ಶಿಕಾರಿಪುರದಲ್ಲಿ ತ್ರಿಕೋನ ಸ್ಪರ್ಧೆ
ಕ.ಪ್ರ.ವಾರ್ತೆ, ಶಿಕಾರಿಪುರ, ಮೇ.2 ರಾಜ್ಯ ರಾಜಕಾರಣದ ದಿಕ್ಕು ಬದಲಿಸುವ ಬಹು ಮಹತ್ವಾಕಾಂಕ್ಷೆಯಿಂದ ಸ್ವಕ್ಷೇತ್ರ ಶಿಕಾರಿಪುರದಲ್ಲಿ 8 ನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿ ಕಣಕ್ಕಿಳಿದಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತೀವ್ರ ಪೈಪೋಟಿ ನೀಡಲು ಸಾಂಪ್ರದಾಯಿಕ ಎದುರಾಳಿ ಕಾಂಗ್ರೆಸ್ ಜತೆ ಜೆಡಿಎಸ್ ಸಿದ್ದವಾಗಿದ್ದು, ಇದರಿಂದಾಗಿ ತಾಲೂಕಿನಲ್ಲಿ ತ್ರಿಕೋನ ಸ್ಪರ್ಧೆ ಎದುರಾಗಿದೆ.
ಕಳೆದ 3 ದಶಕದಿಂದ ಬಿಜೆಪಿಯ ಭದ್ರಕೋಟೆಯಾಗಿ ಸತತ 6 ಬಾರಿ ಜಯಗಳಿಸಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಳೆದ ಬಾರಿ ಮುಖ್ಯಮಂತ್ರಿ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆಯಾಗಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ವಿರುದ್ಧ 45 ಸಾವಿರಕ್ಕೂ ಅಧಿಕ ದಾಖಲೆ ಮತಗಳ ಅಂತರದಿಂದ ಜಯಗಳಿಸಿ ರಾಜ್ಯದ ಮುಖ್ಯಮಂತ್ರಿ ಪದವಿ ಅಲಂಕರಿಸಿದ್ದರು.
ಕಾಂಗ್ರೆಸ್ ಮೂಲಕ ಸೆಡ್ಡು: ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಹೈಕಮಾಂಡ್‌ಗೆ ಸೆಡ್ಡು ಹೊಡೆದು ವೈಯುಕ್ತಿಕ ಕಾರಣಗಳಿಂದ ಕೆಜೆಪಿ ಮೂಲಕ ಇದೀಗ ಕಣಕ್ಕಿಳಿದಿರುವ ಯಡಿಯೂರಪ್ಪನವರಿಗೆ ಅನಾದಿ ಕಾಲದ ಮಿತ್ರ,ಬಲಗೈ ಬಂಟ ಶಾಂತವೀರಪ್ಪಗೌಡ ಕಾಂಗ್ರೆಸ್ ಮೂಲಕ ಸೆಡ್ಡು ಹೊಡೆದಿರುವುದು ರಾಜಕೀಯ ವಿಪ್ಲವ.
ಕಳೆದ ಬಾರಿ ಅತ್ಯಧಿಕ ಮತಗಳ ಅಂತರದಿಂದ ಜಯಗಳಿಸಿದ್ದ ಯಡಿಯೂರಪ್ಪನವರಿಗೆ ಈ ಬಾರಿ ಕಾಂಗ್ರೆಸ್ ಮೂಲಕ ಶಾಂತವೀರಪ್ಪಗೌಡ ಹಾಗೂ ಜೆಡಿಎಸ್‌ನಿಂದ ನಿವೃತ್ತ ಕೆಎಎಸ್ ಅಧಿಕಾರಿ ಎಚ್. ಬಳಿಗಾರ್ ಪೈಪೋಟಿಯನ್ನು ನೀಡುತ್ತಿದ್ದಾರೆ.
ತಾಲೂಕಿನಲ್ಲಿ ಅಧಿಕವಾಗಿರುವ ಸಾಧು ವೀರಶೈವ ಸಮಾಜದ ಶಾಂತವೀರಪ್ಪಗೌಡ ಕಳೆದ ಹಲವು ದಶಕದಿಂದ ಯಡಿಯೂರಪ್ಪನವರ ರಾಜಕೀಯ ಮರ್ಮ ಅರಿತಿದ್ದು, ಈ ಬಾರಿ ದಾಳ ಉರುಳಿಸುವ ಬಗೆಯನ್ನು ಕಾದುನೋಡಬೇಕಾಗಿದೆ.
ಬೇಡಿಕೆಗೆ ಸ್ಪಂದನೆ: ಮುಖ್ಯಮಂತ್ರಿಯಾದ ಅವಧಿಯಲ್ಲಿ ತಾಲೂಕಿನ ರಸ್ತೆ, ಶಾಲೆ, ಕಾಲೇಜು, ಆಸ್ಪತ್ರೆ, ಕುಡಿಯಲು ನೀರು, ನೂತನ ಸರ್ಕಾರಿ ಕಟ್ಟಡ, ಸೇತುವೆ, ದೇವಾಲಯ, ಮಸೀದಿ, ಅಭಿವೃದ್ಧಿ, ಶಾದಿ ಮಹಲ್ ನಿರ್ಮಾಣ ಸಹಿತ ಸ್ಥಳೀಯರ ಅವಶ್ಯಕತೆ ಪೂರೈಸಿದ ಹೆಗ್ಗಳಿಕೆಯ ಮೇರೆಗೆ ಮತಯಾಚನೆಯಲ್ಲಿರುವ ಯಡಿಯೂರಪ್ಪ ಎಲ್ಲಾ ವರ್ಗದ ಜನತೆಯ ಬೇಡಿಕೆಗಳಿಗೆ ಸ್ಪಂದಿಸಿ ಮತದಾರರು ಹೆಚ್ಚಿನ ಅಂತರದಲ್ಲಿ ಆಯ್ಕೆ ಮಾಡುವ ವಿಶ್ವಾಸದಲ್ಲಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಶಾಂತವೀರಪ್ಪ ಗೌಡ, ಅಧಿಕಾರಾವಧಿಯಲ್ಲಿ ಯಡಿಯೂರಪ್ಪನವರ ಆಡಳಿತ ವಿರೋಧಿ ಅಲೆಯ ಜತೆಗೆ ಬಹುಸಂಖ್ಯಾತ ವೀರಶೈವ ಮತ ಹಾಗೂ ಪಕ್ಷದ ಸಾಂಪ್ರದಾಯಿಕ ಮತಗಳ ಬಗ್ಗೆ ಅತೀವ ಆತ್ಮ ವಿಶ್ವಾಸ ಹೊಂದಿ ಜಯಗಳಿಸುವ ನಿರೀಕ್ಷೆಯಲ್ಲಿದ್ದಾರೆ.
ಕೆಜೆಪಿ, ಕಾಂಗ್ರೆಸ್ ಹಾಗೂ ಜನತಾದಳದ ಪ್ರಚಾರದ ಮಧ್ಯೆ ಆಡಳಿತಾರೂಢ ಬಿಜೆಪಿ ತನ್ನ ನೆಲೆಯನ್ನು ಶಾಶ್ವತವಾಗಿ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ. 8ನೇ ಬಾರಿ ಶಿಕಾರಿಪುರದ ಮೂಲಕ ರಾಜ್ಯದಲ್ಲಿ ಅಧಿಪತ್ಯ ಸ್ಥಾಪಿಸಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲಾ ರೀತಿಯ ಹೋರಾಟಕ್ಕೆ ಸಿದ್ದವಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

