ಚಿಕ್ಕಮಗಳೂರು

ಕೊಲೆಯಲ್ಲಿ ಅಂತ್ಯಗೊಂಡ ತ್ರಿಕೋನ ಪ್ರೇಮ!

Published On :

ಚಿಕ್ಕಮಗಳೂರು: ಕೊಲೆ ಮಾಡಿದ ಮಾರನೇ ದಿನ ಪ್ರೇಮಿಗಳ ಮದುವೆಯಾದರು. ಬಳಿಕ ನಾಲ್ಕೇ ದಿನಗಳಿಗೆ ಜೈಲಿಗೆ ಸೇರಿದರು!
- ಇದು ಸಿನಿಮಾ ಕಥೆಯಲ್ಲ. ತ್ರಿಕೋನ ಪ್ರೇಮದ ನೈಜ ಕಥೆ.
ಒಬ್ಬರನ್ನು ದೂರ ಮಾಡಿ, ಇನ್ನೊಬ್ಬರನ್ನು ಮದುವೆಯಾಗಲು ಮಾಡಿದ ಕೊಲೆಯಿದು. ಕೊಲೆ ಮಾಡಿ, ರಸ್ತೆ ಅಪಘಾತದಲ್ಲಿ ಮೃತನಾಗಿದ್ದಾನೆ ಎನ್ನುವಂತೆ ಬಿಂಬಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ನಾಲ್ವರೀಗ ಪೊಲೀಸರ ಅತಿಥಿಯಾಗಿದ್ದಾರೆ. ಪ್ರೀತಿಸಿದ ಯುವತಿ ಸೇರಿದಂತೆ ನಾಲ್ವರು ಈಗ ಕಂಬಿ ಎಣಿಸುತ್ತಿದ್ದಾರೆ.
ಏನಿದು ಪ್ರೇಮ ಕಥೆ?: ಚಿಕ್ಕಮಗಳೂರಿನ ಕಲ್ಯಾಣನಗರದ ನಿವಾಸಿ ದಿಲೀಪ್ ಬೇಲೂರು ತಾಲೂಕಿನ ರಾಜನಸಿರಿಯೂರು ಗ್ರಾಮದ ಮೀನಾಕ್ಷಿಯನ್ನು ಪ್ರೀತಿಸುತ್ತಿದ್ದ. ಇವರಿಬ್ಬರಿಗೆ ಮದುವೆ ಮಾಡಿಸಲು ಮನೆಯವರ ಅಭ್ಯಂತರವೇನೂ ಇರಲಿಲ್ಲ. ಆದರೆ, ಜಾತಕ ಸರಿಹೊಂದದ ಕಾರಣ ಇವರ ಕನಸಿಗೆ ಕಲ್ಲು ಬಿತ್ತು.
ಮೀನಾಕ್ಷಿ ದಿಲೀಪ್‌ನನ್ನು ಪ್ರೀತಿಸುವ ಜೊತೆಗೆ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಗುಮಾಸ್ತನಾಗಿದ್ದ ಪ್ರತಾಪ್ ಎಂಬಾತನೊಂದಿಗೆ ಸಂಪರ್ಕವನ್ನಿಟ್ಟುಕೊಂಡಿದ್ದಳು. ದಿಲೀಪ್‌ನೊಂದಿಗೆ ವಿವಾಹ ಸಾಧ್ಯವಿಲ್ಲ ಎಂಬುದನ್ನರಿತ ಮೀನಾಕ್ಷಿ ಪ್ರತಾಪ್‌ನೊಂದಿಗೆ ವಿವಾಹವಾಗಲು ನಿಶ್ಚಯಿಸಿದ್ದಳು. ಆದರೆ, ದಿಲೀಪ್ ಮುಂದೆ ಕಿರಿಕಿರಿ ಮಾಡಬಹುದು ಎಂದರಿತು, ಈ ಬಗ್ಗೆ ಪ್ರತಾಪ್‌ನೊಂದಿಗೆ ಚರ್ಚಿಸಿದಳು. ಆಗ ಸ್ನೇಹಿತರೊಂದಿಗೆ ಸೇರಿ, ಪ್ರತಾಪ್ ದಿಲೀಪ್‌ನನ್ನು ಕೊಲೆ ಮಾಡಲು ಸ್ಕೆಚ್ ಹಾಕಿದರು. ಇದಕ್ಕೆ ಮೀನಾಕ್ಷಿ ಸಹಾಯವನ್ನು ಪಡೆದುಕೊಂಡಿದ್ದಾರೆ. ಈ ವಿಷಯವನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೇಗೆ ಕೊಲೆ?: ಫೆ.13 ರಾತ್ರಿ ಬೇಲೂರು-ಹಳೆಬೀಡು ರಸ್ತೆಯಲ್ಲಿರುವ ಬಸವೇಶ್ವರ ದೇವಸ್ಥಾನಕ್ಕೆ ಬರುವಂತೆ ಮೀನಾಕ್ಷಿ ದಿಲೀಪ್ ಮೊಬೈಲ್‌ಗೆ ಕರೆ ಮಾಡಿದ್ದಾಳೆ. ರಾತ್ರಿ ಸುಮಾರು 8 ಗಂಟೆ ವೇಳೆಗೆ ದಿಲೀಪ್ ಸ್ಥಳಕ್ಕೆ ಹೋಗಿದ್ದು, ಅದೇ ಸಮಯಕ್ಕೆ ಪ್ರತಾಪ್, ವಿನಯ್, ಪರಮೇಶ್ ಹಾಗೂ ನರಸಿಂಹರಾಜು ಸ್ಕಾರ್ಪಿಯೋ ಕಾರಲ್ಲಿ ಬಂದು ಕಾರಿನಲ್ಲಿದ್ದ ಜಾಕ್‌ನಿಂದ ದಿಲೀಪ್ ತಲೆಗೆ ಬಲವಾಗಿ ಹೊಡೆದು, ಆತನನ್ನು ಅದೇ ಕಾರಿನಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೊರಟಿದ್ದರು. ಆದರೆ, ದಿಲೀಪ್ ತಲೆಯಿಂದ ಅತಿ ರಕ್ತಸ್ರಾವವಾಗುವುದನ್ನು ಕಂಡು ಹಳೇಬೀಡಿನಲ್ಲಿ ಎರಡು ಟವಲ್ ಖರೀದಿಸಿ ಆತನ ತಲೆಗೆ ಕಟ್ಟಿದ್ದಾರೆ. ನಂತರ ಆತ ಮೃತಪಟ್ಟಿದ್ದಾನೆಂದು ತಿಳಿದ ಕೂಡಲೇ ಮತ್ತೆ ಬಸವೇಶ್ವರ ದೇವಾಲಯದ ಸಮೀಪಕ್ಕೆ ಬಂದು ದಿಲೀಪ್‌ನ ವಾಹನವನ್ನು ತೆಗೆದುಕೊಂಡು ಹೋಗಿ ಕಳಸಾಪುರದ ಸೇತುವೆ ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎನಿಸುವಂತೆ ಮೃತ ದೇಹವನ್ನು ಎಸೆದು ಜಾಗ ಖಾಲಿ ಮಾಡಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಇದೊಂದು ರಸ್ತೆ ಅಪಘಾತವೆಂದೇ ಪ್ರಕರಣ ದಾಖಲಿಸಿಕೊಂಡಿದ್ದರು.
ತಂದೆಯನ್ನು ಕಾಡಿದ ಅನುಮಾನ: ಆದರೆ, ಇದೊಂದು ಕೊಲೆ ಎಂದು ದಿಲೀಪ್ ತಂದೆ ಪೊಲೀಸರಿಗೆ ದೂರು ನೀಡಿದ್ದರು. ದೂರಿನ್ವಯ ಪೊಲೀಸರು ಮತ್ತೆ ತನಿಖೆ ನಡೆಸಿದರು. ಸೇತುವೆ ಬಳಿ ಏಕ ಕಾಲದಲ್ಲಿ ಎರಡು ವಾಹನಗಳು ಸಂಚರಿಸಲು ಸಾಧ್ಯವಿಲ್ಲ. ಜತೆಗೆ ಸ್ಥಳದಲ್ಲೇ ಸಿಕ್ಕಿರುವ ಎರಡು ಹೊಸ ಟವಲ್‌ಗಳ ಆಧಾರದ ಮೇಲೆ ತನಿಖೆಯನ್ನು ಆರಂಭಿಸಲಾಯಿತು. ದಿಲೀಪ್‌ನನ್ನು ಕೊಲೆ ಮಾಡಿದ ಪ್ರತಾಪ್ ಹಾಗೂ ಅದಕ್ಕೆ ನೆರವಾದ ಮೀನಾಕ್ಷಿ ಫೆ.15 ರಂದು ಪುಷ್ಪಗಿರಿ ಮಠದಲ್ಲಿ ವಿವಾಹವಾಗಿದ್ದಾರೆ. ಈ ಜಾಡನ್ನು ಹಿಡಿದು ಹೊರಟಾಗ ನಾಲ್ವರು ಸೇರಿ ಈ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಗಳನ್ನು ಬಂಧಿಸಲಾಗಿದ್ದು, ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೀನಾಕ್ಷಿಯನ್ನು ವಶಕ್ಕೆ ತೆಗೆದುಕೊಳ್ಳಬೇಕಿದೆ ಎಂದು ಎಸ್‌ಪಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.