ಉಪನೋಂದಣಾಧಿಕಾರಿ ಕಚೇರಿ ಸ್ಥಳಾಂತರಕ್ಕೆ ವಿರೋಧ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಡಿ.10
ಸುಮಾರು 20 ವರ್ಷಗಳಿಂದಲೂ ಉಪ ನೋಂದಣಾಧಿಕಾರಿ ಕಚೇರಿ ಮಿನಿ ವಿಧಾನಸೌಧದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈಗ ಕಚೇರಿಯಲ್ಲಿ ಸ್ಥಳ ಅಭಾವದಿಂದ ಬೇರೆ ಕಡೆಗೆ ವರ್ಗಾಯಿಸಲಾಗುವುದು ಎಂಬ ಮಾಹಿತಿಗೆ ವಿರೋಧ ವ್ಯಕ್ತವಾಗಿದೆ.
ಮಾಜಿ ಶಾಸಕ ಬಿ.ಆರ್. ನೀಲಕಂಠಪ್ಪ, ಟಿ.ಎಚ್. ಶಿವಶಂಕರಪ್ಪ, ಮಾಜಿ ಪುರಸಭಾಧ್ಯಕ್ಷ ಟಿ.ಆರ್.ನಾಗರಾಜ್, ತರೀಕೆರೆ, ಅಧ್ಯಕ್ಷರು ನಾಗರಿಕ ಹೋರಾಟ ಸಮಿತಿ ತರೀಕೆರೆ, ರೈತ ಮುಖಂಡರು, ಪುರಸಭಾ ಸದಸ್ಯರು ಹಾಗೂ ತರೀಕೆರೆ ಕ್ಷೇತ್ರದ ಇತರ ಮುಖಂಡರು ಈ ಕುರಿತು ಹೇಳಿಕೆ ನೀಡಿ ಕಚೇರಿ ಸ್ಥಳಾಂತರ ಕ್ರಮ ತಡೆ ಹಿಡಿಯಬೇಕೆಂದು ಮನವಿ ಮಾಡಿದ್ದಾರೆ.
ಕಚೇರಿ ಸ್ಥಳಾಂತರದಿಂದ ರೈತರು, ಸಾರ್ವಜನಿಕರಿಗೆ ತೊಂದರೆಯಾಗಿದೆ. ಈಗ ಸ್ಥಳಾಂತರಿಸುವ ಸ್ಥಳದಿಂದ ರೈತರು ಪಹಣಿ ತೆಗೆದುಕೊಳ್ಳಲು 10 ಖರ್ಚು ಮಾಡುವಲ್ಲಿ ಆಟೋಗಳಿಗೆ 100 ಪಾವತಿಸಬೇಕಾಗುತ್ತದೆ. ಈಗ ಸ್ಥಳಾಂತರಿಸಲು ಉದ್ದೇಶಿಸಿರುವ ಜಾಗದಲ್ಲಿ ಟ್ರಾಫಿಕ್ ಹೆಚ್ಚಾಗಿದೆ. ಅಪಘಾತವಾಗುವ ಸಂಭವವೂ ಇರುತ್ತದೆ ಎಂದು ಮನವಿಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಮಿನಿ ವಿಧಾನಸೌಧ ಹಿಂಭಾಗದ ಸರ್ಕಾರ ಜಾಗದಲ್ಲಿ ಸರ್ಕಾರದಿಂದ ಅನುದಾನ ಪಡೆದು, 4 ತಿಂಗಳೊಳಗೆ ಹೊಸ ಕಟ್ಟಡ ನಿರ್ಮಾಣ ಮಾಡಬಹುದಾಗಿದೆ. ಅಲ್ಲಿಯವರೆಗೂ ಪಿಎಚ್ಇ ಕಚೇರಿ ಆವರಣದಲ್ಲಿ ಸರ್ಕಾರಿ ಕಟ್ಟಡ ಇರುತ್ತದೆ.
ತಾತ್ಕಾಲಿಕವಾಗಿ ಉಪ ನೋಂದಣಾಧಿಕಾರಿ ಕಚೇರಿ ಸ್ಥಳಾಂತರಿಸುವುದರಿಂದ ರೈತರು ಮತ್ತು ನಾಗರಿಕರಿಗೆ ಅನುಕೂಲ ಆಗುತ್ತದೆ. ಬಸ್ ನಿಲ್ದಾಣ, ರೇಲ್ವೆ ನಿಲ್ದಾಣ, ರಾಷ್ಟ್ರೀಕೃತ ಬ್ಯಾಂಕುಗಳು ಸಮೀಪ ಇರುತ್ತದೆ. ಪಹಣಿ ತೆಗೆದುಕೊಳ್ಳಲು ಮಿನಿ ವಿಧಾನಸೌಧ, ತಾಲೂಕು ಕಚೇರಿ, ಸರ್ವೆ ಇಲಾಖೆ,
ಉಪ ವಿಭಾಗಾಧಿಕಾರಿ ಕಚೇರಿ ಎಲ್ಲವೂ ಹತ್ತಿರವಾಗುತ್ತದೆ.
ಆದ್ದರಿಂದ ಉಪನೋಂದಣಾಧಿಕಾರಿಗಳು ಸದರಿ ಕಚೇರಿ ಸ್ಥಳಾಂತರಿಸುವ ಜಾಗ ಬಿಟ್ಟು ನಾವು ತಿಳಿಸಿರುವ ಜಾಗದಲ್ಲಿ ಕಚೇರಿ ತೆರೆದರೆ ಸಾರ್ವಜನಿಕರಿಗೂ ರೈತರಿಗೂ ಬಹಳ ಅನುಕೂಲ.
ಇದಕ್ಕೆ ವ್ಯತಿರಿಕ್ತವಾಗಿ ಉದ್ದೇಶಿಸಿರುವ ಜಾಗದಲ್ಲಿ ಕಚೇರಿ ತೆರೆದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ವಿವಿಧ ಸಂಘ ಸಂಘಟನೆಗು, ಸ್ಥಳೀಯ ಜನಪ್ರತಿನಿಧಿಗಳು ಎಚ್ಚರಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್, ಸಂಬಂಧಿಸಿದ ಮತ್ತಿತರ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

