ಚಿಕ್ಕಮಗಳೂರು

ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆ

Published On :

ಕೇಂದ್ರ ಸಚಿವ ಮುನಿಯಪ್ಪ ವಿಶ್ವಾಸ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಪರ ಪ್ರಚಾರ
ಕ.ಪ್ರ.ವಾರ್ತೆ, ಬೀರೂರು, ಮೇ.2 ಕಾಂಗ್ರೆಸ್ ಪಕ್ಷ ತನ್ನದೇ ಆದ ಇತಿಹಾಸ ಹೊಂದಿ ಜಾತ್ಯತೀತ ರಾಷ್ಟ್ರದ ಹಿತ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಾ ಬಂದಿದ್ದು, ಮತದಾರರು ಬೇರೆ ಬೇರೆ ಪಕ್ಷಗಳ ಆಡಳಿತವನ್ನು ಒರೆಗಲ್ಲಿಗೆ ಹಚ್ಚಿ ನೋಡಿ ಕಾಂಗ್ರೆಸ್ ತತ್ವ ಸಿದ್ಧಾಂತಗಳಿಗೆ ಒಲವು ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಲಿದೆ ಎಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.   
  ಅವರು ಕಡೂರು ವಿಧಾನಸಭಾ ಕ್ಷೇತ್ರದ ಬೀರೂರು ಪಟ್ಟಣದ ವಾಸವಿ ಸಭಾಂಗಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಮಲ್ಲಿಕಾರ್ಜುನ ಪರವಾಗಿ ಏರ್ಪಡಿಸಲಾಗಿದ್ದ ಚುನಾವಣಾ ಪ್ರಚಾರದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಅಭಿವೃದ್ಧಿಗೆ ಬದ್ಧ: ಇಂದಿರಾಗಾಂಧಿಯವರಿಗೆ ಪುನರ್ಜನ್ಮ  ನೀಡಿದ ಈ ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್ ಬದ್ಧವಾಗಿದೆ. ಜಿಲ್ಲೆಯ ಬಯಲು ಪ್ರದೇಶ ಹಾಗೂ ಮಲೆನಾಡನ್ನು ಬೆಸೆಯುವ ಚಿಕ್ಕಮಗಳೂರು ರೇಲ್ವೇ ಸೇವೆ ಇನ್ನು ಮೂರು ತಿಂಗಳಲ್ಲಿ ಆರಂಭಗೊಳ್ಳಲಿದೆ ಎಂದರು.
  ಸಕಲೇಶಪುರ, ಹಾಸನ, ಬೆಂಗಳೂರು, ಮಂಗಳೂರು ಸಂಪರ್ಕಕ್ಕೆ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಬೀರೂರಿನ ರೇಲ್ವೆ ಜಂಕ್ಷನ್ ಅಭಿವೃದ್ಧಿಗಾಗಿ ವಿವಿಧ ರೀತಿಯ ಸೇವೆ ಕಲ್ಪಿಸುವ ಸಲುವಾಗಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕಾಯರ್ ಬೋರ್ಡ್‌ನಿಂದ ಉತ್ಪನ್ನಗಳ ತಯಾರಿಕೆಗಾಗಿ ಕಡೂರಿನಲ್ಲಿ ನೂತನ ಕೇಂದ್ರ ತೆರೆಯಲು ನಿರ್ಧರಿಲಾಗಿದೆ ಎಂದರು.    
ರು. 25 ಲಕ್ಷದವರೆಗೆ ಭದ್ರತೆ: ವಿವಿಧ ರೀತಿಯ ಘಟಕಗಳ ಆರಂಭಕ್ಕಾಗಿ ಮತ್ತು ಸ್ವಾವಲಂಬಿ ಜೀವನ ನಡೆಸಲು ಎಸ್.ಸಿ. ಎಸ್ಟಿ ಮತ್ತು ಹಿಂದುಳಿದ ವರ್ಗಗಳಿಗೆ ರು. 25 ಲಕ್ಷದವರೆಗೆ ಭದ್ರತೆ ರಹಿತ ಸಾಲ ವಿತರಣೆಗೆ ಕ್ರಮ ಮತ್ತು ಕೆಲ ಸಾಲಗಳ ಮನ್ನಾ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದರು.
  ಕಾಂಗ್ರೆಸ್ಪ್‌ಕ್ಷವು ಸಭ್ಯ ಮತ್ತು ಉತ್ತಮ ವ್ಯಕ್ತಿಗಳಿಗೆ ಟಿಕೆಟ್ ನೀಡಿದೆ. ಈ ಭಾಗದ ರೈತರ ನೀರಾವರಿ ಯೋಜನೆ ಪೂರ್ಣಗೊಳಿಸಲು ಹಾಗೂ ರೈತರಿಗೆ ಉತ್ತಮ ಸೌಲಭ್ಯ ಕಲ್ಪಿಸಲು ಅರ್ಹ ವ್ಯಕ್ತಿಯಾಗಿರುವ ಅಭ್ಯರ್ಥಿ ಕೆ.ಬಿ. ಮಲ್ಲಿಕಾರ್ಜುನ್ ಅವರನ್ನು ಬೆಂಬಲಿಸಿ ಮತದಾರರು ಗೆಲ್ಲಿಸುವಂತೆ  ಕೋರಿದರು.       
ನೀರಾವರಿ ಸೌಲಭ್ಯ: ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಮಲ್ಲಿಕಾರ್ಜುನ್ ಮಾತನಾಡಿ, ಈ ಭಾಗಕ್ಕೆ ಅಗತ್ಯವಾಗಿ ಆಗಬೇಕಾಗಿರುವ ನೀರಾವರಿ ಸೌಲಭ್ಯ ಮತ್ತು ಕುಡಿಯುವ ನೀರು ಒದಗಿಸುವ ಕಾರ್ಯಕ್ಕೆ ಚಾಲನೆ ನೀಡಲು ಮತ್ತು ಹೆಬ್ಬೆ ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ನಿಗಾ ವಹಿಸುವುದಾಗಿ ತಿಳಿಸಿ, ಕಾಂಗ್ರೆಸ್ ಈ ಬಾರಿ ಸ್ವಂತ ಬಲದಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದರು.
ಕಡೂರು, ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಚ್. ಚಂದ್ರಪ್ಪ, ಕೆ.ಎಂ. ವಿನಾಯಕ್, ಕಾಂಗ್ರೆಸ್ ಮುಖಂಡ ಎಚ್.ಎಂ. ಲೋಕೇಶ್, ಕೆ.ಎಸ್. ಆನಂದ್, ಬಿ.ಬಿ. ಜಗದೀಶ್, ಕೆ.ಜಿ. ಶ್ರೀನಿವಾಸಮೂರ್ತಿ, ಚಂದ್ರಮೌಳಿ, ಚಂದ್ರಶೇಖರ್ ಮೊದಲಾವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.