ಸರಳ ಸಜ್ಜನಿಕೆಗೆ ಕನ್ನಡಿಯಂತಿದ್ದ ಶ್ರೀಕಂಠದತ್ತರು
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಡಿ.11
ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ನಗರದ ವಿವಿಧ ಸಂಘ ಸಂಸ್ಥೆಯವರು ಬುಧವಾರ ಶ್ರದ್ಧಾಂಜಲಿ ಸಭೆಯನ್ನು ನಡೆಸಿ ಸಂತಾಪ ಸೂಚಿಸಿದರು.
ಇಲ್ಲಿಗೆ ಸಮೀಪದ ತೇಗೂರು ಗ್ರಾಮದಲ್ಲಿ ಗ್ರಾಮಸ್ಥರು ಶ್ರದ್ಧಾಂಜಲಿ ಅರ್ಪಿಸಿದರು. ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಕಾರ್ಯಕರ್ತರು ಸಂತಾಪ ಸೂಚಿಸಿದರು. ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಶಾಸಕ ಸಿ.ಟಿ. ರವಿ, ಮೈಸೂರು ಮಹಾರಾಜರು ಅತ್ಯಂತ ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರು. ಅವರು ರಾಜ್ಯಕ್ಕೆ ನೀಡಿರುವ ಕೊಡುಗೆ ಅಪಾರ. ಕನ್ನಂಬಾಡಿಕಟ್ಟೆಯನ್ನು ಅವರು ಕಟ್ಟಿಸದಿದ್ದರೆ ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳು ಬರಪೀಡಿತವಾಗಿರುತ್ತಿದ್ದವು. ಇಂದು ರಾಜ್ಯಕ್ಕೆ ದೊರೆಯುತ್ತಿರುವ ನೀರು ಸಹ ಲಭಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿ ಸಾಕಷ್ಟು ಉತ್ತಮ ಕೆಲಸವನ್ನು ಮಾಡಿದ್ದಾರೆ. ರಾಜಮನೆತನದವರಾದರೂ ಸಹ ಅವರು ಎಂದೂ ಅಹಂಕಾರ ತೋರಲಿಲ್ಲ. ಎಲ್ಲರೊಂದಿಗೆ ಬೆರೆಯುತ್ತಿದ್ದ ಸರಳ ಸಜ್ಜನರಾಗಿದ್ದರು ಎಂದರು.
ನಗರ ಬಿಜೆಪಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೋಟೆ ರಂಗನಾಥ್, ಜಿಲ್ಲಾ ವಕ್ತಾರ ಎಚ್.ಡಿ.ತಮ್ಮಯ್ಯ, ನಗರಸಭಾ ಸದಸ್ಯ ದೇವರಾಜ್ ಶೆಟ್ಟಿ ಹಾಗೂ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.
ತೇಗೂರು: ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಧನದ ಹಿನ್ನೆಲೆಯಲ್ಲಿ ಅರಸು ವಂಶಸ್ಥರಿರುವ ತಾಲೂಕಿನ ತೇಗೂರಿನಲ್ಲಿ ಬುಧವಾರ ನೀರವಮೌನ ಮತ್ತು ಸೂತಕದ ಛಾಯೆ ಆವರಿಸಿತ್ತು.
ಅರಸು ಬಳಗದ ಹಲವಾರು ಜನ ರಾತ್ರೋರಾತ್ರಿ ಗುಂಪು ಗುಂಪಾಗಿ ಒಡೆಯರ್ ಅವರ ಅಂತಿಮ ದರ್ಶನ ಪಡೆಯಲು ಮೈಸೂರಿನತ್ತ ಧಾವಿಸಿದರು. ಮಂಗಳವಾರ ಮಧ್ಯಾಹ್ನದಿಂದಲೇ ಮುಚ್ಚಿದ ಗ್ರಾಮದ ಎಲ್ಲಾ ದೇವಾಲಯಗಳ ಬಾಗಿಲು ಬುಧವಾರ ಒಡೆಯರ್ ಅವರ ಅಂತ್ಯಕ್ರಿಯೆ ನಡೆದ ನಂತರ ಸಂಜೆ ವೇಳೆಗೆ ತೆರೆದವು. ಯುವಕರು ಮತ್ತು ಮಹಿಳೆಯರು ಮೌನಕ್ಕೆ ಶರಣಾದರೆ ವೃದ್ಧರು ನೆನಪಿನಗಳಂಕ್ಕೆ ಜಾರಿದರು.
ಬುಧವಾರ ಬೆಳಿಗ್ಗೆ ಗ್ರಾಮದ ಶ್ರೀವೀರಾಂಜನೇಯಸ್ವಾಮಿ ದೇವಾಲಯ ಮುಂಭಾಗದ ರಂಗಮಂದಿರದಲ್ಲಿ ಒಡೆಯರ್ ಅವರ ಭಾವಚಿತ್ರವನ್ನಿಟ್ಟು ಜಿಲ್ಲಾ ಅರಸು ಸಂಘ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಜಿಲ್ಲಾ ಅರಸು ಸಂಘದ ಅಧ್ಯಕ್ಷ ಅನಂತರಾಜ ಅರಸ್, ಪ್ರಧಾನ ಕಾರ್ಯದರ್ಶಿ ಮುರಳೀಧರರಾಜೇ ಅರಸ್, ಮಾಜಿ ಅಧ್ಯಕ್ಷ ಕೆ.ಟಿ. ಸೋಮಶೇಖರರಾಜೇ ಅರಸ್, ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ರಾಜ್ ಅರಸ್, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್, ನಿವೃತ್ತ ಹಿರಿಯ ಪಶುಪರೀಕ್ಷಕ ಲಕ್ಷ್ಮಣರಾಜು, ಗ್ರಾಮದ ಮುಖಂಡ ರಾದ ಟಿ.ಎಚ್.ಶ್ರೀನಿವಾಸ್, ಹರೀಶ್ರಾಜ್, ಮುಕುಂದರಾಜ್, ಶ್ರೀಧರರಾಜು ಉಪಸ್ಥಿತರಿದ್ದರು.
ಸಂತಾಪ: ಮೈಸೂರು ಯದುವಂಶ ರಾಜಮನೆತನದ ಕೊನೆಯ ಕೊಂಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಅಕಾಲಿಕ ನಿಧನಕ್ಕೆ ರಂಭಾಪುರೀ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಜೇಸಿಐ: ಮೈಸೂರು ರಾಜವಂಶಸ್ಥ ಒಡೆಯರ್ ನಿಧನಕ್ಕೆ ಇಲ್ಲಿನ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಸಂತಾಪ ವ್ಯಕ್ತಪಡಿಸಿದೆ. ಜೇಸಿ ವಲಯದ ಮಾಜಿ ಅಧ್ಯಕ್ಷ ನವೀನ್ ಲಾಯ್ಡ್ ಮಿಸ್ಕಿತ್, ಜೇಸಿ ಪೂರ್ವಾವಾಧ್ಯಕ್ಷ ಚೈತನ್ಯ ವೆಂಕಿ, ಸುರೇಂದ್ರ ಮಾಸ್ಟರ್, ನಿಯೋಜಿತ ಅಧ್ಯಕ್ಷ ಜಗದೀಶ್, ಸದಸ್ಯರಾದ ಕೆ. ಪ್ರಶಾಂತ್ಕುಮಾರ್, ದಯಾಕರ್ ಸುವರ್ಣ, ಎಸ್.ಎಲ್. ಚೇತನ್, ಬಿ.ವಿ. ದೀಪಕ್ ಭಟ್, ಪ್ರಖ್ಯಾತ್, ರಿಚರ್ಡ್ ಸಂತಾಪ ಸಭೆಯಲ್ಲಿ ಭಾಗವಹಿಸಿದ್ದರು.
ಎಡೆಹಳ್ಳಿ 'ನರಸಿಂಹರಾಜ'ಪುರವಾಯ್ತು
ನರಸಿಂಹರಾಜಪುರ: ಮೈಸೂರಿನ ರಾಜವಂಶಸ್ಥ ಶ್ರೀಕಂಠದತ್ತ ಒಡೆಯರ್ ನಿಧನದ ಹಿನ್ನೆಲೆ ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ 1 ಗಂಟೆವರೆಗೆ ಅಂಗಡಿ, ಹೊಟೇಲ್ ಇನ್ನಿತರೆ ವಾಣಿಜ್ಯ ವಹಿವಾಟುಗಳನ್ನು ಸ್ಥಗಿತಗೊಳಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪಟ್ಟಣದ ವಾಟರ್ ಟ್ಯಾಂಕ್ ಸರ್ಕಲ್ ಸಮೀಪ ವಿವಿಧ ಸಂಘ, ಸಂಸ್ಥೆಗಳ ಮುಖಂಡರು, ನಾಗರಿಕರು ಸಂತಾಪ ಸೂಚಕ ಸಭೆ ನಡೆಸಿದರು.
ಮುಖಂಡ ಕೆ.ವಿ.ಸತ್ಯನಾರಾಯಸ್ವಾಮಿ ಮಾತನಾಡಿ, ನರಸಿಂಹರಾಜಪುರ ಈ ಹಿಂದೆ ಎಡೇಹಳ್ಳಿಯಾಗಿತ್ತು. 1915ರಲ್ಲಿ ಮೈಸೂರು ಮಹಾರಾಜ ನರಸಿಂಹರಾಜ ಒಡೆಯರ್ ಅವರು ಎಡೇಹಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ಎಡೇಹಳ್ಳಿಗೆ ನರಸಿಂಹರಾಜಪುರ ಎಂದು ನಾಮಕರಣ ಮಾಡಲಾಯಿತು. ನರಸಿಂಹರಾಜ ಒಡೆಯರ್ ಅವರ ಮೊಮ್ಮೊಗ ಶ್ರೀಕಂಠದತ್ತ ಒಡೆಯರ್ ಅವರು ನಿಧನದಿಂದ ಮೈಸೂರು ಮಹಾರಾಜ ಮನೆತನದ ಕೊನೆಯ ಕೊಂಡಿ ಕಳಚಿದಂತಾಗಿದೆ ಎಂದು ಶೋಕ ವ್ಯಕ್ತಪಡಿಸಿದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪುರುಶೋತ್ತಮ್ ಮಾತನಾಡಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆ ಮುಖಂಡರಾದ ಸಾಧಿಕ್ ಪಾಷಾ, ಗೋಪಾಲ್, ಮೂಡಬಾಗಿಲು ನಾಗೇಶ್, ಎನ್.ಎ. ಶೇಖಬ್ಬ, ಜಯರಾಂ, ಗಿರಿರಾಜ್, ಅರುಣ್ ಜೈನ್ ಮುಂತಾದವರಿದ್ದರು.
ತರೀಕೆರೆಯಲ್ಲಿ ಶ್ರದ್ಧಾಂಜಲಿ
ತರೀಕೆರೆ: ಮಂಗಳವಾರ ನಿಧನರಾದ ಮೈಸೂರು ಯದುವಂಶದ ಕೊನೆಯ ಕುಡಿ ಮಾಜಿ ಸಂಸದರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ಪಟ್ಟಣದ ಕನಕ ಕಲಾ ಭವನದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕೆಪಿಸಿಸಿ ಸದಸ್ಯ ಟಿ.ವಿ. ಶಿವಶಂಕರಪ್ಪ ಮಾತನಾಡಿ, ಮಾಜಿ ಸಂಸದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಸಾಮಾಜಿಕ ಕಳಕಳಿ ಹೊಂದಿದ್ದರು. ಸರಳ ವ್ಯಕ್ತಿಯಾಗಿ ಸಾಮಾಜಿಕ ಕ್ರಾಂತಿ ಮಾಡಿದರು. ಸಂಸ್ಕೃತಿಯನ್ನು ಎತ್ತಿ ಹಿಡಿದವರು ಎಂದು ತಿಳಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎನ್.ವೆಂಕಟೇಶ್, ಮಾಜಿ ಪುರಸಭಾಧ್ಯಕ್ಷ ಎಂ.ನರೇಂದ್ರ, ಪುರಸಭೆ ಮುಖ್ಯಾಧಿಕಾರಿ ಪಲ್ಲವಿ, ಕನ್ನಡಶ್ರೀ ಬಿ.ಎಸ್. ಭಗವಾನ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆರ್.ದೇವಾನಂದ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಎಲ್. ರಮೇಶ್, ಜನಚಿಂತನ ಸಂಸ್ಥೆ ಅಧ್ಯಕ್ಷ ಎನ್.ವೀರಭದ್ರಪ್ಪ, ಪುರಸಭಾ ಸದಸ್ಯ ಈರಣ್ಣ, ಯುವ ಕವಿ ದಾದಾಪೀರ್, ಹಾಲುವಜ್ರಪ್ಪ, ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಶೇಷಪ್ಪ, ಕೋಟಿ ರಘು, ಮಧು ಮತ್ತಿತರರು ಮಾತನಾಡಿದರು.
ಸಭೆಯಲ್ಲಿ ಒಂದು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕೊಪ್ಪದಲ್ಲಿ ಸಂತಾಪ
ಕೊಪ್ಪ: ಪಟ್ಟಣದ ಆಟೋ ಚಾಲಕ ಮತ್ತು ಮಾಲೀಕ ಸಂಘದಿಂದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನಕ್ಕೆ ಆಟೋ ನಿಲ್ದಾಣದ ಮುಂಭಾಗದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ 2 ನಿಮಿಷ ಕಾಲ ಮೌನಚಾರಣೆ ಮೂಲಕ ಸಂತಾಪ ಸೂಚಿಸಲಾಯಿತು.
ಸಂಘದ ಶೃಂಗೇರಿ ಕ್ಷೇತ್ರಾಧ್ಯಕ್ಷ ಎಚ್.ಆರ್. ಜಗದೀಶ್, ಕೊಪ್ಪ ಅಧ್ಯಕ್ಷ ರಘು, ಉಪಾಧ್ಯಕ್ಷ ಶ್ರೀಧರ್, ಸದಸ್ಯರಾದ ಸುಧಾಕರ್, ವಿಜಯ್, ವಸಂತ್, ರಾಜು, ಸ್ನೇಕ್ ಜಾನಿ ಮೊದಲಾದವರು ಇದ್ದರು.
ಶೋಕಾಚರಣೆ ನಡುವೆ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮ
ಚಿಕ್ಕಮಗಳೂರು: ಮೈಸೂರು ರಾಜ ವಂಶಸ್ಥರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಅಗಲಿಕೆಯಿಂದಾಗಿ ರಾಜ್ಯದೆಲ್ಲೆಡೆ ಎರಡು ದಿನ ಶೋಕಾಚರಣೆ ಆಚರಿಸಲಾಗುತ್ತಿದೆ. ಆದರೆ, ಚಿಕ್ಕಮಗಳೂರಿನ ಎಐಟಿ ಕಾಲೇಜು ಹಾಗೂ ವಿಶ್ವವಿದ್ಯಾಲಯ ವಿದ್ಯಾಸಂಸ್ಥೆಯಲ್ಲಿ ಮಾತ್ರ ಗುರುವಾರ ಸಂಜೆ ಹಬ್ಬದ ವಾತಾವರಣವಿತ್ತು.
ಎಐಟಿ ಕಾಲೇಜಿನಲ್ಲಿ ಆದಿಚುಂಚನಗಿರಿ ಸಂಸ್ಥೆಗೆ ಒಳಪಟ್ಟಿರುವ ಶಾಲಾ, ಕಾಲೇಜುಗಳ ವಾರ್ಷಿಕೋತ್ಸವ ಸಮಾರಂಭ ನಡೆಯಿತು. ಇದೇ ಸಂದರ್ಭದಲ್ಲಿ ಪೂರ್ವ ನಿಗದಿಯಂತೆಯ ಶಾಲೆಯ ಸೈಕಲ್ ಸ್ಟ್ಯಾಂಡ್ ಉದ್ಘಾಟನೆ ಹಾಗೂ ಸಂಸ್ಥೆಯ ಶಾಲೆಗಳ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಲಾಯಿತು. ಸಮಾರಂಭದ ನಡುವೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮತ್ತು ಇತ್ತೀಚೆಗೆ ನಿಧನರಾದ ನೆಲ್ಸನ್ ಮಂಡೇಲಾ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು.
ಉದ್ಘಾಟನೆ: ಆದಿಚುಂಚನಗಿರಿ ಮಹಾ ಸಂಸ್ಥಾನ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿನೂತನ ದೇವಾಲಯವನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.
ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಶಾಸಕ ಸಿ.ಟಿ. ರವಿ ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಎಂ.ಎಸ್. ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ಆಶಾಕಿರಣ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣೇಗೌಡ, ವಾಣಿ ನಾಯ್ಡು, ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಕೆ. ಸುಬ್ರಾಯ, ಗೌರಮ್ಮ ಬಸವೇಗೌಡ, ಗಂಧದ ಕೃಷ್ಣೇಗೌಡ, ಎಂ.ಆರ್. ಸಣ್ಣ ಸಿದ್ದೇಗೌಡ, ಚುಂಚನಕಟ್ಟೆ ಮಠದ ಶ್ರೀ ಶಿವಾನಂದನಾಥ ಸ್ವಾಮೀಜಿ, ಹಾಸನ ಮಠದ ಶಂಭುನಾಥ ಸ್ವಾಮೀಜಿ ಉಪಸ್ಥಿತರಿದ್ದರು.
ಕಾರ್ಯಕ್ರಮ ಮುಂದೂಡಿಕೆ
ಚಿಕ್ಕಮಗಳೂರು: ತಾಲೂಕಿನ ಮರ್ಲೆಯ ಶ್ರೀಕಲ್ಮರುಡೇಶ್ವರ ಪ್ರೌಢಶಾಲೆಯಲ್ಲಿ ಗುರುವಾರ ನಡೆಯಬೇಕಾಗಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ ಎಂದು ಶಾಲೆ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.
ಮೈಸೂರಿನ ರಾಜವಂಶಸ್ಥರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಧನದಿಂದಾಗಿ ರಾಜ್ಯದಲ್ಲಿ 2 ದಿನಗಳ ಕಾಲ ಶೋಕಾಚರಣೆ ಇರುವುದರಿಂದ ಪ್ರತಿಭಾಕಾರಂಜಿ ಕಾರ್ಯಕ್ರಮವನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

