'ಸೋಲನ್ನೂ ಸವಾಲಾಗಿ ಸ್ವೀಕರಿಸುವೆ'
ಕ.ಪ್ರ.ವಾರ್ತೆ, ಕೊಪ್ಪ, ಮೇ 12 ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ ನನಗೆ ಶೃಂಗೇರಿ ಕ್ಷೇತ್ರದ ಮತದಾರರು 54.950 ಮತ ನೀಡಿ ಆಶೀರ್ವದಿಸಿದ್ದಾರೆ. ಸೋಲುಂಟಾಗಿದ್ದರೂ, ಅದರಿಂದ ಧೃತಿಗೆಡದೆ, ಸವಾಲಾಗಿ ಸ್ವೀಕರಿಸಿ, ಮುಂದಿನ ದಿನಗಳಲ್ಲಿ ಕ್ಷೇತ್ರದ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸುವ ಮೂಲಕ ಮತದಾರರ ಋಣ ತೀರಿಸುತ್ತೇನೆ ಎಂದು ಪರಾಜಿತ ಅಭ್ಯರ್ಥಿ ಟಿ.ಡಿ. ರಾಜೇಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ 8 ಹೋಬಳಿಗಳ ಮತದಾರರು, ಕಾರ್ಯಕರ್ತರು ಮತ್ತು ಮುಖಂಡರ ಶ್ರಮ, ಪ್ರಜಾಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳ ಬೆಂಬಲದಿಂದ ಪಕ್ಷ ಇಷ್ಟೊಂದು ಮತ ಪಡೆಯಲು ಸಾಧ್ಯವಾಯಿತು. ಅವರೆಲ್ಲರಿಗೂ ನಾನು ಋಣಿಯಾಗಿದೇನೆ ಎಂದರು.
ಸ್ವಲ್ಪ ಹಿನ್ನಡೆ: ವೈಯಕ್ತಿಕ ಬದುಕಿನಲ್ಲಾದ ಆಘಾತದಿಂದಾಗಿ ಬಹುತೇಕ ಮತದಾರರನ್ನು ಮುಖತಃ ಭೇಟಿಯಾಗಲು ಸಾಧ್ಯವಾಗದಿರುವ ಬಗ್ಗೆ ಕ್ಷಮೆಯಿರಲಿ, ಬಿಜೆಪಿಯವರು ವ್ಯಾಪಕ ಹಣ, ಹೆಂಡ ಹಂಚಿ ಮತ ಖರೀದಿಗೆ ಮುಂದಾಗಿದ್ದರಿಂದ ಪಕ್ಷಕ್ಕೆ ಸ್ವಲ್ಪ ಹಿನ್ನಡೆಯಾಗಿದೆ ಎಂದರು.
ರಾಜ್ಯದಲ್ಲಿ ನಮ್ಮದೇ ಸರ್ಕಾರ ಆಡಳಿತವಿರುವುದರಿಂದ ಕ್ಷೇತ್ರದ ಜ್ವಲಂತ ಸಮಸ್ಯೆಗಳಾದ ಅಡಕೆ ಹಳದಿ ಎಲೆ ರೋಗ ಸಂತ್ರಸ್ತರಿಗೆ ಪರಿಹಾರ ಒದಗಿಸುವುದು, ಒತ್ತುವರಿ ಸಮಸ್ಯೆ ಬಗೆಹರಿಸುವುದು, ಕುಡಿಯುವ ನೀರು ಪೂರೈಕೆ ವ್ಯವಸ್ಥೆ, ಗ್ರಾಮೀಣ ರಸ್ತೆ ಅಭಿವೃದ್ಧಿ, ಬಡವರ ಕಲ್ಯಾಣಕ್ಕೆ ರಾಜ್ಯ ನಾಯಕರ ಜತೆ ಚರ್ಚಿಸಿ ವಿಶೇಷ ಅನುದಾನ ಕೊಡಿಸುವಲ್ಲಿ ಶ್ರಮಿಸುತ್ತೇನೆ ಎಂದರು.
ಕಳಪೆ ಕಾಮಗಾರಿ ತನಿಖೆ: ಕ್ಷೇತ್ರದಲ್ಲಿ ನಡೆಯುತ್ತಿರುವ ಮರಳು ದಂಧೆ, ಕಲ್ಲು ಗಣಿಗಾರಿಕೆ, ಕ್ರಿಯಾ ಯೋಜನೆಯಿಲ್ಲದೆ ನಡೆಸಿದ ಕಳಪೆ ಕಾಮಗಾರಿ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಲು ಹೋರಾಟ ರೂಪಿಸುವುದಾಗಿ ತಿಳಿಸಿದರು.
ಶಾಸಕನಾದರೆ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸುವ ಅದ್ಭುತ ಕನಸು ಹೊಂದಿದ್ದೆ, ಅದು ಭಗ್ನಗೊಂಡಿರುವ ಬಗ್ಗೆ ನಿರಾಸೆಯಾಗಿದೆ. ಚುನಾವಣೆ ಸಂದರ್ಭ ನನ್ನ ವಿರುದ್ಧ ನಡೆದ ಕೀಳು ಮಟ್ಟದ ಅಪಪ್ರಚಾರಕ್ಕೆ ಕಾಲವೇ ಉತ್ತರ ಹೇಳುತ್ತದೆ ಎಂದವರು ಹೇಳಿದರು.
ಶಾಂತಿ ಕಾಪಾಡಲು ನಮ್ಮ ಕಾರ್ಯಕರ್ತರು ಎಷ್ಟೇ ಪ್ರಯತ್ನಪಟ್ಟರೂ, ಅವರ ಮೇಲೆ ಬಿಜೆಪಿಯವರು ಹಲ್ಲೆ ನಡೆಸಿದರು. ವಿಜಯೋತ್ವವದ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರ ಮನೆ ಮೇಲೆ ಪಟಾಕಿ ಎಸೆದರು. ಬೇಲಿ ಮೇಲೆ ಪಟಾಕಿ ಇಟ್ಟು ಸಿಡಿಸಿದರು, ಇಂತಹ ಅನಾಗರಿಕ ಕೃತ್ಯಗಳ ಬಗ್ಗೆ ಪೊಲೀಸ್ ಇಲಾಖೆ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ ಎಂದರು.
ಮುಖ್ಯಂತ್ರಿಯಾಗಿ ಸಿದ್ದರಾಮಯ್ಯ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ ಪಕ್ಷದ ಹೈಕಮಾಂಡ್ ಮತ್ತು ಶಾಸಕರನ್ನು ಅವರು ಈ ಸಂದರ್ಭದಲ್ಲಿ ಅಭಿನಂದಿಸಿದರು.
ಸಮನ್ವಯ ಸಮಿತಿ ಅಧ್ಯಕ್ಷ ಎಚ್.ಜಿ. ವೆಂಕಟೇಶ್ ಸೋಲಿನ ಬಗ್ಗೆ ಕಾರಣ ಹುಡುಕಿ ಮುಂದಿನ ದಿನಗಳಲ್ಲಿ ಸರಿಪಡಿಸಿಕೊಂಡು ಪಕ್ಷವನ್ನು ಸದೃಢವಾಗಿ ಕಟ್ಟಲಾಗುವುದು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶೋಭಿಂತ್, ಮುಖಂಡ ಚನ್ನಕೇಶವ ಗೌಡ, ಇಫ್ತಿಕರ್, ಅದಿಲ್,ಅಂಶುಮಂತ್, ಅಸಗೋಡು ನಾಗೇಶ್, ಓಣಿತೋಟ ರತ್ನಾಕರ್, ಎಚ್.ಎಸ್. ಕಳಸಪ್ಪ ಮೊದಲಾದವರು ಇದ್ದರು.
ಎತ್ತಿನಗಾಡಿ ಸ್ಪರ್ಧೆ: ನವೀನ್ಗೆ ಪ್ರಥಮ
ಕಡೂರು: ಪಟ್ಟಣದಲ್ಲಿ ಬಸವೇಶ್ವರ ಜಯಂತಿ ಪ್ರಯುಕ್ತ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಜೋಡಿ ಎತ್ತಿನಗಾಡಿ ಸ್ಪರ್ಧೆಯಲ್ಲಿ ತರೀಕೆರೆ ತಾಲೂಕು ನಾರಾಯಣಪುರದ ನವೀನಕುಮಾರ್ ಪ್ರಥಮ ಸ್ಥಾನ ಗಳಿಸಿದ್ದು, 30 ಸಾವಿರ ನಗದು ಮತ್ತು ಟ್ರೋಫಿ ಗಳಿಸಿದ್ದಾರೆ.
ಎರಡು ದಿನಗಳ ಕಾಲ ಪಟ್ಟಣದ ಎಪಿಎಂಸಿ ಆವರಣದಲ್ಲಿ ಜರುಗಿದ ಜೋಡಿ ಎತ್ತಿನಗಾಡಿ ಸ್ಪರ್ಧೆಯಲ್ಲಿ ರಾಜ್ಯದ ಹೊಳೇನರಸೀಪುರ, ಕೆ. ಆರ್.ಪೇಟೆ, ಸಾಲಿಗ್ರಾಮ, ತರೀಕೆರೆ ತಾಲೂಕು ನಾರಾಯಣಪುರ, ತರೀಕೆರೆ, ಚಿಕ್ಕಮಗಳೂರಿನ ಕೋಟೆ, ಚಿಕ್ಕಮಗಳೂರು ತಾಲೂಕಿನ ತೇಗೂರು ಮತ್ತಿತರ ಕಡೆಗಳಿಂದ ಸುಮಾರು 66ಕ್ಕೂ ಹೆಚ್ಚು ಸ್ಫರ್ಧಿಗಳು ಮತ್ತು ಎತ್ತುಗಳು ಭಾಗವಹಿಸಿದ್ದವು.
ಉತ್ತಮ ಸ್ಫರ್ಧೆ ನೀಡಿದ ಎಲ್ಲ ಸ್ಪರ್ಧಾರ್ಥಿಗಳು ಎತ್ತುಗಳು ಗಾಡಿ ಎಳೆಯುವ ಮೂಲಕ ಸಮಯವನ್ನು ಕ್ರಮಿಸಲು ಹರಸಾಹಸ ಪಡುವ ಮೂಲಕ ಅಂತಿಮ ಸುತ್ತಿನಲ್ಲಿ ತರೀಕೆರೆ ತಾಲೂಕು ನಾರಾಯಣಪುರ ಗ್ರಾಮದ ನವೀನಕುಮಾರ್ ಎತ್ತುಗಳಿದ್ದ ಗಾಡಿಯು ನಿಗದಿಪಡಿಸಿದ ಅವಧಿ ಪೂರೈಸುವ ಮೂಲಕ ಅಂತಿಘಟ್ಚ ತಲುಪಿ ಪ್ರಥಮ ಸ್ಥಾನ ಗಳಿಸಿತು.
ದ್ವೀತಿಯ ಬಹುಮಾನವನ್ನು ಚಿಕ್ಕಮಗಳೂರು ತಾಲೂಕು ತೇಗೂರು ಗ್ರಾಮದ ಮಂಜುನಾಥ ಅರಸ್, ಮೂರನೇ ಸ್ಥಾನವನ್ನು ಅದೇ ತೇಗೂರಿನ ಪ್ರಶಾಂತ ಅರಸ್ ಪಡೆಯುವ ಮೂಲಕ 12 ಸಾವಿರ ರೂ ನಗದು ಬಹುಮಾನ ಮತ್ತು ಟ್ರೋಫಿ ಪಡೆದುಕೊಂಡಿದ್ದಾರೆ.
ಚಿಕ್ಕಮಗಳೂರು ಹಂಪಾಪುರದ ಪಟ್ಟೇಗೌಡರು ನಾಲ್ಕನೇ ಸ್ಥಾನ ಪಡೆದುಕೊಂಡರು. ಸ್ಪರ್ಧೆ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಆಯೋಜಕರಾದ ವೀರಭದ್ರೇಶ್ವರ ಯುವಕ ಸಂಘದ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

