ಚಿಕ್ಕಮಗಳೂರು

ಅಭಿವೃದ್ಧಿಗೆ ಕಾಯುತ್ತಿದೆ ತನುಡಿ - ಕಗ್ಗನಳ್ಳ

Published On :

ಕ.ಪ್ರ.ವಾರ್ತೆ, ಮೂಡಿಗೆರೆ, ಜೂ.18
ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸರ್ಕಾರಗಳು ಸಾಕಷ್ಟು ಯೋಜನೆ ಹಮ್ಮಿಕೊಳ್ಳುವುದರ ಮೂಲಕ, ಕೋಟ್ಯಂತರ ರೂಪಾಯಿ ನೀಡುತ್ತಿದ್ದರೂ, ಇನ್ನೂ ಎಷ್ಟೋ ಗ್ರಾಮಗಳು ಅಭಿವೃದ್ಧಿ ವಂಚಿತವಾಗಿವೆ. ಇಂತಹ ಅಭಿವೃದ್ಧಿ ವಂಚಿತ ಗ್ರಾಮಗಳಲ್ಲಿ ಕಾಫಿನಾಡಿನ ತವರೂರೆಂದೇ ಪ್ರಸಿದ್ಧವಾಗಿರುವ ಮೂಡಿಗೆರೆ ತಾಲೂಕಿಗೆ ಸೇರಿದ ತೋಟದೂರು ಗ್ರಾಪಂ ವ್ಯಾಪ್ತಿಯ ತನುಡಿ - ಕಗ್ಗನಳ್ಳ ಗ್ರಾಮಗಳೂ ಒಂದು.
ಅಭಿವೃದ್ಧಿ ಮರಿಚಿಕೆಯಾಗಿರುವ ಈ ಗ್ರಾಮದ ನಿವಾಸಿಗಳು ಆಧುನಿಕ ಯುಗದಲ್ಲೂ ಆದಿಮಾನವರಂತೆ ಬದುಕುತ್ತಿದ್ದರೂ ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿರುವುದು ವಿಪರ್ಯಾಸದ ಸಂಗತಿ.
ಬಾಳೆಹೊಳೆ ಮೂಲಕ ಕಳಸಕ್ಕೆ ಹೋಗುವ ದಾರಿಯಲ್ಲಿ ಸಿಗುವ ಕಗ್ಗನಾಳದಿಂದ ಎಡಕ್ಕೆ ತಿರುಗಿ ಸುಮಾರು 4 ಕಿ.ಮೀ. ದೂರ ಸಾಗಿ, ಕಿರಿದಾದ ಕಚ್ಚಾರಸ್ತೆಯೊಂದರಲ್ಲಿ ಹೋದರೆ ಅಲ್ಲಿ ಸಿಗುವುದೇ ತನುಡಿ ಹರಿಜನ ಕಾಲೋನಿ. ಈ ಕಾಲೋನಿಯಲ್ಲಿ ಅಂದಾಜು 60 ಕುಟುಂಬಗಳಿದ್ದು ಸುಮಾರು ಇನ್ನೂರೈವತ್ತೂ ಅಧಿಕ ಜನ  ವಾಸಿಸುತ್ತಿದ್ದಾರೆ.
ಸಾರಿಗೆ ವ್ಯವಸ್ಥೆ ಇಲ್ಲ: ಇಲ್ಲಿಗೆ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲ. ಜನ ಬಸ್ಸಿಳಿದು 4-5 ಕಿ.ಮಿ. ದೂರ ಕಾಲ್ನಡಿಗೆಯಲ್ಲೇ ಸಾಗಬೇಕು. ದಾರಿಯು ಕಲ್ಲುಮಣ್ಣಿನ ಕಚ್ಚಾ ರಸ್ತೆಯಿಂದ ಕೂಡಿದ್ದು, ರಸ್ತೆ ಮಾಯವಾಗಿ ಕಾಲು ದಾರಿಯಾಗಿ ಪರಿಣಮಿಸಿದೆ. ಅನಾರೊಗ್ಯದಿಂದ ನರಳುತ್ತಿರುವವರು, ವೃದ್ಧರನ್ನು ಹೆಗಲಮೇಲೆ ಹೊತ್ತುಕೊಂಡೇ ಹೋಗಬೇಕು.
ಸಾಲದೆಂಬಂತೆ ಬಡವರಿಗೆ ಸಹಾಯಕವಾಗಲೆಂದು 108 ವಾಹನವನ್ನು ಸರಕಾರ ನೀಡಿದೆ. ಆದರೆ ಈ ರಸ್ತೆ  108 ವಾಹನ ಹೋಗಲಿ ಜೀಪು, ಆಟೋ ರಿಕ್ಷಾಗಳೇ ಹೋಗುವುದಿಲ್ಲ. 108 ವಾಹನ 5ಕಿ.ಮೀ.ದೂರದ ಹಿಂದೆಯೇ ನಿಲ್ಲಿಸಬೇಕು. ಮಳೆಗಾಲದಲ್ಲಂತೂ ಈ ರಸ್ತೆಯಲ್ಲಿ ಸಾಗೂವುದು ಒಂದು ಹರಸಾಹಸವೇ ಸರಿ.
ಸರಿಯಾದ ಸೂರಿಲ್ಲ: ಕಾಲೋನಿ ನಿವಾಸಿಗಳು ಎಷ್ಟು ನಿರ್ಲಕ್ಷ್ಯಕ್ಕೆ ಗುರಿಯಾಗಿದ್ದಾರೆಂದರೆ ತಲತಲಾಂತರದಿಂದ ವಾಸಿಸುತ್ತಿದ್ದರೂ ತಲೆ ಮೇಲೊಂದು ಗಟ್ಟಿಯಾದ ಸೂರು ಮಾಡಿಕೊಳ್ಳಲು ಆಗಿಲ್ಲ. ಇನ್ನೂ ಬಹುತೇಕ ಮನೆಗಳು ಹುಲ್ಲಿನ ಚಾವಣಿ ಹೊಂದಿದ್ದು, ಸರಕಾರದ ವಸತಿ ಯೋಜನೆಗಳನ್ನೇ ಅಣಕಿಸುವಂತಿವೆ. ಕಟ್ಟಿರುವ ಕೆಲ ಮನೆಗಳಿಗೆ ಶೌಚಾಲಯ ವ್ಯವಸ್ಥೆಯೂ ಇಲ್ಲ.
ಕುಡಿಯುವ ನೀರಿನ ವ್ಯವಸೆ ತಾಲೂಕಿನಲ್ಲಿ ಸಮರ್ಪಕವಾಗಿ ನೀಡಲಾಗಿದೆ ಎಂದು ಅಧಿಕಾರಿಗಳು ಜನಪ್ರತಿನಿಧಿಗಳು ಹೇಳುತ್ತಾರೆ. ಆದರೆ ಇಲ್ಲಿ ಶುದ್ಧ ಕುಡಿಯುವ ನೀರಿಗೂ ಬರ. ಶುದ್ಧ ಕುಡಿಯುವ ನೀರಿಲ್ಲದೆ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ತನುಡಿ ಹರಿಜನ ಕಾಲೋನಿಯ ಜನರ ಗೋಳನ್ನು ಕೇಳುವವರೇ ಇಲ್ಲದಂತಾಗಿದೆ. ಆರೋಗ್ಯ ಇಲಾಖೆಯ ಕಾಯಕರ್ತರಂತೂ ಈ ಕಡೆ ತಲೆ ಹಾಕುವುದೇ ಬಹಳ ವಿರಳ.
ಸಂಚಾರ ಬಹು ದುಸ್ತರ: ತೋಟದೂರು ಗ್ರಾಪಂ ವ್ಯಾಪ್ತಿಯ ಕಗ್ಗನಳ್ಳದಲ್ಲೂ ಇದೇ ಸಮಸ್ಯೆ. ಸುಮಾರು 126 ಮನೆಗಳಿರುವ ಈ ಪ್ರದೆಶದಲ್ಲಿ ಕೇವಲ 26 ಮನೆಗಳಿಗೆ ಮಾತ್ರ ಹಕ್ಕುಪತ್ರ ದೊರೆತಿದೆ. ಉಳಿದ 100 ಮನೆಗಳು ಹಕ್ಕು ಪತ್ರ ವಂಚಿತರಾಗಿದ್ದಾರೆ.
ಈ ಕಾಲೊನಿ ಜನರ ತೊಂದರೆಯೆಂದರೆ ಕಗ್ಗನಾಳದಿಂದ ಹೆಮ್ಮಕ್ಕಿ, ಕೆಳಭಾಗ ಪ್ರದೇಶಗಳಿಗೆ ಹೋಗಬೇಕಾದರೆ  ಭದ್ರಾ ನದಿ ದಾಟಿ ಹೋಗಬೇಕಾಗುತ್ತದೆ. ಪ್ರತಿದಿನ ನೂರಾರು ಶಾಲಾ ಮಕ್ಕಳು, ಕೂಲಿ ಕಾರ್ಮಿಕರು ಈ ನದಿಯನ್ನೇ ದಾಟಿ ಹೋಗಬೇಕಾಗುತ್ತದೆ.
ಮಳೆಗಾಲದಲ್ಲಂತೂ ತಮ್ಮ ಜೀವವನ್ನು ತೆಪ್ಪ ನಡೆಸುವ ನಾವಿಕನ ಕೈಯಲ್ಲಿ ಕೊಟ್ಟು ಹೋಗಬೇಕಾದ ಪ್ರಸಂಗವಿದೆ. ಈ ಭಾಗದ ಬಹುದಿನದ ಬೇಡಿಕೆ ಈ ನದಿಗೆ ಒಂದು ಸೇತುವೆ. ಎಷ್ಟೋ ಬಾರಿ ಇದರ ಬಗ್ಗೆ ಜನ ಪ್ರತಿನಿಧಿಗಳೊಡನೆ ಮಾತುಕತೆ ನಡೆಸಿದರೂ ದೊಡ್ಡ ಮನಸ್ಸು ಮಾಡಿಲ್ಲ.
ಕಾಣದ ಜನಪ್ರತಿಧಿಗಳು: ಈ ಬಗ್ಗೆ ಗ್ರಾಮಸ್ಥರಾದ ವೃದ್ಧೆ ಕಮಲಮ್ಮ ಪತ್ರಿಕೆಯೊಂದಿಗೆ ಮಾತನಾಡಿ, ಎಲೆಕ್ಷನ್ ಬಂತೆಂದರೆ ಜನಪ್ರತಿಧಿಗಳು ನಿಮ್ಮ ಕಾಲೊನಿಗೆ ಇಷ್ಟು ಹಣ ಕೊಟಿದ್ದೀವಿ ನಮಗೆ ಓಟು ಹಾಕಿ, ಗೆದ್ದ ನಂತರ ನಿಮಗೆ ಸೂರು, ರಸ್ತೆ, ವಿದ್ಯುತ್ ಎಲ್ಲಾ ಕೊಡ್ತೀವಿ  ಎಂದು ಹೇಳಿ ಓಟು ಪಡೆದು ಗೆದ್ದ ನಂತರ ಈ ದಾರಿನೇ ಮರೆತು ಹೋಗ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿವಾಸಿಗಳ ಪ್ರಮುಖ ಸಮಸ್ಯೆಗಳು
  ತೋಟದೂರು ಗ್ರಾಪಂ ವ್ಯಾಪ್ತಿಯ ಕಗ್ಗನಳ್ಳದಲ್ಲೂ ಇದೇ ಸಮಸ್ಯೆ. ಸುಮಾರು 126 ಮನೆಗಳಿರುವ ಈ ಪ್ರದೆಶದಲ್ಲಿ 26 ಮನೆಗಳಿಗೆ ಮಾತ್ರ ಹಕ್ಕುಪತ್ರ ದೊರೆತಿದೆ. ಉಳಿದ 100 ಮನೆಗಳು ಹಕ್ಕು ಪತ್ರ ವಂಚಿತರಾಗಿದ್ದಾರೆ
  ಬಡವರಿಗೆ ಸಹಾಯಕವಾಗಲೆಂದು 108 ವಾಹನವನ್ನು ಸರಕಾರ ನೀಡಿದೆ. ಆದರೆ ಈ ರಸ್ತೆ  108 ವಾಹನ ಹೋಗಲಿ ಜೀಪು, ಆಟೋ ರಿಕ್ಷಾಗಳೇ ಹೋಗುವುದಿಲ್ಲ. 108 ವಾಹನ 5ಕಿ.ಮೀ.ದೂರದ ಹಿಂದೆಯೇ ನಿಲ್ಲಿಸಬೇಕು
 ಈ ಕಾಲೊನಿ ಜನರ ತೊಂದರೆಯೆಂದರೆ ಕಗ್ಗನಾಳದಿಂದ ಹೆಮ್ಮಕ್ಕಿ, ಕೆಳಭಾಗ ಪ್ರದೇಶಗಳಿಗೆ ಹೋಗಬೇಕಾದರೆ  ಭದ್ರಾ ನದಿ ದಾಟಿ ಹೋಗಬೇಕಾಗುತ್ತದೆ. ಪ್ರತಿದಿನ ನೂರಾರು ಶಾಲಾ ಮಕ್ಕಳು, ಕೂಲಿ ಕಾರ್ಮಿಕರು ಈ ನದಿಯನ್ನೇ ದಾಟಿ ಹೋಗಬೇಕಾಗಿರುವುದು ಅನಿವಾರ್ಯ
ನಾನು ಶಾಸಕನಾಗಿ ಆಯ್ಕೆಯಾಗಿ 1ತಿಂಗಳಷ್ಟೇ ಕಳೆದಿದೆ. ತನೂಡಿ ಕಾಲೋನಿಯ ಅವ್ಯವಸ್ಥೆಯ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಕಾಲೋನಿಯ ಜನರು ನನಗೆ ಮನವಿ ಸಲ್ಲಿಸಿದ್ದು, ಅತಿ ಶೀಘ್ರದಲ್ಲಿ ಪರಿಹಾರ ಒದಗಿಸಲಾಗುವುದು.
-ಬಿ.ಬಿ.ನಿಂಗಯ್ಯ ಶಾಸಕರು

-ಎಸ್.ಎಲ್.ರಾಘವೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.