ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ
ಕ.ಪ್ರ.ವಾರ್ತೆ , ಚಿಕ್ಕಮಗಳೂರು , ಜೂ.22
ಸಮಾಜಕ್ಕೆ ಒಳಿತನ್ನು ಮಾಡುವ ಜ್ಞಾನಿ ವಿಶ್ವಾದ್ಯಂತ ಮಾನ್ಯನಾಗುತ್ತಾನೆ ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.
ನಗರದ ಲಬಬೀನ್ ಮಸೀದಿ ವತಿಯಿಂದ ತಾಜಿರಾನ್ ಶಾದಿಮಹಲ್ನಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರತಿಭಾಪುರಸ್ಕಾರ ಹಾಗೂ ವಯೋವೃದ್ಧರಿಗೆ ಮಾಸಾಶನ ವಿತರಿಸಿ ಮಾತನಾಡಿದ ಅವರು, ಕುಟುಂಬ ಜೀವನ, ಮಾನವೀಯ ಮೌಲ್ಯ, ಸಮಾಜ ಜೀವನ ಇಂದು ಕಲಿಸಬೇಕಾಗಿದೆ ಎಂದರು.
ವಿದ್ಯಾವಂತರಾಗಿ: ರಾಜ ತನ್ನ ರಾಜ್ಯಕ್ಕೆ ಸೀಮಿತನಾದರೆ ಜ್ಞಾನಿ- ವಿಜ್ಞಾನಿ ಗಡಿದಾಟಿಯೂ ಗೌರವಕ್ಕೆ ಒಳಗಾಗುತ್ತಾನೆ. ಎಲ್ಲ ಮಕ್ಕಳೂ ವಿದ್ಯಾವಂತರಾಗಬೇಕು. ವಿದ್ಯಾವಂತರೆಲ್ಲಾ ಜ್ಞಾನಿಗಳಾಗಿ ಮಾನವೀಯಗುಣ ಬೆಳೆಸಿಕೊಳ್ಳಬೇಕು. ಸಮಾಜಮುಖಿ ಚಿಂತನೆ, ಪರೋಪಕಾರದ ಬದುಕು ನಮ್ಮದಾದರೆ ಜೀವನ ಸಾರ್ಥಕವಾಗುತ್ತದೆ. ಬದುಕಿ ಬದುಕಲು ಬಿಡೋದನ್ನು ಕಲಿಸಬೇಕಾಗುತ್ತದೆ. ಹೆತ್ತತಾಯಿ, ಹೊತ್ತ ದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ ಎಂಬುದನ್ನು ಅರಿಯಬೇಕು. ವಿದ್ಯೆ ಯಾರ ಸ್ವತ್ತೋ ಅಲ್ಲ, ಬಡತನ ಕಲಿಕೆಗೆ ಎಂದೂ ಅಡ್ಡಿಯಲ್ಲ ಎಂದುಅವರು ತಿಳಿಸಿದರು.
ಗೌರವಿಸಿ: ಸಾಕಿ ಬೆಳೆಸಿದ ತಂದೆ ತಾಯಿಯರನ್ನು ಇಳಿ ವಯಸ್ಸಿನಲ್ಲಿ ಪ್ರೀತಿ- ಗೌರವದಿಂದ ನೋಡಿಕೊಳ್ಳದೆ ಎಷ್ಟೇ ಹಣ ಜೀವನದಲ್ಲಿ ಸಂಪಾದಿಸಿದರೂ ಅದು ವ್ಯರ್ಥ. ಕೂಡಿ ಬಾಳುವುದನ್ನು ಕಲಿಯಬೇಕು. ಹೊಟ್ಟೆಗೆ ಕಷ್ಟ ಇದ್ದರೂ ಬಡವರಲ್ಲಿ ಜೀವನ ಪ್ರೀತಿ ಇದೆ. ಆದರೆ, ಅತಿ ಹೆಚ್ಚು ವಿಚೇದನ ಪ್ರಕರಣಗಳು ಹಣವಂತರು- ಐ.ಟಿ. ಬಿ.ಟಿ.ಯವರಲ್ಲೇ ಕಂಡುಬರುತ್ತಿರುವುದು ವಿಷಾದನೀಯ ಎಂದರು.
ಸುಸ್ಥಿರಸಮಾಜಕ್ಕೆ ಪೂರಕ: ಅಸಹಾಯಕರಿಗೆ ಗಳಿಕೆಯ ಕೆಲ ಪಾಲು ತೆರೆದಿರಿಸಿ ನೆರವಾಗುವ ಲಬಬೀನ್ ಮಸೀದಿ ಆಡಳಿತಮಂಡಳಿಯ ಕೆಲಸ ಅಭಿನಂದನೀಯ ಎಂದ ಶಾಸಕರು, ಇದು ನಿರಂತರವಾಗಿ ಪ್ರವಹಿಸಬೇಕು. ಸುಸ್ಥಿರಸಮಾಜಕ್ಕೆ ಪೂರಕವಾಗಬೇಕು ಎಂದು ಹೇಳಿದರು.
ಉಪ್ಪಳ್ಳಿ ಮಸರಸಾ ಮುಖ್ಯಸ್ಥ ಖ್ವಾಜಾ ಮೊಹಿಯುದ್ದೀನ್ ರಶ್ದಿ ಪ್ರಧಾನ ಉಪನ್ಯಾಸ ನೀಡಿ, ನೊಂದವರಿಗೆ ನೆರವಾಗುವುದೇ ಇಸ್ಲಾಂ ಆಶಯವೆಂದರು. ಲಬಬೀನ್ ಮಸೀದಿ ಅಧ್ಯಕ್ಷ ಸಲೀಂ, ಅಂಜುಮಾನ್ ಇ ಕುದ್ದಾಮ್ ವೆಲ್ಫೇರ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮೊಹಮ್ಮದ್ ಹನೀಫ್, ಮುತಾವಲಿ ಷರೀನ್ ಸಾಬ್ ಅತಿಥಿಗಳಾಗಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

