೆ ಬೆಳೆಸಿಕೊಂಡು ಬಂದಿದ್ದರೂ ಅವುಗಳಲ್ಲಿ ಒಂದೊಂದು ವಿಶೇಷತೆ ಇರುವುದನ್ನು ಕಾಣಬಹುದು. ಸಂಪ್ರದಾಯ ಪರಂಪರೆಗಳಲ್ಲಿ ನಂಬಿಕೆ ಇಲ್ಲದ ಜನ ಅಪನಂಬಿಕೆ ಅವಿಶ್ವಾಸ ಹುಟ್ಟು ಹಾಕಿ ಜನರಲ್ಲಿ ನೆಮ್ಮದಿಯನ್ನು ಕೆಡಿಸುತ್ತಿದ್ದಾರೆ.
ನಂಬಿಕೆ ಕೆಡಿಸುವುದು ಬಹು ಸುಲಭ. ಸಾತ್ವಿಕ ಸಮೃದ್ಧ ಭಾವನೆಗಳನ್ನು ಬೆಳೆಸುವಲ್ಲಿ ಶ್ರಮಿಸಬೇಕೆ ಹೊರತು ಕೆಡಿಸುವುದು ತರವಲ್ಲ. ಧರ್ಮ, ಸಂಸ್ಕೃತಿ, ಆಚಾರ, ವಿಚಾರ ಪರಂಪರೆ ಬೆಳೆಸಿಕೊಂಡು ಬಂದರೆ ಸಮಾಜದಲ್ಲಿ ಶಾಂತಿ ಸಾಮರಸ್ಯ ಶ್ರದ್ಧಾ ಮನೋಭಾವನೆಗಳು ಬೆಳೆದು ಬರಲು ಸಾಧ್ಯವೆಂದರು. ಹಲಗೂರು ಬೃಹನ್ಮಠದ ಶ್ರೀ ರುದ್ರಮುನಿ ಶಿವಾಚಾರ್ಯರು, ದೊಡ್ಡಸಗರದ ಸೋಮೆಶ್ವರ ಶಿವಾಚಾರ್ಯರು, ಕೂಡಲ ಕ್ಷೇತ್ರದ ಮಹೇಶ್ವರ ಸ್ವಾಮೀಜಿ, ಪ್ರಮೋದ ಸ್ವಾಮೀಜಿ ಮತ್ತು ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಶಿವಯೋಗ ಸಾಧಕರು ಹಾಜರಿದ್ದರು.

ಸಂಭ್ರಮದ ನಾಗಪಂಚಮಿ
ನರಸಿಂಹರಾಜಪುರ: ತಾಲೂಕಿನಾದ್ಯಂತ ಭಾನುವಾರ ವಿವಿಧ ನಾಗರಕಟ್ಟೆ, ಅಶ್ವತ್ಥ ಕಟ್ಟೆಗೆ ತೆರಳಿದ ಭಕ್ತರು ವಿಶೇಷ ಪೂಜೆ ಮಾಡುವುದರೊಂದಿಗೆ ನಾಗಪಂಚಮಿ ಹಬ್ಬವನ್ನು ಸಂಭ್ರಮದೊಂದಿಗೆ ಆಚರಿಸಲಾಯಿತು.
ಪಟ್ಟಣದ ಅಗ್ರಹಾರದಲ್ಲಿರುವ ಸುಬ್ರಮಣ್ಯಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು ಬಂದು ಹಣ್ಣು ಕಾಯಿ ಮಾಡಿಸಿದರು. ಸುಬ್ರಮಣ್ಯ ದೇವರಿಗೆ ಪವಮಾನ ಅಭಿಷೇಕ, ಕ್ಷೀರ ಅಭಿಷೇಕ, ವಿಶೇಷ ಪೂಜೆ ನಡೆಸಲಾಯಿತು. ಅಗ್ರಹಾರದ ಈರಮ್ಮಾಜಿ ಕೆರೆಯ ಪಕ್ಕದಲ್ಲಿರುವ ಅಶ್ವತ್ಥ ಕಟ್ಟೆಗೂ ಸಾವಿರಾರು ಭಕ್ತರು ಬಂದು ಹಣ್ಣು ಕಾಯಿ ಮಾಡಿಸಿದರು. ಕ್ಷೀರಭಿಷೇಕ, ಎಳನೀರು ಅಭಿಷೇಕ, ತನಿ ಎರೆಯುವುದು ಮುಂತಾದ ಸೇವೆ ಮಾಡುವುದರೊಂದಿಗೆ ನಾಗರ ಪಂಚಮಿ ಹಬ್ಬವನ್ನು ಆಚರಿಸಿದರು.
ಪ್ರವಾಸಿ ಮಂದಿರದ ಸಮೀಪದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದರು ಇರುವ ಅಶ್ವತ್ಥ ಕಟ್ಟೆ, ಸಿನಿಮಾ ಟಾಕೀಸ್ ಪಕ್ಕದ ನಾಗರ ಕಟ್ಟೆ, ರಾಘವೇಂದ್ರ ಬಡಾವಣೆಯಲ್ಲಿರುವ ಅಶ್ವತ್ಥ ಕಟ್ಟೆ ಸೇರಿದಂತೆ ವಿವಿಧ ನಾಗರಕಟ್ಟೆಗಳಲ್ಲಿ ವಿಶೇಷ ಪೂಜೆ ನಡೆಯಿತು.
ಗ್ರಾಮೀಣ ಪ್ರದೇಶಗಳಲ್ಲೂ ನಾಗರ ಬನ, ನಾಗರಕಟ್ಟೆ, ಅಶ್ವತ್ಥ ಕಟ್ಟೆ, ದೇವಸ್ಥಾನಗಳ ಸಮೀಪವಿರುವ ನಾಗರಕಟ್ಟೆಗಳಿಗೆ ವಿಶೇಷ ಪೂಜೆ, ಹಣ್ಣು ಕಾಯಿ, ಎಳನೀರು, ಹಾಲಿನ ಅಭಿಷೇಕಗಳು ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.