ಇನಾಂ ವಿವಾದ: ಇಂದು ಸಭೆ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಡಿ.25
ನೂರಾರು ವರ್ಷಗಳಿಂದ ಅನುಭವದಲ್ಲಿರುವ ಜಮೀನು, ತೋಟ, ವಾಸದ ಮನೆಗಳನ್ನು ತೊರೆದು ಊರಿನಿಂದ ಹೊರಹೋಗಬೇಕಾದ ಕಳಸದ ಇನಾಂ ಭೂಮಿಯಲ್ಲಿರುವ 600 ಕುಟುಂಬಗಳ ಭವಿಷ್ಯ ರಾಜ್ಯ ಸರ್ಕಾರದ ಕೈಯಲ್ಲಿದೆ.
ಕಳಸ ಗ್ರಾಮದ ಕಳಸೇಶ್ವರ ದೇವಾಲಯದ ಇನಾಂ ಜಮೀನುಗಳ ವಿವಾದದ ಬಗ್ಗೆ ಚರ್ಚಿಸಲು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಗುರುವಾರ ಸಂಜೆ 4 ಗಂಟೆಗೆ ಕಂದಾಯ, ಅರಣ್ಯ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆಯನ್ನು ಬೆಂಗಳೂರಿನಲ್ಲಿ ಕರೆಯಲಾಗಿದೆ. ಈ ಸಭೆಯಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಈ ವಿವಾದ ಜನ್ಮ ತಾಳಿದ್ದು 2001ರ ಜನವರಿ 24 ರಂದು. ಅಂದರೆ, ಕಳಸ ಇನಾಂ ಮೀಸಲು ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಕಂದಾಯ ಇಲಾಖೆಯ ಕಾರ್ಯದರ್ಶಿಗಳು ಹೈಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸುವ ಮೂಲಕ ನ್ಯಾಯಾಲಯಕ್ಕೆ ಮಾಹಿತಿ ನೀಡಿದ ದಿನದಂದು. ಪ್ರಮಾಣಪತ್ರ ಸಲ್ಲಿಸುವ ಪೂರ್ವದಲ್ಲಿ ಅಧಿಕಾರಿಗಳು ಮಾನವೀಯತೆ ದೃಷ್ಟಿಯಿಂದ ಯೋಚಿಸಿದ್ದರೆ, ಜನಪ್ರತಿನಿಧಿಗಳು ಎಚ್ಚರ ವಹಿಸಿದ್ದರೆ ಇಂದು ಕಳಸದ ಜನರು ಆತಂಕಪಡುವ ಪರಿಸ್ಥಿತಿ ಬರುತ್ತಿರಲಿಲ್ಲ.
ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ ಮೇಲೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ.
ಈ ವಿಷಯಕ್ಕೆ ಸಂಬಂಧಿಸಿದಂತೆ 6-3-1928 ರಲ್ಲಿ ಸರ್ಕಾರ ಹೊರಡಿಸಿರುವ ಅಧಿಸೂಚನೆಯ ಮೇರೆಗೆ ಹಾಗೂ ಇದೇ ವಿವಾದಕ್ಕೆ ಸೇರಿದಂತೆ ಏಕ ಸದಸ್ಯ ಪೀಠ ನೀಡಿದ ಆದೇಶಗಳ ಆಧಾರದ ಮೇಲೆ ಹೈಕೋರ್ಟ್ 20-4-2012 ರಂದು ಆದೇಶ ನೀಡಿ 2012ರ ಡಿಸೆಂಬರ್ 31 ರೊಳಗೆ ಇಲ್ಲಿನ ಮೀಸಲು ಅರಣ್ಯದ ಸ್ವಾಧೀನದಾರರನ್ನು ತೆರವುಗೊಳಿಸಬೇಕೆಂದು ತಿಳಿಸಿತು.
ಆಗ ಇಲ್ಲಿನ ಜನರು ಎಚ್ಚರಗೊಂಡರು. ಒಂದು ದಶಕಗಳ ಹಿಂದೆಯೇ ಜನಪ್ರತಿನಿಧಿಗಳು ಎಚ್ಚೆತ್ತಿದ್ದರೆ ಕಳಸದಲ್ಲಿ ಉಸಿರುಗಟ್ಟಿದ ವಾತಾವರಣ ನಿರ್ಮಾಣಗೊಳ್ಳುತ್ತಿರಲಿಲ್ಲ.
ಸರ್ಕಾರ ನಿರ್ಲಕ್ಷ್ಯ: ಮೂಡಿಗೆರೆ ತಾಲೂಕಿನ ಮಾವಿನಕೆರೆ, ತೋಟದೂರು ಮತ್ತು ತಲಗೋಡು ಗ್ರಾಮಗಳಲ್ಲಿ ಕಳಸೇಶ್ವರ ದೇವಾಲಯಕ್ಕೆ ಸೇರಿದ 14,340-09 ಎಕರೆ ಇನಾಂ ಭೂಮಿ ಇದ್ದು, ಇದರಲ್ಲಿ 6777 ಎಕರೆ ಜಮೀನು ಮೀಸಲು ಅರಣ್ಯಕ್ಕೆ ಸೇರಿದ್ದಾಗಿದೆ. ಇದರಲ್ಲಿ ಜಿಲ್ಲಾಡಳಿತ 327 ಕುಟುಂಬಗಳಿಗೆ 706-26 ಎಕರೆ ಜಮೀನು ಮಂಜೂರು ಮಾಡಿದೆ. ಈ ಮಂಜೂರಾತಿಯನ್ನು 7-8-2003ರಲ್ಲಿ ನ್ಯಾಯಾಲಯ ರದ್ದುಪಡಿಸಿ ಇನಾಂ ಮೀಸಲು ಅರಣ್ಯ ವ್ಯಾಪ್ತಿಯಲ್ಲಿರುವ ಎಲ್ಲಾ ಸ್ವಾಧೀನದಾರರನ್ನು ತೆರವುಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಸುಪ್ರೀಂ ಮೊರೆ: ಈ ಆದೇಶವನ್ನು ಪುನರ್ ಪರಿಶೀಲನೆ ಮಾಡಬೇಕೆಂದು ಕಳಸದ ಗ್ರಾಮಸ್ಥರು ಹೈಕೋರ್ಟ್ಗೆ ಮನವಿ ಮಾಡಿದ್ದಾರೆ. ಇನ್ನೊಂದೆಡೆ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸುಪ್ರೀಂಕೋರ್ಟ್ನ ಮೊರೆ ಹೋಗಿದ್ದಾರೆ. ತಮ್ಮನ್ನು ಏಕಾಏಕಿ ಒಕ್ಕಲೆಬ್ಬಿಸಬಾರದು.
ತಮಗೆ ಪುನರ್ವಸತಿ ಕಲ್ಪಿಸಬೇಕೆಂದು ಹೈಕೋರ್ಟ್ಗೆ ಸಲ್ಲಿಸಿದ ಅರ್ಜಿಯ ಮೇರೆಗೆ ನ್ಯಾಯಾಲಯವು ಪುನರ್ ವಸತಿ ಕಲ್ಪಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ತಕ್ಷಣವೇ ಇಲ್ಲಿನ ಜನರಿಗೆ ಪುನರ್ವಸತಿ ಕಲ್ಪಿಸಲು ಸಾಧ್ಯವಿಲ್ಲ. ಈಗ ತಾನೇ ಈ ಪ್ರದೇಶದಲ್ಲಿ ಜಂಟಿ ಸರ್ವೆ ಕಾರ್ಯ ಮುಗಿದಿದ್ದು, ಇಲ್ಲಿನ ಪ್ರತಿ ಕುಟುಂಬಗಳ ಸ್ಥಿರಾಸ್ತಿಗಳ ಬಗ್ಗೆ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಗಳಿಂದ ಮೌಲ್ಯ ನಿಗದಿಯಾಗಬೇಕು ಹಾಗೂ ಅವರ ಆರ್ಥಿಕ ಸ್ಥಿತಿಗತಿಯ ಬಗ್ಗೆ ಸರ್ವೇಯಾಗಬೇಕು. ಅದರ ಆಧಾರದ ಮೇಲೆ ಪರಿಹಾರ ಮೊತ್ತ ನಿಗದಿಪಡಿಸಲಾಗುವುದು.
ಮಹತ್ವದ ಸಭೆ: ಇಲ್ಲಿನ ಜನರಿಗೆ ಪರಿಹಾರಕ್ಕಾಗಿ 250 ರಿಂದ 280 ಕೋಟಿ ಬೇಕಾಗಬಹುದೆಂದು ಜಿಲ್ಲಾಡಳಿತ ಪ್ರಥಮ ಹಂತದಲ್ಲಿ ಅಂದಾಜು ಮಾಡಿದೆ. ಈ ಹಣವನ್ನು ಸರ್ಕಾರ ಮಂಜೂರು ಮಾಡಬೇಕು.
ಇದು, ಏಕಗಂಟಿನಲ್ಲಿ ಬಿಡುಗಡೆ ಸಾಧ್ಯವಿಲ್ಲ. ಅದಕ್ಕೆ ಕೆಲವು ವರ್ಷಗಳೇ ಬೇಕಾಗಬಹುದು. ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತರಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. 20-4-2012 ರಂದು ನ್ಯಾಯಾಲಯದ ಆದೇಶ ಹೊರ ಬಿದ್ದ ನಂತರಲ್ಲೂ ರಾಜ್ಯ ಸರ್ಕಾರ ತಲೆ ಕಡೆಸಿಕೊಳ್ಳಲಿಲ್ಲ.
ಅಧಿಕಾರಿಗಳ ಸಭೆಯನ್ನೂ ಕರೆದಿಲ್ಲ. ಇದೀಗ ಎಚ್ಚರಗೊಂಡಿದೆ. ಗುರುವಾರ ನಡೆಯಲಿರುವ ಸಭೆ ಕಳದ ಜನರ ಪಾಲಿಗೆ ತುಂಬಾ ಮಹತ್ವದ್ದಾಗಿದೆ.
ಸರ್ಕಾರ ನೆರವಿಗೆ ಬರಲಿ: ಶಾಸಕ ನಿಂಗಯ್ಯ
ಕಳಸದ ಇನಾಂ ಭೂಮಿಗೆ ಸಂಬಂಧಿಸಿದಂತೆ ಗುರುವಾರ ಅಧಿಕಾರಿಗಳ ಸಭೆ ನಡೆಯಲಿದೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಜನರ ನೆರವಿಗೆ ಬರಬೇಕು ಎಂದು ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ ಹೇಳಿದ್ದಾರೆ. ಅಗತ್ಯಬಿದ್ದರೆ ಸುಪ್ರೀಂ ಕೋರ್ಟ್ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕೆಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

