ಕಾಫಿ ನಾಡಲ್ಲಿ ಖೋಟಾ ನೋಟು ದಂಧೆ
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಅದರಲ್ಲೂ ಮೂಡಿಗೆರೆಯಲ್ಲಿ ಖೋಟಾ ನೋಟುಗಳು ಅಧಿಕ ಸಂಖ್ಯೆಯಲ್ಲಿ ಚಲಾವಣೆಯಾಗುತ್ತಿವೆ. ಅಸಲಿ ನೋಟುಗಳ ಜತೆಗೆ ಅಲ್ಲೊಂದು, ಇಲ್ಲೊಂದು ಪತ್ತೆಯಾಗುತ್ತಿದ್ದ ನಕಲಿ ನೋಟುಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಅಧಿಕಗೊಂಡಿದೆ.
ನಕಲಿ ನೋಟುಗಳಿಗೆ ಕಡಿವಾಣ ಹಾಕಬೇಕಾದ ಬ್ಯಾಂಕ್ಗಳು ಈ ದಂಧೆಗೂ ತಮಗೂ ಸಮಬಂಧವೇ ಇಲ್ಲವೆನ್ನುವಂತೆ ನಿರ್ಲಕ್ಷ್ಯತಾಳಿವೆ. ಮೂಡಿಗೆರೆಯ ಸಿಂಡಿಕೇಟ್ ಬ್ಯಾಂಕಿಗೆ ಕಳೆದ ಅಕ್ಟೋಬರ್ನಿಂದ ಡಿಸೆಂಬರ್ವರೆಗೆ 1000 ಮುಖಬೆಲೆಯ 4, 500 ಮುಖಬೆಲೆಯ 5 ನೋಟುಗಳು ಒಬ್ಬರೆ ಗ್ರಾಹಕರಿಂದ ಬಂದಿವೆ.
ಅಂಟಿಸಿದ ಕ್ರಮಸಂಖ್ಯೆ: ಈ ಗ್ರಾಹಕರು ಮೂಡಿಗೆರೆಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಈ ಬ್ಯಾಂಕಿನ ಕ್ಯಾಷಿಯರ್ ಅವರು ಜಾಗೃತಿ ವಹಿಸಿದ್ದರಿಂದ ಈ ನೋಟುಗಳು ಮುಂದೆ ಚಲಾವಣೆಯಾಗದಂತೆ ತಡೆ ಹಿಡಿಯುವ ಕೆಲಸ ಆಗಿದೆ. ಇಲ್ಲಿ ಸಿಕ್ಕಿರುವ 500 ಮುಖಬೆಲೆಯ 5 ನೋಟುಗಳಲ್ಲಿ ಒಂದು ನೋಟಿನಲ್ಲಿ ಕ್ರಮ ಸಂಖ್ಯೆ ಇಲ್ಲ. ಅದಕ್ಕೆ 5ರ ನೋಟಿನ ಕ್ರಮಸಂಖ್ಯೆಯಲ್ಲಿ ಅಂಟಿಸಿ ಚಲಾವಣೆಗೆ ಪ್ರಯತ್ನಿಸಲಾಗಿದೆ.
ಜಿಲ್ಲೆಯ 7 ತಾಲೂಕುಗಳ ಪೈಕಿ ಮೂಡಿಗೆರೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ನಕಲಿ ನೋಟುಗಳ ಹಾವಳಿ ಅಧಿಕವಾಗಿದೆ.
ಇದಕ್ಕೆ ಕಾರಣ. ಮೂಡಿಗೆರೆ ತಾಲೂಕು ಕರಾವಳಿ ಜಿಲ್ಲೆಗೆ ಹೊಂದಿಕೊಂಡಿದ್ದು, ನಕಲಿ ನೋಟುಗಳು ಕಾಸರಗೋಡುನಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೂಲಕ ಮೂಡಿಗೆರೆಗೆ ಬರುತ್ತಿವೆ ಎಂದು ಹೇಳಲಾಗುತ್ತಿದೆ.
ಬಾರ್ಗಳೇ ಚಲಾವಣೆ ಕೇಂದ್ರ: ಪ್ರಮುಖವಾಗಿ ಬಾರ್ ಅಂಡ್ ರೆಸ್ಟೋರೆಂಟ್ಗಳಲ್ಲಿ ಇವುಗಳ ಚಲಾವಣೆ ಅವ್ಯಾಹತವಾಗಿ ನಡೆಯುತ್ತಿದೆ. ಪ್ರತಿ ದಿನ ಲಕ್ಷಾಂತರ ರುಪಾಯಿ ವ್ಯವಹಾರ ನಡೆಸುತ್ತಿರುವ ಇಲ್ಲಿನ ಬಾರ್ ಅಂಡ್ ರೆಸ್ಟೋರೆಂಟ್ಗಳು ಬ್ಯಾಂಕಿಗೆ ಹಣ ಜಮಾ ಮಾಡುವ ವೇಳೆಯಲ್ಲಿ ಇಂತಹ ನೋಟುಗಳು ಪತ್ತೆಯಾಗುತ್ತಿವೆ.
ಬ್ಯಾಂಕಿನ ವ್ಯವಹಾರದ ಸಮಯದ ಕೊನೆ ಗಳಿಗೆಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ನವರು ಹಣ ಜಮಾ ಮಾಡಲು ಬರುತ್ತಿದ್ದಾರೆ. ಆ ಕ್ಷಣದಲ್ಲಿ ಕ್ಯಾಷಿಯರ್ ಜಾಗರೂಕತೆ ವಹಿಸದೆ ಹೋದರೆ, ಬ್ಯಾಂಕಿನಿಂದ ಇತರೆ ಗ್ರಾಹಕರ ಕೈಗೆ ಖೋಟಾ ನೋಟುಗಳು ಹೋಗಲಿವೆ. ಅವುಗಳು ವೃದ್ಯಾಪ್ಯ, ಅಂಗವಿಕಲ ವೇತನ ಪಡೆಯುತ್ತಿರುವವರಿಗೆ ತಲುಪಿ, ಅವುಗಳು ನಂತರ ಚಲಾವಣೆಯ ವೇಳೆಯಲ್ಲಿ ನಕಲಿ ನೋಟೆಂದು ತಿಳಿದು ಬಂದರೆ, ಅವುಗಳನ್ನೇ ನಂಬಿರುವ ವೃದ್ಧರ, ಅಂಗವಿಕಲರ ಪರಿಸ್ಥಿತಿ ಏನಾಗಬಹುದು ಎಂಬುದು ಇಲ್ಲಿನ ದೊಡ್ಡ ಪ್ರಶ್ನೆ.
ಜಾಗ್ರತೆ ಅಗತ್ಯ: ಖೋಟಾ ನೋಟು ತಡೆಗಟ್ಟುವಲ್ಲಿ ಬ್ಯಾಂಕ್ಗಳು ಜಾಗೃತರಾಗಬೇಕಾಗುತ್ತದೆ. ಈ ಕೆಲಸ ಕ್ಯಾಷಿಯರ್ ಮತ್ತು ಬ್ಯಾಂಕಿನ ವ್ಯವಸ್ಥಾಪಕರು ಜವಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ವ್ಯವಸ್ಥಾಪಕರು, ಮೃದು ಧೋರಣೆ ತಾಳಿದರೆ, ಖೋಟಾ ನೋಟು ದಂಧೆಯಲ್ಲಿ ತೊಡಗಿರುವವರಿಗೆ ಕುಮ್ಮಕ್ಕು ನೀಡಿದಂತಾಗುತ್ತದೆ. ಇಂತಹ ಬ್ಯಾಂಕಿನಲ್ಲಿ ಪಡೆಯುವ ಪ್ರತಿಯೊಂದು ನೋಟನ್ನು ಅನುಮಾನದಿಂದ ನೋಡುವ ಪರಿಸ್ಥಿತಿ ಬರುತ್ತದೆ.
ಬ್ಯಾಂಕಿಗೆ ನಕಲಿ ನೋಟುಗಳು ಬಂದರೆ, ಅವುಗಳನ್ನು ಕೊಟ್ಟ ಗ್ರಾಹಕರಿಗೆ ಕರೆಸಿ ಮುಂದೆ ಇಂತಹ ನೋಟುಗಳು ಬರದಂತೆ ಎಚ್ಚರಿಕೆ ವಹಿಸಿ ಎಂದು ಹೇಳುವ ಜತೆಗೆ ಸಮೀಪದ ಪೊಲೀಸ್ ಠಾಣೆಗೆ ಹಾಗೂ ಸಂಬಂಧಪಟ್ಟ ಲೀಡ್ ಬ್ಯಾಂಕಿಗೆ ವ್ಯವಸ್ಥಾಪಕರು ಮಾಹಿತಿ ನೀಡಬೇಕು.
ಈ ಕೆಲಸ ಮಾಡದೆ ಹೋದರೆ, ಖೋಟಾ ನೋಟುಗಳ ಚಲಾವಣೆಗೆ ನೇರವಾಗಿ ಬೆಂಬಲಿಸಿದಂತಾಗುತ್ತದೆ. ಈ ವಿಷಯದಲ್ಲಿ ಬ್ಯಾಂಕಿನ ವ್ಯವಸ್ಥಾಪಕರು ಖೋಟಾ ನೋಟು ಕಣ್ಣಿಗೆ ಕಂಡರೂ ಕಾಣದಂತೆ ಸುಮ್ಮನಾಗುತ್ತಿದ್ದಾರೆ. ಯಾವುದೇ ಗ್ರಾಹಕರು ಬ್ಯಾಂಕಿಗೆ ಖೋಟಾ ನೋಟುಗಳು ಕೊಟ್ಟರೆ ಅವುಗಳನ್ನು ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗೆ ನೀಡಿದರೆ, ಮುಂದಿನ ದಿನಗಳಲ್ಲಿ ತನಿಖೆಯನ್ನು ಎದುರಿಸಬೇಕಾಗುತ್ತದೆ. ಮೂರು ವರ್ಷಕ್ಕೊಮ್ಮೆ ವರ್ಗಾವಣೆಯಾಗುವ ತಾವುಗಳು ಎಲ್ಲೆ ಇದ್ದರೂ ಈ ಪ್ರಕರಣದ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಲು ಬರಬೇಕಾಗುತ್ತದೆ ಎನ್ನುವ ಕಾರಣದಿಂದ ಬ್ಯಾಂಕ್ ಸಿಬ್ಬಂದಿ ಮೌನ ವಹಿಸುತ್ತಿದ್ದಾರೆ.
ತಲೆ ಕೆಡಿಸಿಕೊಳ್ಳದ ವ್ಯವಸ್ಥಾಪಕರು: ಇಂತಹ ಪ್ರಕರಣಗಳ ತನಿಖೆಯನ್ನು ಮೈ ಮೇಲೆ ಎಳೆದುಕೊಳ್ಳುವುದು ಬೇಡವೆಂದು ವ್ಯವಸ್ಥಾಪಕರು ನಕಲಿ ನೋಟುಗಳ ಬಗ್ಗೆ ಅಷ್ಟೇನೂ ತಲೆ ಕೆಡಿಸಿಕೊಳ್ಳುವುದಿಲ್ಲ. ಬಹುತೇಕ ವ್ಯವಸ್ಥಾಪಕರು ಇದೇ ಮನಸ್ಥಿತಿಯನ್ನು ಹೊಂದಿದ್ದಾರೆ ಎಂದು ಹೆಸರು ಹೇಳಲು ಇಚ್ಚಿಸದ ಬ್ಯಾಂಕಿನ ವ್ಯವಸ್ಥಾಪಕರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಪ್ರಕರಣ ದಾಖಲಾಗುತ್ತಿಲ್ಲ: ನಕಲಿ ನೋಟುಗಳ ಚಲಾವಣೆಯ ದಂಧೆ ಬ್ಯಾಂಕಿನವರೆಗೆ ತಲುಪಿದೆ. ಆದರೆ, ಅದು, ಪೊಲೀಸ್ ಇಲಾಖೆಯ ಮೆಟ್ಟಲು ಏರುತ್ತಿಲ್ಲ. ಈ ಕಾರಣದಿಂದಲೇ ಖೋಟಾ ನೋಟುಗಳ ದಂಧೆ ದಿನ ದಿನಕ್ಕೂ ಹೆಚ್ಚಳವಾಗುತ್ತಿದೆ.
ಖೋಟಾ ನೋಟು ಸೇರಿದಂತೆ ಬ್ಯಾಂಕ್ಗಳ ಸುರಕ್ಷತೆಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಪ್ರತಿಯೊಂದು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸೆಕ್ಯೂರಿಟಿ ಕಮಿಟಿ ಇರುತ್ತದೆ. ಈ ಸಮಿತಿಯಲ್ಲಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಲೀಡ್ ಬ್ಯಾಂಕಿನ ಪ್ರತಿನಿಧಿಗಳು ಇರುತ್ತಾರೆ.
ಚರ್ಚಿಸುತ್ತಿಲ್ಲ: ಈ ಸಮಿತಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಸೇರಿ ಸುರಕ್ಷತೆಯ ಬಗ್ಗೆ ಚರ್ಚಿಸಬೇಕು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಖೋಟಾ ನೋಟು ಹಾವಳಿ ಅತಿಯಾಗಿದ್ದರೂ ಕೂಡ ಈ ವಿಷಯ ಸಭೆಯಲ್ಲಿ ಚರ್ಚೆಗೆ ಬರದೆ ಇರುವುದು ವಿಪರ್ಯಾಸದ ಸಂಗತಿ.
ಸಿಂಡಿಕೇಟ್ ಬ್ಯಾಂಕಿಗೆ ಬಂದಿದ್ದ ಖೋಟಾ ನೋಟುಗಳ ಕ್ರಮ ಸಂಖ್ಯೆ
ಮೂಡಿಗೆರೆಯ ಸಿಂಡಿಕೇಟ್ ಬ್ಯಾಂಕಿಗೆ ಒಬ್ಬರೇ ಗ್ರಾಹಕರಿಂದ ಬಂದಿದ್ದ 1000 ಮುಖಬೆಲೆಯ ಖೋಟಾ ನೋಟುಗಳು.
1000 - 7BC 714768
- 6CA 686123
- 7CL 601713
- 0CB 898608
ರು. 500 - 6BR 473908
- 3AB 095262
- 3HV 535222
- 8FE 622135
- 72E 78339 (ಇದು 5 ರುಪಾಯಿ ನೋಟಿನ ಕ್ರಮ ಸಂಖ್ಯೆ)
500 ಮುಖಬೆಲೆಯ ಖೋಟಾ ನೋಟು.
-ಆರ್. ತಾರಾನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

