ಪೂರೈಕೆಯಾಗದ ಪಠ್ಯ ಪುಸ್ತಕ; ಆತಂಕದಲ್ಲಿ ವಿದ್ಯಾರ್ಥಿಗಳು
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜೂ.22
ಶಾಲೆಗಳು ಆರಂಭವಾಗಿ ತಿಂಗಳು ಸಮೀಪಿಸುತ್ತಿದ್ದರೂ ಪ್ರಾಥಮಿಕ ಹಾಗೂ ಪ್ರೌಡಶಾಲೆ ವಿಧ್ಯಾರ್ಥಿಗಳಿಗೆ ಹಲವು ವಿಷಯಗಳ ಪಠ್ಯ ಪೂರೈಕೆಯಾಗದ ಕಾರಣ ಕಲಿಕೆಗೆ ತೊಂದರೆಯಾಗಿದ್ದು, ತಕ್ಷಣ ಈ ಸಮಸ್ಯೆ ಬಗೆಹರಿಸಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಹೊಲದಗದ್ದೆ ಗಿರೀಶ್ ಆಗ್ರಹಿಸಿದ್ದಾರೆ.
ಶೈಕ್ಷಣಿಕ ವರ್ಷ ಆರಂಬಿಸಿದರೂ ಆಂಗ್ಲ ಮಾಧ್ಯಮದ 6ನೇ ತರಗತಿ ವಿಧ್ಯಾರ್ಥಿಗಳಿಗೆ ಹಿಂದಿ ಹೊರತುಪಡಿಸಿ ಬೇರಾವುದೇ ವಿಷಯದ ಪಠ್ಯಗಳು ಪೂರೈಕೆಯಾಗಿಲ್ಲ, 9ನೇ ತರಗತಿ ವಿಧ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಗಣಿತ ಮಾತ್ರ ನೀಡಲಾಗಿದೆ, ಉಳಿದಂತೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿವಿಧ ತರಗತಿಗಳಿಗೆ ಕೆಲವೊಂದು ಪಠ್ಯಗಳು ಲಭ್ಯವಾಗದೆ ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಳ್ಳಲು ವ್ಯಥೆಪಡುವಂತಾಗಿದೆ ಎಂದು ಪೋಷಕರು ತಮ್ಮ ಅಳಲನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪೊಳ್ಳು ಆಶ್ವಾಸನೆ: ಈ ಸಂಬಂಧ ವಿಧ್ಯಾರ್ಥಿಗಳಿಗೆ ಭೋದನೆ ಮಾಡಲು ಶಿಕ್ಷಕರಿಗೂ ಕೆಲವೊಂದು ಪುಸ್ತಕ ದೊರೆಯದಿರುವುದು ದುರ್ದೈವ ಸಂಗತಿಯಾಗಿದ್ದು, ಹಿಂದಿನ ವರ್ಷದ ಪಠ್ಯದಲ್ಲಿ ಬೋದನೆ ಮಾಡುವುದಕ್ಕೆ ಮುಂದಾಗಲು ಈ ಸಾಲಿನಲ್ಲಿ ಪಠ್ಯದ ವಿಷಯ ಬದಲಾಗಿರುವುದು ಅಡ್ಡಿಯಾಗಿದೆ. ಇಷ್ಟೆಲ್ಲಾ ಸಮಸ್ಯೆ ಎದುರಾಗಿದ್ದರು ಜನರಿಗೆ ಪೊಳ್ಳು ಆಶ್ವಾಸನೆಗಳನ್ನು ನೀಡುತ್ತಾ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯವಹಿಸಿ ಸರ್ಕಾರ ಕಣ್ಮುಚ್ಚಿ ಕುಳಿತಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ್ದಾರೆ. ಮುಂದಿನ ಬೇರಳೆಣಿಕೆ ದಿನದಲ್ಲಿ ಮೊದಲ ಹಂತದ ಪರೀಕ್ಷೆಗಳು ಎದುರಾಗಲಿದ್ದು ವಿದ್ಯಾರ್ಥಿಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇದನ್ನರಿತು ಸರ್ಕಾರ ಪಠ್ಯಪುಸ್ತಕಗಳ ಮುಕ್ತ ಮಾರಕಟ್ಟೆಗೆ ಅವಕಾಶ ನೀಡಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ವಿದ್ಯುತ್ ಸ್ಥಗಿತ: ವಿದ್ಯುತ್ ಕಣ್ಣಾ ಮುಚ್ಚಾಲೆ ಗ್ರಾಮೀಣ ಭಾಗವಾದ ಮಲ್ಲಂದೂರು, ಶಿರವಾಸೆ, ಮಾಕೋಡು ಭಾಗದಲ್ಲಿ ವಿದ್ಯುತ್ ಕಣ್ಣಾ ಮುಚ್ಚಾಲೆಯಾಡುತ್ತಿದ್ದು ಇದರಿಂದ ಜನರು ಸಮಸ್ಯೆಯ ಸುಳಿಯಲ್ಲಿ ಸಿಕ್ಕಿದ್ದಾರೆ. ಒಂದು ಟ್ರಾನ್ಸ್ ಫಾರಂನಿಂದ ಮೂರ್ನಾಲ್ಕು ಹಳ್ಳಿಗಳಿಗೆ ವಿದ್ಯುತ್ ಮಾರ್ಗ ಹಾದುಹೋಗಿದ್ದು ಈ ಮಾರ್ಗಗಳಲ್ಲಿ ಮರದ ರೆಂಬೆ ಕೊಂಬೆಗಳು ಆವರಿಸಿದೆ, ಮಳೆಗಾಲವಾದ್ದರಿಂದ ಈ ಭಾಗದಲ್ಲಿ ಯಾವುದೆವೊಂದು ಮರ ಉರುಳಿದರು ತಂತಿ ತುಂಡಾಗಿ ವಿದ್ಯುತ್ ಸ್ಥಗಿತಗೊಳ್ಳುತ್ತದೆ.
ಮೆಸ್ಕಾಂ ನೌಕರರು ಅದನ್ನು ದುರಸ್ತಿ ಪಡಿಸುವ ನೆಪವೊಡ್ಡಿ 8 ದಿನ ಎಲ್ಲಾ ಗ್ರಾಮಗಳಿಗೂ ವಿದ್ಯುತ್ ಕಡಿತಗೊಳಿಸುತ್ತಾರೆ, ಇದರಿಂದ ವಿದ್ಯಾರ್ಥಿಗಳ ಓದು ಬರಹಕ್ಕೂ ಕಷ್ಟವಾಗಿದೆ ಎಂದು ತಿಳಿಸಿದ್ದಾರೆ.
ವಿದ್ಯುತ್ ಲೈನ್ ಹಾದು ಹೋಗಿರುವ ಮಾರ್ಗದಲ್ಲಿ ತಂತಿಗೆ ಅಡಚಣೆಯಾಗುವ ರೆಂಬೆ ಕೊಂಬೆಗಳನ್ನು ತೆರವು ಮಾಡಿದರೆ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಲಭ್ಯವಾಗುತ್ತದೆ ಎಂದು ಸಲಹೆ ನೀಡಿದ್ದಾರೆ. ಮಾಕೋಡು ಮತ್ತು ಮೇಲು ಹೊಲದಗದ್ದೆ ಗ್ರಾಮದಲ್ಲಿ ಪ್ರತ್ಯೇಕ ಟ್ರಾನ್ಸ್ ಫಾರಂ ಅಳವಡಿಸಿ ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಗಿರೀಶ್ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

