ಚಿಕ್ಕಮಗಳೂರು

ರೈತರಿಗೆ ಕಿರುಕುಳ ನಿಲ್ಲಿಸಲು ಆಗ್ರಹಿಸಿ ಪ್ರತಿಭಟನೆ

Published On :

ಚಿಕ್ಕಮಗಳೂರು: ಸರ್ಕಾರದ ನಿರ್ದೇಶನಗಳನ್ನು ಗಾಳಿಗೆ ತೂರಿ ರೈತರಿಗೆ ಅಧಿಕಾರಿಗಳು ನೀಡುತ್ತಿರುವ ಕಿರುಕುಳ ನಿಲ್ಲಿಸುವಂತೆ ಒತ್ತಾಯಿಸಿ ಎಐಕೆಎಸ್ ನೇತೃತ್ವದಲ್ಲಿ ತಾಲೂಕಿನ ಕಳಸಾಪುರದ ಕೆನರಾ ಬ್ಯಾಂಕ್ ಎದುರು ರೈತರು ಬುಧವಾರ ಪ್ರತಿಭಟನೆ ನಡೆಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎಐಕೆಎಸ್ ಜಿಲ್ಲಾಧ್ಯಕ್ಷ ಎನ್.ಆರ್. ಮಂಜುನಾಥ್, ಸುವರ್ಣ ಭೂಮಿ ಯೋಜನೆಯಲ್ಲಿ ರೈತರಿಗೆ ಪರಿಹಾರವಾಗಿ ಬಂದ ಹಣವನ್ನು ಅವರ ಉಳಿತಾಯ ಖಾತೆಗೆ ಸಂದಾಯ ಮಾಡುತ್ತಾರೆ. ಅದನ್ನು ಪಡೆಯಲು ರೈತರು ಮುಂದಾದಾಗ ಬ್ಯಾಂಕ್ ಅಧಿಕಾರಿಗಳು ಬೆಳೆಸಾಲಕ್ಕೆ ವಜಾ ಮಾಡುವ ತಾಕೀತು ಮಾಡುವುದು ಸರಿಯಲ್ಲ, ರೈತರಿಗೆ ಬಂದ ಪರಿಹಾರದ ಹಣವನ್ನು ಯಾವುದೇ ಖಾತೆಗೆ ಜಮಾ ಮಾಡಬಾರದು ಎಂದು ಸರ್ಕಾರದ ನಿರ್ದೇಶನವಿದ್ದರೂ ಆ ನಿಯಮವನ್ನು ಗಾಳಿಗೆ ತೂರುತ್ತಿದ್ದಾರೆಂದು ಆರೋಪಿಸಿದರು.
ಬೆಳೆಸಾಲದ ನೆಪ ಸರಿಯಲ್ಲ: ರೈತರು ಸಂಕಷ್ಟದಲ್ಲಿದ್ದಾಗ ಬ್ಯಾಂಕಿನಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆದಿರುತ್ತಾರೆ. ಅವರ ಮನೆ, ಮದುವೆ ಸೇರಿದಂತೆ ಶುಭ ಕಾರ್ಯಗಳಿಗೆ ಚಿನ್ನದ ಅವಶ್ಯಕತೆ ಇದ್ದಾಗ ರೈತರು ಬಿಡಿಸಿಕೊಳ್ಳಲು ಬಂದರೆ ಹಣ ಸಂದಾಯ ಮಾಡಿಸಿಕೊಂಡು ಬೆಳೆಸಾಲದ ನೆಪವೊಡ್ಡುವ ಅಧಿಕಾರಿಗಳು ಚಿನ್ನವನ್ನು ಹಿಂತಿರುಗಿಸದಿರುವುದು ಸರಿಯಲ್ಲ ಎಂದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಹೆಚ್.ಎಂ. ರೇಣುಕಾರಾದ್ಯ ಮಾತನಾಡಿ, ಬರಗಾಲದ ಬಿಸಿಯಿಂದ ಹೊಲಗದ್ದೆಗಳಲ್ಲಿ ಹಾಕಿದ ಬೆಳೆ ಬಾರದೆ ಬಂದ ಬೆಳೆಗೂ ಬೆಲೆ ಇಲ್ಲದೆ ರೈತರು ಪರಿತಪಿಸುತ್ತಿದ್ದಾರೆ. ಇಂತಹ ಸಂಕಷ್ಟದಲ್ಲಿದ್ದಾಗ ಸಾಲ ಹಿಂತಿರುಗಿಸಲು ಬ್ಯಾಂಕ್‌ಗಳು ಒತ್ತಡ ಹಾಕಬಾರದೆಂಬ ಸುಪ್ರೀಂಕೋರ್ಟ್ ನಿರ್ದೇಶನವಿದ್ದರೂ ರೈತರು ಹೊಲಕ್ಕೆ ತೆರಳಿದ್ದ ಸಂದರ್ಭದಲ್ಲಿ ಮನೆಯಲ್ಲಿ ಹೆಣ್ಣು ಮಕ್ಕಳಿದ್ದಾಗ ಮನೆ ಜಪ್ತಿಗೆ ಅಧಿಕಾರಿಗಳು ತೆರಳಿ ಒತ್ತಡ ಹಾಕುವುದನ್ನು ಖಂಡಿಸುವುದಾಗಿ ತಿಳಿಸಿದರು.
ಇಂತಹ ಸಮಸ್ಯೆಗಳ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಮುಖ್ಯಸ್ಥರೊಂದಿಗೆ ಸಭೆ ನಡೆಸಿ, ಸಮಸ್ಯೆ ಬಗೆಹರಿಸದಿದ್ದರೆ ಹೋರಾಟದ ಸ್ವರೂಪ ಬದಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಜಿ. ರಘು, ಶಂಕರಲಿಂಗೇಗೌಡ ಹಾಗೂ ರೈತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.