ಚಿಕ್ಕಮಗಳೂರು

ಮತದಾರರ ಮರೆತ ಬಿಜೆಪಿ ಸರ್ಕಾರ: ಜಯಪ್ರಕಾಶ್ ಹೆಗ್ಡೆ

Published On :

ಮೂಡಿಗೆರೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯ ಅಭಿವೃದ್ಧಿ ಮಾಡದೇ ತಮ್ಮ ಅಭಿವೃದ್ಧಿ ಮಾಡುತ್ತಾ ಮತದಾರರನ್ನು ಮರೆತಿದ್ದಾರೆ. ಕಳಪೆ ಕಾಮಗಾರಿ ಮಾಡುತ್ತಾ ಅಧಿಕಾರಿಗಳು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಇದರಿಂದ ಜನರು ಬೇಸತ್ತಿದ್ದು ಪಟ್ಟಣ ಪಂಚಾಯತ್ ಹಾಗೂ ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಚಿಕ್ಕಮಗಳೂರು -ಉಡುಪಿ ಸಂಸದ ಜಯಪ್ರಕಾಶ್ ಹೆಗ್ಡೆ ತಿಳಿಸಿದರು.
ಪಟ್ಟಣ ಪಂಚಾಯತ್ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಸರ್ಕಾರ ಉಳಿಸಿಕೊಳ್ಳಲು ಆಪರೇಷನ್ ಕಮಲ ಮಾಡಿದವರು ಈಗ ಕಮಲವನ್ನೇ ಆಪರೇಷನ್ ಮಾಡಿ ಮೂರು ಇಬ್ಬಾಗ ಮಾಡಿದ್ದಾರೆ. ಮೂರು ಮಖ್ಯಮಂತ್ರಿಗಳಾದರೂ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ, ಭ್ರಷ್ಟಾಚಾರ, ಆಡಳಿತ ಯಂತ್ರ ಕುಸಿತದಿಂದ ಅಭಿವೃದ್ಧಿ ಕಾರ್ಯ ಹಿನ್ನಡೆಯಾಗಿದೆ. ಕಾಂಗ್ರೆಸ್ ಗೆಲುವು ಖಚಿತ ಎಂದರು.
ಕೊಳೆತು ನಾರುತ್ತಿದೆ: ವಿಧಾನಪರಿಷತ್ ಸದಸ್ಯೆ ಮೋಟಮ್ಮ ಮಾತನಾಡಿ, ರಾಜ್ಯ ಸರ್ಕಾರ ಕೋಮಾದಲ್ಲಿರುವುದು ಜನತೆಗೆ ಗೊತ್ತಿದ್ದರೂ ಒಂದೆಡೆ ಒಳ್ಳೆಯ ಆಡಳಿತ ನೀಡುತ್ತಿದ್ದೇವೆಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳುತ್ತಿದ್ದಾರೆ. ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಬಿಜೆಪಿ ಹೊಳೆಯುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಅದು ಹೊಳೆಯುತ್ತಿಲ್ಲ, ಕೊಳೆತು ನಾರುತ್ತಿದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಆಡಳಿತವನ್ನು ಕಂಡ ಜನರು ಮೊದಲು ಈ ಪಕ್ಷ ತೊಲಗಿಬಿಡಲಪ್ಪಾ ಎಂಬ ಮನೋಭಾವನೆಗೆ ಬಂದಿದ್ದಾರೆ. ಕೆಜೆಪಿ, ಬಿಎಸ್‌ಆರ್ ಪಕ್ಷಗಳಿಗೆ ತಳಪಾಯವೇ ಇಲ್ಲ. ಆದರೂ ಕೂಡ ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ಹಾಕಿ ಜನರ ದಿಕ್ಕು ತಪ್ಪಿಸುತ್ತಿವೆ. ಇದರ ಬಗ್ಗೆ ಜನರು ಆಲೋಚನೆ ಮಾಡಬೇಕು. ಕಾಂಗ್ರೆಸ್‌ಗಿರುವ ಬದ್ಧತೆ ಬೇರೆ ಯಾವ ಪಕ್ಷಗಳಲ್ಲಿಲ್ಲ. ಕೆಪಿಸಿಸಿ ರಾಜ್ಯಾದ್ಯಂತ ಬಿಡುಗಡೆಗೊಳಿಸಿದ ಪ್ರನಾಳಿಕೆಯಲ್ಲಿ ಜನಪರ ಕಾರ್ಯಕ್ರಮಗಳನ್ನು ಮಾಡಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು.  
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ. ಮನು ಮಾತನಾಡಿ, ಮೂಡಿಗೆರೆ ಪಪಂ ಚುನಾವಣೆಯಲ್ಲಿ 11 ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಆದರೆ 2 ಮತ್ತು 3ನೇ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರೆಂದು ಜನರಲ್ಲಿ ಗೊಂದಲ ಮೂಡುತ್ತಿದೆ. 2ನೇ ವಾರ್ಡ್‌ನಲ್ಲಿ ಎಂ. ಲಲಿತಾ, 3ನೇ ವಾರ್ಡ್‌ನಲ್ಲಿ ರಮೀಜಾಬಿ ಇವರಿಬ್ಬರೂ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳಾಗಿದ್ದು ಜನರು ಗೊಂದಲಕ್ಕೀಡಾಗಬಾರದೆಂದು ತಿಳಿಸಿದರು.
ಹಿಂದೆಂದೂ ಕಾಣದ ಭ್ರಷ್ಟಾಚಾರ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಮೂರ್ತಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹಿಂದೆದೂ ಕಾಣದಷ್ಟು ಭ್ರಷ್ಟಾಚಾರ, ಸ್ವಜನ ಪಕ್ಷಪಾತ ನಡೆಸಿದೆ. ಇದರಿಂದ ಬೇಸತ್ತ ಮತದಾರರು ಈ ಬಾರಿ ಕಾಂಗ್ರೆಸ್‌ಗೆ ಹೆಚ್ಚಿನ ಬೆಂಬಲ ಸೂಚಿಸಿದ್ದಾರೆ ಎಂದರು.
ಗೋಷ್ಠಿಯಲ್ಲಿ ಮಾಜಿ ಸಚಿವ ಬಿ.ಬಿ. ನಿಂಗಯ್ಯ, ಕೆಪಿಸಿಸಿ ಕಾರ್ಯದರ್ಶಿಗಳಾದ ಬಿ.ಎನ್. ಚಂದ್ರಪ್ಪ,  ಜಿ.ಎಚ್. ಹಾಲಪ್ಪಗೌಡ, ಅಕ್ರಂ, ಯು.ಎಚ್. ಹೇಮಶೇಖರ್, ಡಿ.ಎಸ್. ರಘು, ಸುಬ್ರಹ್ಮಣ್ಯ, ಮಹೇಶ್, ಸಿ.ಕೆ. ಇಬ್ರಾಹಿಂ, ಸಂಪತ್, ಮಂಚೇಗೌಡ, ಬಿ.ಎಸ್. ಜಯರಾಂ, ಎಂ.ಎನ್.ಅಶ್ವತ್ಥ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.