ಜಮೀನು ಸಂರಕ್ಷಣಾ ಕಾರ್ಯಪಡೆ ಅಸ್ತಿತ್ವಕ್ಕೆ ಬರಲಿ
ಕ.ಪ್ರ. ವಾರ್ತೆ ಚಿಕ್ಕಮಗಳೂರು ಜು.7
ಸರ್ಕಾರಿ ಭೂಮಿ ಕಬಳಿಕೆಯಲ್ಲಿ ತೊಡಗಿರುವವರಿಗೆ ಕಡಿವಾಣ ಹಾಕಲು ಸರ್ಕಾರಿ ಜಮೀನು ಸಂರಕ್ಷಣಾ ಕಾರ್ಯಪಡೆಯನ್ನು ಪುನ- ಅಸ್ತಿತ್ವಕ್ಕೆ ತರಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖಂಡರಾದ ಎಸ್.ಆರ್. ಹಿರೇಮಠ್ ಆಗ್ರಹಿಸಿದ್ದಾರೆ.
ಸರ್ಕಾರಿ ಭೂಮಿ ಕಬಳಿಕೆಗೆ ಸಂಬಂಧಿಸಿದಂತೆ ಸರ್ಕಾರಿ ಜಮೀನು ಸಂರಕ್ಷಣಾ ಕಾರ್ಯಪಡೆಗೆ ಒಟ್ಟು 16 ಸಾವಿರ ದೂರುಗಳು ಬಂದಿದ್ದು, ಈ ಪೈಕಿ 400 ದೂರುಗಳು ಪ್ರಸ್ತಾಪ ಆಗಿವೆ. ಇನ್ನುಳಿದ ದೂರುಗಳು ಇತ್ಯರ್ಥವಾಗಿ ತಾರ್ಕಿಕ ಅಂತ್ಯ ಕಾಣಬೇಕಾದರೆ ಕಾರ್ಯಪಡೆಯ ಅಗತ್ಯವಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ಪರಿಸರದ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಕೆಲವರಲ್ಲಿ ವ್ಯಾಪಕ ದುರಾಶೆ ಹೆಚ್ಚಿದೆ. ನೈಸರ್ಗಿಕ ಸಂಪನ್ಮೂಲ ನಾಶವಾಗುತ್ತಿದೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಜನ ಸಂಗ್ರಾಮ ಪರಿಷತ್ ಮಾಡುತ್ತಿದೆ. ಪರಿಷತ್, ಕಳೆದ 30 ವರ್ಷಗಳಲ್ಲಿ ಭೂ ಕಬಳಿಕೆ, ಅಕ್ರಮ ಗಣಿಗಾರಿಕೆ, ಭೂ ಸ್ವಾಧೀನದ ವಿರುದ್ಧ ಹೋರಾಟ ಮಾಡುತ್ತಿದೆ. ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ ಕಟಿಬದ್ಧವಾಗಿದೆ ಎಂದು ಹೇಳಿದರು.
ನೋಟಿಸ್ ಜಾರಿ: ಪ್ರಭಾವಶಾಲಿಗಳು, ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳು, ಬಂಡವಾಳಗಾರರು ಭೂ ಕಬಳಿಕೆಯಲ್ಲಿ ತೊಡಗಿದ್ದಾರೆ. ಅವರ ಈ ದಬ್ಬಾಳಿಕೆ ತಡೆಯುವ ಉದ್ದೇಶದಿಂದ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಷತ್‌ವತಿಯಿಂದ ಹಾಕಲಾಗಿತ್ತು. ಇದನ್ನು ಹೈಕೋರ್ಟ್‌ನಲ್ಲಿಯೇ ಇತ್ಯರ್ಥ ಪಡಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದ್ದರ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ 28ರಂದು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಾಕಲಾಗಿದ್ದು, ಈ ಸಂಬಂಧ ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯ ಮತ್ತು ಕರ್ನಾಟಕ ಪಬ್ಲಿಕ್ ಲ್ಯಾಂಡ್ ಕಾರ್ಪೋರೇಷನ್‌ಗೆ ನೋಟಿಸ್ ಜಾರಿಗೆಯಾಗಿದೆ ಎಂದರು.
ಸಿಎಂ ಕ್ರಮಕ್ಕೆ ಶ್ಲಾಘನೆ: ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ರಿಯಲ್ ಎಸ್ಟೇಟ್ ಕಂಪನಿ ಮಾಲೀಕರುಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ.
ಸರ್ಕಾರಿ ಜಮೀನು, ಕೆರೆ, ಅರಣ್ಯ ಭೂಮಿ ಒತ್ತುವರಿದಾರರ ವಿರುದ್ಧ ಕ್ರಮಕೈಗೊಳ್ಳುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿರುವುದನ್ನು ಪರಿಷತ್ ಸ್ವಾಗತಿಸುತ್ತದೆ ಎಂದು ಹೇಳಿದರು.
ಕಾರ್ಯಪಡೆಗೆ ಬಂದಿರುವ ದೂರುಗಳಲ್ಲಿ ಶೃಂಗೇರಿ ಕ್ಷೇತ್ರದ ಶಾಸಕರಾದ ಡಿ.ಎನ್. ಜೀವರಾಜ್ ಅವರು ಭೂ ಮಂಜೂರಾತಿ ಸಮಿತಿಯ ಅಧ್ಯಕ್ಷರಾಗಿದ್ದಾಗ ದೊಡ್ಡ ಮಟ್ಟದಲ್ಲಿ ತನ್ನ ಹಿಂಬಾಲಕರಿಗೆ ಅರಣ್ಯ ಮತ್ತು ಗೋಮಾಳ ಭೂಮಿಯನ್ನು ಮಂಜೂರು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಅದೇ ರೀತಿ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಎಚ್.ಡಿ. ರೇವಣ್ಣ ಭೂ ಮಂಜೂರಾತಿ ಸಮಿತಿಯ ಅಧ್ಯಕ್ಷರಾಗಿದ್ದಾಗ ಮಂಜೂರು ಮಾಡಿರುವ ಭೂಮಿಯು ಕೂಡ ಒತ್ತುವರಿಗೆ ಸೇರಿದ್ದೆಂದು ಹೇಳಲಾಗಿದೆ.
ಅರ್ಜಿ ತಿರಸ್ಕರಿಸಿಲ್ಲ: ಕರ್ನಾಟಕ ಭೂ ಕಾಯ್ದೆ 1999ರ ತಿದ್ದುಪಡಿಯ ಹೊರತಾಗಿಯೂ ಬೆಂಗಳೂರಿನ ಸುತ್ತಮುತ್ತ 5 ಸಾವಿರ ಎಕರೆಯಷ್ಟು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಲಾಗಿದೆ. ಈ ತಿದ್ದುಪಡಿಯ ಅನುಸಾರ, ಪಾಲಿಕೆಯ ಹೊರ ಅಂಚಿನಿಂದ 18 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಜಮೀನನ್ನು ಬಗರ್ ಹುಕ್ಕುಂ ಅಥವಾ ಇತರೆ ಸಾಗುವಳಿಗೆ ನೀಡುವಂತ್ತಿಲ್ಲ. ಈ ಬಗ್ಗೆ ಇನ್ನೂ 15 ಸಾವಿರ ಎಕರೆ ಪ್ರದೇಶಕ್ಕೆ ಬಂದಿರುವ ಕೋರಿಕೆ ಅರ್ಜಿಗಳನ್ನು ತಿರಸ್ಕರಿಸದೆ ಹಾಗೆಯೇ ಉಳಿಸಿಕೊಳ್ಳಲಾಗಿದೆ ಎಂದು ಹೇಳಿದರು.
ವಿ. ಬಾಲಸುಬ್ರಹ್ಮಣ್ಯನ್ ಅವರು ಸರ್ಕಾರಿ ಜಮೀನು ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ ಆಗಿರುವ ಒತ್ತುವರಿ ಭೂಮಿಯ ಬಗ್ಗೆ ವರದಿ ನೀಡಲಾಗಿತ್ತು. ಆದರೆ, ಅದು ಈವರೆಗೆ ಜಾರಿಗೆ ಬಂದಿಲ್ಲ.
ಈ ವರದಿ ಜಾರಿಯ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸರ್ಕಾರದ ಮಟ್ಟದಲ್ಲಿ ಯಾವುದೇ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ. ಅದುದರಿಂದ ಯಾವುದೇ ಕ್ರಮವನ್ನು ತೆಗೆದುಕೊಳ್ಳಬಾರದೆಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದೊಂದು ದುಸ್ಸಾಹಸದ ಕೆಲಸ. ನಂತರದಲ್ಲಿ ಈ ಕಾರ್ಯಪಡೆಯನ್ನು ರದ್ದುಗೊಳಿಸುವ ಕೆಲಸ ಸರ್ಕಾರ ಮಾಡಿದೆ ಎಂದರು.
ಮಲೆನಾಡು ಪ್ರದೇಶದಲ್ಲಿ ಭಾರಿ ಪ್ರಮಾಣದ ದೊಡ್ಡ ಒತ್ತುವರಿದಾರರ ಹಿತ ಕಾಯಲು ಸಣ್ಣ ಒತ್ತುವರಿದಾರರನ್ನು ಬಲಿ ಕೊಡಲಾಗುತ್ತಿದ್ದು, ಇದು, ಪಟ್ಟಭದ್ರ ಹಿತಾಸಕ್ತಿಗಳ ಹಿತ ಕಾಯುವುದಾಗಿದೆ. ಅದ್ದರಿಂದ 10 ಎಕರೆಗಿಂತ ಮೇಲ್ಪಟ್ಟ ಒತ್ತುವರಿದಾರರನ್ನು ಮಾತ್ರ ಪರಿಗಣಿಸಬೇಕು ಎಂದು ಆಗ್ರಹಿಸಿದರು. ಜನಸಂಗ್ರಾಮ ಪರಿಷತ್‌ನ ಸಮ್ಮೇಳನವನ್ನು ದಾವಣಗೆರೆಯಲ್ಲಿ ಅ.12 ಮತ್ತು 13 ರಂದು ಆಯೋಜಿಸಲಾಗಿದೆ ಎಂದು ಹೇಳಿದರು.
ಭೂ ಒತ್ತುವರಿ ಸಂಬಂಧಿಸಿದ ವಿಷಯಗಳ ಕುರಿತು ಪ್ರಭಾವಿ ರಾಜಕಾರಣಿಗಳು ಇದರಲ್ಲಿ ಪಾಲ್ಗೊಂಡು ಬಡ ಜನರ ಜೀವನ ದುರಸ್ತಿ ಮಾಡಿದ್ದಾರೆ. ಇಲ್ಲಿ ಬೆಳೆದಿರುವ ರಾಜಕೀಯ ವ್ಯಕ್ತಿ ಹಾಗೂ ಅಧಿಕಾರಿಗಳ ಶಾಮೀಲು, ಭೂ ಮಾಫಿಯಾ ಕೂಟ ಭೇದ ಮಾಡುವವರಿಗೆ ಸಮ್ಮೇಳನದಲ್ಲಿ ಆಹ್ವಾನವಿದೆ ಎಂದರು. ನೈಸರ್ಗಿಕ ಸಂಪನ್ಮೂಲ ರಕ್ಷಣೆಯ ರಾಷ್ಟ್ರೀಯ ಸಮಿತಿಯ ಮುಖಂಡರಾದ ಐ.ಜಿ. ಪುರ್ಲಿ, ಸುಮಾ ನಾಗೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

