ಪ್ರಕೃತಿ ವಿಕೋಪ ನೋವು ತಂದಿದೆ: ರಂಭಾಪುರಿ ಶ್ರೀ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜೂ.24
ಉತ್ತರಾಖಂಡ, ಕೇದಾರ ಮತ್ತು ಗುಪ್ತಕಾಶಿ ಮುಂತಾದೆಡೆ ಪ್ರಕೃತಿಯ ವಿಕೋಪದಿಂದ ಅಪಾರ ಸಾವು ನೋವು ಸಂಭವಿಸಿದ್ದು, ಅಲ್ಲಿನ ಭೂ ಕುಸಿತ ನಮಗೆ ದಿಗ್ಭ್ರಮೆ ಹುಟ್ಟಿಸಿದೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಹೇಳಿದ್ದಾರೆ.
ನಗರದ ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಸೋಮವಾರ ಮಾಧ್ಯಮ ಪ್ರತಿಷ್ಠಾನ ಏರ್ಪಡಿಸಿದ್ದ ಧರ್ಮ ಮತ್ತು ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಪಂಚಪೀಠಗಳಲ್ಲಿ ಒಂದಾದ ಶ್ರೀ ಕೇದಾರನಾಥ ಶಿವಾಚಾರ್ಯರು ಅಲ್ಲಿನ ಸಂತ್ರಸ್ತರಿಗೆ ನೆರವು ಒದಗಿಸುವುದರಲ್ಲಿ ನಿರತರಾಗಿದ್ದಾರೆ. ನಾವು ಆಹಾರ, ದಿನ ಬಳಕೆ ಹಾಗೂ ಔಷಧಿಗಳನ್ನು ನೀಡುವ ಮೂಲಕ ನೆರವು ನೀಡುವುದಾಗಿ ಶ್ರೀಗಳಿಗೆ ಸಂದೇಶ ರವಾನಿಸಿದ್ದೇವೆಂದು ತಿಳಿಸಿದರು.
ಮಾಧ್ಯಮ ಒಲಿಸಿಕೊಳ್ಳುವ ಪ್ರವೃತ್ತಿ: ಮಠಾಧೀಪತಿಗಳು ಇತ್ತೀಚೆಗೆ ಮಾಧ್ಯಮ ಒಲಿಸಿಕೊಳ್ಳುವ ಪ್ರವೃತ್ತಿ ಹಾಗೂ ದೃಶ್ಯ ಮಾಧ್ಯಮಗಳ ಒಳಗೆ ನುಗ್ಗುವ ಅಪಹಾಸ್ಯಕ್ಕೆ ಗುರಿಯಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀಗಳು, ಕಾವಿ ಹಾಕಿದ ಮಾತ್ರಕ್ಕೆ ಅವರು ಧರ್ಮಾಧಿಕಾರಿಗಳು ಆಗಲಾರರು, ಅವರು ವೇಷಧಾರಿಗಳೇ ಹೊರತು, ಅವರು ಧರ್ಮಾಧಿಕಾರಿಗಳಾಗಲು ಸಾಧ್ಯವಿಲ್ಲ. ಮಾಧ್ಯಮ ಅವರ ಬಗ್ಗೆ ಹೆಚ್ಚು ಪ್ರಚಾರ ಕೊಡುತ್ತಿರುವುದು ದುರ್ದೈವ. ಅವರು ಡೊಂಗಿ ಜನ. ಅವರಿಗೆ ಕಡಿವಾಣ ಹಾಕಲು ಮಠಗಳಿಂದ ಸಾಧ್ಯವಿಲ್ಲ. ಭಕ್ತ ವರ್ಗ ಅದಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ಸಂಸ್ಕಾರ ಪರಿಪಾಲನೆ ಇಲ್ಲ: ಅತ್ಯಾಚಾರದ ಬಗ್ಗೆ ಪ್ರಸ್ತಾಪಿಸಿದ ಅವರು, ಸರ್ಕಾರ ಇದರ ಬಗ್ಗೆ ಕಟ್ಟು ನಿಟ್ಟಿನ ಕಾನೂನು ಜರುಗಿಸಬೇಕು. ವೈಚಾರಿಕ ಜಗತ್ತಿನಲ್ಲಿ ಮನುಷ್ಯ ಅಭೂತಪೂರ್ವ ಬೆಳವಣಿಗೆ ಸಾಧಿಸಿದ್ದಾನೆ. ಆದರೆ, ಶಾಂತಿ, ಸಮಾಧಾನ ಇಲ್ಲದಿರುವುದು ಕಳವಳಕಾರಿಯಾದ ಸಂಗತಿ. ಯುವಕರು, ಆತ್ಮಹತ್ಯೆಗೆ ಮುಂದಾಗುತ್ತಿರುವುದು ಅವರಿಗೆ ಧರ್ಮ, ಸಂಸ್ಕಾರ ಪರಿಪಾಲನೆ ಇಲ್ಲದಿರುವ ಮನೋ ದೌರ್ಬಲ್ಯ ಕಾರಣ. ನೀತಿ ಧರ್ಮ ನಮ್ಮನ್ನು ರಕ್ಷಿಸುತ್ತವೆ. ಯುವ ಜನಾಂಗ ಹಣ, ಅಧಿಕಾರದ ಬೆನ್ನತ್ತಿ ಹೋಗುತ್ತಿದ್ದಾರೆ.
ಆಧ್ಯಾತ್ಮಿಕ ಧರ್ಮಪರಿಪಾಲನೆ ಕ್ಷಿಣಿಸುತ್ತಿದೆ. ಧರ್ಮ ಪೀಠಗಳು ಇದರ ಬಗ್ಗೆ ಹೆಚ್ಚಿನ ಗಮನಹರಿಸಬೇಕಾದ ಜವಬ್ದಾರಿ ಇದೆ. ಆಗ ಆರೋಗ್ಯಪೂರ್ಣ ಸಮಾಜ ಆಗುತ್ತದೆ ಎಂದರು.
ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಧ್ಯಮ ಮಾಡಬೇಕು. ಈ ಪೈಪೋಟಿಯ ಭರಟೆಯಲ್ಲಿ ಸಂಸ್ಕೃತಿ, ಧರ್ಮಕ್ಕೆ ದಕ್ಕೆ ಬಾರದಂತೆ ಎಚ್ಚರಿಕೆ ವಹಿಸಬೇಕು ಎಂದು ಕಿವಿ ಮಾತು ಹೇಳಿದರು.
ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಯಡಿಯೂರು ಸಂಸ್ಥಾನದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿಯವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪತ್ರಕರ್ತರನ್ನು ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

