ದೇಶದಲ್ಲಿ ಅನರ್ಥಕಾರಿ ವಿವಿಗಳು: ಡಾ. ಪಾಪು
ಸಿರಿಗೆರೆ: ದೇಶದಲ್ಲಿ 450 ವಿಶ್ವವಿದ್ಯಾನಿಲಯಗಳು, 250 ಡೀಮ್ಡ್ ವಿವಿಗಳು ಕೆಲಸ ನಿರ್ವಹಿಸುತ್ತಿವೆ. ಆದರೆ, ಇವು ಡೀಮ್ಡ್ ವಿವಿಗಳ ಸ್ವರೂಪ ತಾಳದೇ ಡೂಮ್ಡ್ ವಿವಿಗಳಾಗಿವೆ ಎಂದು ಹಿರಿಯ ಪತ್ರಕರ್ತ, ನಾಡೋಜ ಡಾ. ಪಾಟೀಲ ಪುಟ್ಟಪ್ಪ ತಿಳಿಸಿದ್ದಾರೆ.
ಸಂಶೋಧನಾ ಪ್ರಬಂಧ: ಸಿರಿಗೆರೆಯ ಬಿ. ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಸಂದರ್ಭದಲ್ಲಿ ತರಳಬಾಳು ಸ್ವಾಮೀಜಿಯವರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಈ ವಿವಿಗಳು ಪ್ರತಿವರ್ಷ ಸಾವಿರಾರು ಸಂಶೋಧನಾ ಪ್ರಬಂಧಗಳನ್ನು ಸ್ವೀಕರಿಸುತ್ತಿದ್ದು, ಅವುಗಳೆಲ್ಲವೂ ಜೊಳ್ಳುತನದಿಂದ ಕೂಡಿದ್ದು ಪ್ರತಿಶತ ಐದು ಪ್ರಬಂಧಗಳು ಕೂಡ ಅರ್ಹತೆಗೆ ಪಾತ್ರವಾಗಿರುವುದು ಅನುಮಾನವಾಗಿದೆ. ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದ 200 ವಿಶ್ವವಿದ್ಯಾನಿಲಯಗಳ ಪಟ್ಟಿಯನ್ನು ಇತ್ತೀಚೆಗೆ ಪ್ರಕಟಿಸಲಾಗಿದ್ದು ಅವುಗಳಲ್ಲಿ ಭಾರತದ ಒಂದೂ ವಿಶ್ವವಿದ್ಯಾನಿಲಯ ಸ್ಥಾನ ಪಡೆದುಕೊಳ್ಳದೇ ಇರುವುದು ವಿಷಾದ ಎಂದರು.
ಅಧ್ಯಾಪಕರ ಕೆಲಸ: ವಿವಿಗಳಲ್ಲಿ ಕೆಲಸ ಮಾಡುತ್ತಿರುವ ಅಧ್ಯಾಪಕರಿಗೆ ಪ್ರತಿ ತಿಂಗಳೂ ಲಕ್ಷಾಂತರ ರುಪಾಯಿ ವೇತನ ನೀಡಲಾಗುತ್ತಿದೆ. ಈ ಅಧ್ಯಾಪಕರಿಂದ ನಮ್ಮ ವಿವಿಗಳಿಗೆ ಅದೆಷ್ಟು ನ್ಯಾಯ ಸಿಗುತ್ತಿದೆ. ಅವರು ಪಡೆದುಕೊಳ್ಳುತ್ತಿರುವ ವೇತನಕ್ಕೆ ಅವರು ಕೆಲಸ ಮಾಡುತ್ತಿದ್ದಾರೆಯೇ ಎಂಬುದು ಪ್ರಶ್ನಾರ್ಹ. ದೆಹಲಿಯಲ್ಲಿ ಕುಳಿತು ವೇತನ ನಿಗದಿಪಡಿಸುವ ಅಧಿಕಾರಿಗಳಿಗೆ ಅಧ್ಯಾಪಕರ ಕೆಲಸದ ಸ್ವರೂಪವೇ ಅರ್ಥವಾಗುತ್ತಿಲ್ಲ. ಹಳ್ಳಿಯಲ್ಲಿ ಮಳೆ-ಬಿಸಿಲೆನ್ನದೆ ದುಡಿಯುವ ಗ್ರಾಮಾಂತರದ ಜನತೆಗೆ ಬದುಕನ್ನು ತೂಗಿಸಿಕೊಂಡು ಹೋಗುವಷ್ಟು ದುಡಿಮೆಯೇ ಇಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಶಿಕ್ಷಣ ಹಕ್ಕು: ಸಮಾಜದ ಎಲ್ಲ ರಂಗಗಳಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿರುವ ರಾಜಕಾಣಿಗಳು ಸುಧಾರಣೆಯಾದರೆ ಮಾತ್ರ ಸುಸ್ಥಿರ ಸಮಾಜ ನಿರ್ಮಾಣವಾಗುತ್ತದೆ. ಆದರೆ ನಮ್ಮಲ್ಲಿರುವ ಬಹುತೇಕ ರಾಜಕಾರಣಿಗಳು ಪರಪ್ಪನ ಅಗ್ರಹಾರದ ಜೈಲಿನಲ್ಲಿರುವುದಕ್ಕೆ ಲಾಯಕ್ಕಾಗಿರುವುದರಿಂದ ಅವರಿಂದ ಸುಧಾರಣೆ ಬಯಸಲು ಸಾಧ್ಯವಿಲ್ಲ. ದೇ ಶದಲ್ಲಿ ಜಾರಿಗೆ ಬಂದಿರುವ ಶಿಕ್ಷಣ ಹಕ್ಕು (ಆರ್.ಟಿ.ಇ) ಕಾಯ್ದೆ ಪೂರ್ಣವಾಗಿ ಜಾರಿಗೆ ಬಂದ ನಂತರ ಕನ್ನಡ, ಮಲೆಯಾಳಂ, ಅಸ್ಸಾಂ, ತೆಲುಗು, ತಮಿಳು ಮುಂತಾದ ಪ್ರಾದೇಶಿಕ ಭಾಷೆಗಳು ನಾಶವಾಗುತ್ತವೆ ಎಂದು ಕಳವಳ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

