ಚಿಕ್ಕಮಗಳೂರು

ಹಣ ಕೊಡುವುದು- ತೆಗೆದುಕೊಳ್ಳುವುದು ಅಪರಾಧ

Published On :

ಕ.ಪ್ರ. ವಾರ್ತೆ, ಚಿಕ್ಕಮಗಳೂರು, ಮಾ.25
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಣ ಹಂಚಿಕೆಯಂತಹ ಪ್ರಕರಣಗಳು ಕಂಡು ಬಂದರೆ ಹಣ ಕೊಟ್ಟವರು ಮತ್ತು ತೆಗೆದುಕೊಂಡವರಿಬ್ಬರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿ. ಯಶವಂತ್ ಹೇಳಿದ್ದಾರೆ.
ತಮ್ಮ ಕಚೇರಿ ಸಭಾಂಗಣದಲ್ಲಿ ಚುನಾವಣೆ ನಿಮಿತ್ತ ಸೋಮವಾರ ನಡೆದ ವಿವಿಧ ರಾಜಕೀಯ ಪಕ್ಷಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಶೇಷ ತಂಡ; ಚುನಾವಣಾ ಅಕ್ರಮಗಳು ಶಿಕ್ಷಾರ್ಹ ಅಪರಾಧವಾಗಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ 24 ಗಂಟೆಗಳ ಕಾಲವೂ ನಿಗಾ ವಹಿಸಲಾಗುವುದು. ಇದಕ್ಕಾಗಿ ಜಿಲ್ಲೆಯಾದ್ಯಂತ 39 ವಿಶೇಷ ತಂಡಗಳನ್ನು ರಚಿಸಲಾಗಿದೆ. ಚುನಾವಣೆಯಲ್ಲಿ ಭ್ರಷ್ಟ ಮಾರ್ಗಗಳನ್ನು ಅನುಸರಿಸದಂತೆ ರಾಜಕೀಯ ಪಕ್ಷಗಳಿಗೆ ಕಿವಿಮಾತು ಹೇಳಿದರು.
ಎಲ್ಲಾ ರಾಜಕೀಯ ಪಕ್ಷಗಳೂ ಮಾದರಿ ನೀತಿ ಸಂಹಿತೆ ಅನುಸರಿಸಬೇಕು. ಚುನಾವಣಾ ಪ್ರಚಾರದಲ್ಲಿ ಪ್ರಚೋದನಕಾರಿ ಹೇಳಿಕೆ, ಮತೀಯ ಸ್ವಾಸ್ಥ್ಯ ಕೆಡುವ ಮತ್ತು ವೈಯಕ್ತಿಕ ನಿಂದನೆಯ ಹೇಳಿಕೆಗಳನ್ನು ನೀಡುವಂತಿಲ್ಲ. ಜಾತಿ- ಮತಗಳ ಆಧಾರದಲ್ಲೂ ಮತಯಾಚನೆ ಮಾಡುವಂತಿಲ್ಲ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಅನ್ಯ ಪಕ್ಷಗಳ ಸಭೆ, ಕಾರ್ಯಕ್ರಮಗಳಿಗೆ ತೊಂದರೆ ಮಾಡದಂತೆ ರಾಜಕೀಯ ಪಕ್ಷಗಳನ್ನು ವಿನಂತಿಸಿದರು.
ಏಕಗವಾಕ್ಷಿ ಕೇಂದ್ರ: ಧ್ವನಿವರ್ಧಕಗಳ ಬಳಕೆಗೆ ಅನುಮತಿ ಪಡೆದಿರಬೇಕು. ರಾತ್ರಿ 10 ಗಂಟೆಯ ನಂತರ ಇವುಗಳನ್ನು ಬಳಸುವಂತಿಲ್ಲ. ರಾಜಕೀಯ ಪಕ್ಷಗಳ ಸಭೆಗಳನ್ನು ವೀಡಿಯೋ ಚಿತ್ರೀಕರಣ ಮಾಡಲಾಗುವುದು. ಸಭೆಗಳಿಗೆ ವಿವಿಧ ಇಲಾಖೆಗಳ ಅನುಮತಿಯನ್ನು ಒಂದೇ ಕಡೆ ದೊರಕಿಸಲು ಆಯಾ ಚುನಾವಣಾಧಿಕಾರಿಗಳ ಕಚೇರಿಯಲ್ಲೇ ಏಕಗವಾಕ್ಷಿ ಕೇಂದ್ರವನ್ನು ತೆರೆಯಲಾಗುವುದು ಎಂದು ತಿಳಿಸಿದರು.
ಈ ಬಾರಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ನಗರ ಪ್ರದೇಶಗಳಲ್ಲಿ ಪ್ರತೀ 1400 ಮತದಾರರಿಗೆ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರತೀ 1200 ಮತದಾರರಿಗೊಂದರಂತೆ ಮತಗಟ್ಟೆಗಳನ್ನು ತೆರೆಯಲಾಗುತ್ತದೆ. ಚುನಾವಣೆಗೆ 3 ದಿನ ಮುಂಚಿತವಾಗಿ ಮತಗಟ್ಟೆ ಅಧಿಕಾರಿಗಳು ವೋಟರ್ ಸ್ಲಿಪ್‌ಗಳನ್ನು ಮನೆ ಮನೆಗೆ ವಿತರಿಸಲಿದ್ದಾರೆ ಎಂದು ಹೇಳಿದ ಜಿಲ್ಲಾಧಿಕಾರಿಗಳು, ನಿಷ್ಪಕ್ಷಪಾತ ಮತ್ತು ಶಾಂತಿಯುತ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ್ ಮಾತನಾಡಿ, ರಾಜಕೀಯ ಪಕ್ಷಗಳ ಸಭೆಗಳಿಗೆ ಅನುಮತಿಯನ್ನು ಪಡೆದಿರಬೇಕು. ಚುನಾವಣಾ ಅಕ್ರಮಗಳ ದೂರು ಸ್ವೀಕಾರಕ್ಕೆ ಮತ್ತು ಅವುಗಳಿಗೆ ತ್ವರಿತವಾಗಿ ಸ್ಪಂದಿಸಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಜಾಥಾ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ. ಶಿವಶಂಕರ್ ಮಾತನಾಡಿ, ಮತದಾನಕ್ಕೆ ಪ್ರೇರಣೆ ನೀಡಲು ಈ ಬಾರಿ ಚುನಾವಣಾ ಆಯೋಗವು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಏಪ್ರಿಲ್ 1ರಿಂದ 7ರ ವರೆಗೆ ಜಿಲ್ಲೆಯ ಎಲ್ಲ ಶಾಲೆಗಳಲ್ಲೂ ಈ ನಿಟ್ಟಿನಲ್ಲಿ ಜಾಥಾ ನಡೆಯಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಪ್ರೇಂಕುಮಾರ್, ವರಸಿದ್ಧಿ ವೇಣುಗೋಪಾಲ್, ಮಹೇಶ್, ಶ್ರೀಧರ್ ಉರಾಳ್, ಚಂದ್ರಪ್ಪ, ಕೆ.ಟಿ. ರಾಧಾಕೃಷ್ಣ, ಪರಮೇಶ್, ವಿಶ್ವನಾಥ್ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.