ಯಕ್ಷಗಾನ ಬುದ್ಧಿ ಶಕ್ತಿ ವೃದ್ಧಿಸುವ ಮಾಧ್ಯಮ
ಬಾಳೆಹೊನ್ನೂರು: ಪುರಾಣ, ಪುಣ್ಯ ಕಥಾನಗಳನ್ನು ಸತತ ಅಧ್ಯಯನ ಮಾಡಿ ಅರ್ಥಧಾರಿಕೆಯ ಮೂಲಕ ಪಾತ್ರದ ವೈಶಿಷ್ಟ್ಯವನ್ನು ಸಂಪೂರ್ಣವಾಗಿ ತೆರೆದಿಡುವ ಯಕ್ಷಗಾನ ಮಾಧ್ಯಮವು ಬುದ್ಧಿ ಶಕ್ತಿಯನ್ನು ವೃದ್ಧಿಸುವ ಸಾಧನವಾಗಿದೆ ಎಂದು ಜಯಪುರದ ಶ್ರೀ ಸತ್ಯಸಾಯಿ ಜ್ಯೋತಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಎಂ.ಎಸ್. ಸತ್ಯನಾರಾಯಣ ಹೇಳಿದ್ದಾರೆ.
ಸಮೀಪದ ಜಯಪುರದ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ಗುರು ಪೂರ್ಣಿಮೆಯ ಅಂಗವಾಗಿ ಜಯಪುರದ ಹಂಸನಾದ ಯಕ್ಷ ಬಳಗದ ವತಿಯಿಂದ ನಡೆದ ಯಕ್ಷಗಾನ ತಾಳ ಮದ್ದಳೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವತಃ ಮಾತಿನ ಬಂಡವಾಳವೊಂದರಲ್ಲೇ ಪುರಾಣ, ಪುಣ್ಯ ಕಥೆಗಳ ಚಿತ್ರಣವನ್ನು ಎಳೆ ಎಳೆಯಾಗಿ ತೆರೆದಿಟ್ಟು ಪಾತ್ರದ ಅಭಿವ್ಯಕ್ತಿತ್ವವನ್ನು ಅನಾವರಣಗೊಳಿಸುವ ಕಲಾವಿದರು ಸತತ ಅಧ್ಯಯನ, ಅಭ್ಯಾಸದಿಂದ ಯಶಸ್ವಿಯಾಗಬಲ್ಲರು. ಮುಮ್ಮೇಳ ಕಥಾನಕದ ಮೆರುಗು ಹೆಚ್ಚಿಸಿದರೆ ಹಿಮ್ಮೇಳವು ತಾಳ, ಲಯ, ಸಂಗೀತದ ಮೂಲಕ ಒಟ್ಟು ಪ್ರಸಂಗದ ವೈಭವವನ್ನು ಮೆರೆಯುವಲ್ಲಿ ಸಹಕಾರಿಯಾಗಬಲ್ಲದು ಎಂದರು.
ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ರಂಗನಾಥ್ ಶ್ರೇಷ್ಠಿ, ಉದ್ಯಮಿ ಚಂದ್ರಕಾಂತ್ ಶೇಟ್, ಕುಂದೂರಿನ ಗುರುಪ್ರಸಾದ್ ಆಚಾರ್ಯ ಉಪಸ್ಥಿತರಿದ್ದರು.
ಮೋಡಿ ಮಾಡಿದ ರಾಮ, ಭರತ: ಹಂಸನಾದ ಯಕ್ಷ ಬಳಗ ಸತತ ಎರಡು ಘಂಟೆಗಳ ಕಾಲ ನಡೆಸಿಕೊಟ್ಟ ಪಾದುಕಾ ಪ್ರಧಾನ ತಾಳ ಮದ್ದಳೆ ವಿಶೇಷ ಅರ್ಥಗಾರಿಕೆ, ಆಕರ್ಷಕ ಹಿಮ್ಮೇಳದ ಕೂಡುವಿಕೆಯಿಂದ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿತು. ಮಲೆನಾಡು ಭಾಗದ ಖ್ಯಾತ ಕಲಾವಿದರುಗಳಾದ ತೋಟದೂರಿನ ಟಿ.ವಿ. ಅಜಿತ್ ಕಾರಂತ್ ಹಾಗೂ ಮೂಡುಬಿದ್ರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕ ರಜನೀಶ್ ನಿರ್ವಹಿಸಿದ ರಾಮ, ಭರತನ ಪಾತ್ರಗಳು ಅರ್ಥಪೂರ್ಣ ಮಾತುಗಾರಿಕೆಯಿಂದ ಪ್ರೇಕ್ಷಕರನ್ನು ಪ್ರಸಂಗದ ಕಡೇವರೆಗೂ ಹಿಡಿದಿಟ್ಟುಕೊಂಡಿತು.
ಹಿರಿಯ ಕಲಾವಿದ ಮೂತೊಳ್ಳಿಯ ಎಂ.ಎಸ್. ಸುಬ್ರಹ್ಮಣ್ಯ ವಶಿಷ್ಠ ಮುನಿಯಾಗಿ ಭಾವನಾತ್ಮಕ ವಿಚಾರ ಧಾರೆಯನ್ನು ಹರಿಸಿ ಪಾತ್ರಕ್ಕೆ ಪೂರ್ಣ ಪ್ರಮಾಣದ ನ್ಯಾಯ ಒದಗಿಸಿದರು.
ಉಳಿದಂತೆ ಸಂಸ್ಥೆಯ ಆಂಗ್ಲ ಶಿಕ್ಷಕ ಎ.ಜಿ. ಅನಿಲ್ ಕುಮಾರ್ (ಲಕ್ಷ್ಮಣ), ಸಂಸ್ಕೃತ ಶಿಕ್ಷಕ ಬಿ. ಅಭಿನಂದನ್ (ಗುಹ), ಕನ್ನಡ ಶಿಕ್ಷಕ ಯತೀಶ್ ಶೆಟ್ಟಿ (ಸೀತೆ) ಯಾಗಿ ಪ್ರಸಂಗಕ್ಕೆ ಸಾಕ್ಷಿಯಾದರು.
ಹಿಮ್ಮೇಳದಲ್ಲಿ ಕಲಾವಿದ ಎ.ಜಿ. ಶಿವಾನಂದ ಭಟ್ ಅವರ ಸಂಪ್ರದಾಯಿಕ ಹಾಗೂ ಆಧುನಿಕ ಶೈಲಿಯ ರಾಗ ಸಂಯೋಜನೆಯ ಭಾಗವತಿಕೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಹಿರಿಹಿತ್ಲು ಉಮೇಶ್ ಹೆಬ್ಬಾರ್ (ಮದ್ದಳೆ), ಕುಂದೂರಿನ ಕೆ.ಆರ್. ಸುಬ್ರಹ್ಮಣ್ಯ (ಶೃತಿ)ಯಲ್ಲಿ ಸಹಕರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

