ಚಿಕ್ಕಮಗಳೂರು

ನೀರು ತಡೆ ಆದೇಶ ಖಂಡಿಸಿ ರಸ್ತೆ ತಡೆ

Published On :

ದಾವಣಗೆರೆ: ಭದ್ರಾ ನಾಲೆಯಲ್ಲಿ ಬಿಟ್ಟಿದ್ದ ಏಕಾಏಕಿ ನೀರನ್ನು ತಕ್ಷಣ ನಿಲ್ಲಿಸುವಂತೆ ಆದೇಶ ಹೊರಡಿಸಿದ ಬಿಜೆಪಿ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ಜೆಡಿಎಸ್ ರೈತ ವಿಭಾಗ ಹಾಗೂ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ರೈತರು ನೀರಾವರಿ ಇಲಾಖೆಯ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಹದಡಿ ರಸ್ತೆಯ ಗ್ರಾಮಾಂತರ ಪೊಲೀಸ್ ಠಾಣೆ ಹಿಂಭಾಗದ ನೀರಾವರಿ ಕಚೇರಿ ಪ್ರವೇಶ ಗೇಟ್ ಮುಂಭಾಗದ ರಸ್ತೆಯಲ್ಲೇ ಧರಣಿ ಆರಂಭಿಸಿದ ಪ್ರತಿಭಟನಕಾರರು, ನಾಲೆಯಲ್ಲಿ ಬೇಸಿಗೆ ಬೆಳೆಗಾಗಿ ಬಿಟ್ಟಿದ್ದ ನೀರನ್ನು ಏಕಾಏಕಿ ನಿಲ್ಲಿಸಲು ಆದೇಶ ಹೊರಡಿಸಿದ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ನೀರು ನಿಲ್ಲಿಸಲು ಆದೇಶ: ಇದೇ ವೇಳೆ ಮಾತನಾಡಿದ ಜೆಡಿಎಸ್ ರೈತ ವಿಭಾಗದ ರಾಜ್ಯಾಧ್ಯಕ್ಷ ಬೆಳವನೂರು ಬಿ. ನಾಗೇಶ್ವರ ರಾವ್, ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ನಾಟಿ ಮಾಡುವ ಸಲುವಾಗಿ 95 ದಿನಗಳ ಕಾಲ ಭದ್ರಾ ನಾಲೆಗೆ ನೀರು ಬಿಡಲಾಗಿತ್ತು. ಇದೀಗ ರಾಜ್ಯ ಸರ್ಕಾರ ಏಕಾಏಕಿ ನೀರು ನಿಲ್ಲಿಸಲು ಆದೇಶ ಹೊರಡಿಸಿರುವುದು ಅಕ್ಷಮ್ಯ. ಈಗಾಗಲೇ ಸಾವಿರಾರು ರು. ಸಾಲ ಮಾಡಿ, ನಾಟಿಗೆ ಮುಂದಾದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದರು.
ನಾಟಿ ಮಾಡಿಕೊಂಡು, ಬೆಳೆಗೆ ಕ್ರಿಮಿನಾಶಕ ಸಿಂಪಡಿಸಿ, ಗೊಬ್ಬರ ಹಾಕಲಾಗಿದೆ. ಇದಕ್ಕಾಗಿ ಕೂಲಿ, ಔಷಧಿ, ಗೊಬ್ಬರಕ್ಕೆ ರೈತರು ಸಾವಿರಾರು ರು. ಸಾಲ ಮಾಡಿದ್ದಾರೆ. ಬತ್ತದ ಬೆಳೆ ಕೈ ಹಿಡಿಯಲಿ ಎಂಬುದಾಗಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ವಾಸ್ತವ ಸ್ಥಿತಿ ಹೀಗಿದ್ದರೂ ರಾಜ್ಯ ಸಚಿವ ಸಂಪುಟದ ಉಪ ಸಮಿತಿ ಸಭೆಯಲ್ಲಿ ಕುಡಿಯುವ ನೀರು ಮೀಸಲಿಡುವ ಉದ್ದೇಶದಿಂದ ನಾಲೆಗೆ ಬಿಟ್ಟ ನೀರನ್ನು ಏಕಾಏಕಿ ನಿಲ್ಲಿಸುವಂತೆ ಆದೇಶ ಹೊರಡಿಸಿರುವುದು ರೈತರನ್ನು ಸಂಕಷ್ಟಕ್ಕೆ ನೂಕಿದೆ ಎಂದು ಆರೋಪಿಸಿದರು.
ಖಂಡನೀಯ: ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಎಂ. ಸತೀಶ ಮಾತನಾಡಿ, ಭದ್ರಾ ಡ್ಯಾಂನಿಂದ ಕಳೆದ ದಿ.26ರಂದು ನೀರು ಬಿಟ್ಟಿದೆ. ಇನ್ನೂ ಕೂಡ ಅಚ್ಚುಕಟ್ಟು ಕಡೇ ಭಾಗಕ್ಕೆ ನೀರು ತಲುಪಿಲ್ಲ. ಕೊನೆ ಭಾಗದ ರೈತರು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಸರ್ಕಾರ ನಾಲೆಗೆ ಬಿಟ್ಟ ನೀರನ್ನು ಏಕಾಏಕಿ ನಿಲ್ಲಿಸಲು ಮುಂದಾಗಿದ್ದು ಖಂಡನೀಯವಾಗಿದೆ ಎಂದರು.
ನಿಗದಿತ ವೇಳಾಪಟ್ಟಿಯಂತೆ ಭದ್ರಾ ನಾಲೆಗಳಿಗೆ ನೀರು ಹರಿಸಬೇಕು. ಸಚಿವ ಎಸ್.ಎ. ರವೀಂದ್ರನಾಥ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿದ್ದರೂ, ಭದ್ರಾ ಅಚ್ಚುಕಟ್ಟಿಗೆ ಬಿಟ್ಟ ನೀರನ್ನು ತಡೆ ಹಿಡಿಯದಂತೆ ಆಕ್ಷೇಪಿಸಿಲ್ಲ. ಭದ್ರಾ ನಾಲೆ, ನೀರಿನ ಹೋರಾಟದಿಂದಲೇ ರೈತರ ಹೆಸರಿನಲ್ಲೇ ಬೆಳೆದಂತಹ ರವೀಂದ್ರನಾಥ ಅದೇ ಅಚ್ಚುಕಟ್ಟು ರೈತರ ಹಿತಾಸಕ್ತಿ ಬಲಿಕೊಟ್ಟಿದ್ದಾರೆ ಎಂದು ಅವರು ಆರೋಪಿಸಿದರು.
ದ್ವಂದ್ವ ನೀತಿ: ಜಿಲ್ಲಾ ಉಸ್ತುವಾರಿ ಸಚಿವ ರವೀಂದ್ರನಾಥ್ ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ. ಬಿಜೆಪಿ ವಿಪಕ್ಷದಲ್ಲಿದ್ದಾಗ ಸಾವಿರಾರು ರೈತರನ್ನು ಕಟ್ಟಿಕೊಂಡು ಹೋರಾಟ ನಡೆಸಿದ್ದಂತಹ ರವೀಂದ್ರನಾಥ ಇಂದು ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಚಕಾರ ಎತ್ತಿಲ್ಲ. ಬೇಸಿಗೆ ಬೆಳೆಗಾಗಿ ಬಿಟ್ಟ ನೀರನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ಸರ್ಕಾರ ಸಚಿವ ಸಂಪುಟದ ಉಪ ಸಮಿತಿ ಕೈಗೊಂಡ ನಿರ್ಧಾರ ತಕ್ಷಣ ತಡೆ ಹಿಡಿದು, ನಾಲೆಗೆ ನೀರು ಬಿಡಲು ಮುಂದಾಗಲಿ ಎಂದು ಅವರು ತಾಕೀತು ಮಾಡಿದರು.
ರೈತ ಮುಖಂಡ ಮಲ್ಲಾಪುರ ದೇವರಾಜ, ತುರ್ಚಘಟ್ಟ ತಿಪ್ಪಣ್ಣ, ಕುರ್ಕಿ ಹನುಮಂತಪ್ಪ, ಕೋಲ್ಕುಂಟೆ  ಪರಮೇಶಪ್ಪ, ಹೊಸಳ್ಳಿ ದೇವೇಂದ್ರಪ್ಪ, ದುರುಗಪ್ಪ, ಹನುಮಂತಪ್ಪ, ಶ್ರೀನಿವಾಸ, ಗುರುಶಾಂತಪ್ಪ, ಮಹದೇವಪ್ಪ, ಮಂಜಪ್ಪ, ಮಲ್ಲಿಕಾರ್ಜುನಪ್ಪ, ರಾಜಪ್ಪ ಮೊದಲಾವರು ಪ್ರತಿಭಟನೆಯಲ್ಲಿದ್ದರು. ಹದಡಿ ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳಿಗೆ ಪರ್ಯಾಯ ರಸ್ತೆಗಳಲ್ಲಿ ಸಾಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಸಂಜೆವರೆಗೂ ರೈತರ ಹೋರಾಟ ಮುಂದುವರಿದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.