ಚಿಕ್ಕಮಗಳೂರು

ಶಾಲೆಗಳಲ್ಲಿ ಹೆಚ್ಚುತ್ತಿರುವ ಡೊನೇಷನ್ ಹಾವಳಿ

Published On :

ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ  ಮೇ 19
ಜಿಲ್ಲಾ ಕೇಂದ್ರದಲ್ಲಿ ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಕಾಲೇಜುಗಳು ಕಟ್ಟಡಗಳ ಅಭಿವೃದ್ಧಿ ಹೆಸರಿನಲ್ಲಿ ವಿದ್ಯಾರ್ಥಿಗಳ ಪೋಷಕರಿಂದ ಹಣವನ್ನು ಸುಲಿಗೆ ಮಾಡುತ್ತಿವೆ.
ಈ ಸಂಬಂಧ ಕಳೆದ 15 ದಿನಗಳ ಹಿಂದೆ ಪೋಷಕರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಯಾವ್ಯಾವ ಶಾಲೆ ಮತ್ತು ಕಾಲೇಜುಗಳಲ್ಲಿ ಎಷ್ಟೆಷ್ಟು ಡೊನೇಷನ್ ವಸೂಲಿ ಮಾಡಲಾಗುತ್ತಿದೆ ಎಂಬುದನ್ನು ವಿವರ ಸಹಿತ ದೂರು ನೀಡಿದರೂ ಈವರೆಗೆ ಜಿಲ್ಲಾಡಳಿತ ಅಂತಹ ಶಾಲಾ ಕಾಲೇಜುಗಳ ಮೇಲೆ ಕ್ರಮ ಕೈಗೊಂಡಿರುವುದು ಕಂಡು ಬಂದಿರುವುದಿಲ್ಲ.
ಶಿಕ್ಷಣ ಹಕ್ಕು ಕಾಯ್ದೆ: ಸರ್ಕಾರದ ಅನುದಾನ ಪಡೆಯುತ್ತಿರುವ ಶಾಲಾ ಕಾಲೇಜುಗಳು ಕಟ್ಟಡಗಳ ಅಭಿವೃದ್ಧಿ, ಟೂಷನ್ ಫೀ, ಶಾಲಾ ವಾಹನದ ಸಂಚಾರಕ್ಕಾಗಿ ಹಣ ವಸೂಲಿ ಮಾಡುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಇಂತಹ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಸಿಗುವಂತೆ ಮಾಡಲು ರಾಜ್ಯ ಸರ್ಕಾರ ಕಳೆದ ವರ್ಷ ಅನುದಾನಿತ ಶಾಲೆಗಳಲ್ಲಿ ಶೇ. 25 ರಷ್ಟು ಸೀಟ್‌ಗಳನ್ನು ಬಡ ವಿದ್ಯಾರ್ಥಿಗಳಿಗೆ ಮೀಸಲಿಡಲು ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿತು.
ಜಾಹೀರಾತು: ಅದರಂತೆ ಕೆಲವು ಶಾಲೆಗಳಲ್ಲಿ ಪ್ರವೇಶ ನೀಡಲಾಗುತ್ತಿದೆ. ಇನ್ನುಳಿದ ಸೀಟ್‌ಗಳಿಗೆ ಪ್ರವೇಶ ಪಡೆಯಲು ಬರುವ ವಿದ್ಯಾರ್ಥಿಗಳಿಂದ ಈ ಬಾರಿ ಹೆಚ್ಚು ಡೊನೇಷನ್ ವಸೂಲಿ ಮಾಡಲಾಗುತ್ತಿದೆ. ಕೆಲವು ಪ್ರೌಢಶಾಲೆಗಳು ತಮ್ಮ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಇಂತಿಷ್ಟು ಶೇಕಡವಾರು ಫಲಿತಾಂಶ ಬಂದಿದೆ ಎಂಬ ದೊಡ್ಡ ಜಾಹೀರಾತು ನೀಡುತ್ತಿವೆ. ಇನ್ನು ಕೆಲವು ಶಾಲೆ ಮತ್ತು ಕಾಲೇಜುಗಳು ಬಣ್ಣ ಬಣ್ಣದ ಕರಪತ್ರಗಳನ್ನು ಮುದ್ರಿಸಿ ರಾಜ್ಯಮಟ್ಟದ ದಿನಪತ್ರಿಕೆಗಳೊಂದಿಗೆ ಬೆಳಿಗ್ಗೆ ಮನೆ ಮನೆಗಳಿಗೆ ತಲುಪಿಸುವ ಕೆಲಸ ಮಾಡುತ್ತಿವೆ.
ನಿರ್ಲಕ್ಷ್ಯ: ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಡೊನೇಷನ್ ಹಾವಳಿ ಅತಿಯಾಗಿದೆ. ಕೆಲವು ಅನುದಾನ ರಹಿತ ಶಾಲಾ, ಕಾಲೇಜುಗಳ ವಿರುದ್ಧ ಜಿಲ್ಲಾಡಳಿತಕ್ಕೆ ವಿದ್ಯಾರ್ಥಿ ಸಂಘಟನೆಯವರು ಹಾಗೂ ಸಾರ್ವಜನಿಕರು ದೂರು ನೀಡಿದ್ದಾರೆ. ಆದರೆ, ಕ್ರಮ ಈವರೆಗೆ ಶೂನ್ಯ. ದೂರಿಗೆ ಸ್ಪಂದಿಸಬೇಕಾದ ದೊರೆಗಳೇ ನಿರ್ಲಕ್ಷ್ಯ ತೋರಿದರೆ ಇನ್ಯಾರಾ ಬಳಿ ತಮ್ಮ ಕಷ್ಟಗಳು ಹೇಳಿಕೊಳ್ಳುವುದು ಎಂಬುದು ದೂರು ಕೊಟ್ಟ ಸಾರ್ವಜನಿಕರ ಪ್ರಶ್ನೆಯಾಗಿದೆ.
ಅನುದಾನ ರಹಿತ ಶಾಲೆಗಳು ಶಿಸ್ತು ಕ್ರಮದ ವ್ಯಾಪ್ತಿಗೆ ಒಳಪಡುವುದಿಲ್ಲ. ಇದನ್ನು ಮನಸಿನಲ್ಲಿಟ್ಟುಕೊಂಡು ಸುಲಿಗೆ ಮಾಡುವುದರಲ್ಲಿ ಅರ್ಥವಿಲ್ಲ. ಕೆಲವು ಅನುದಾನಿತ ಶಾಲೆಗಳ ಮೇಲೂ ಶಿಕ್ಷಣ ಇಲಾಖೆ ಕಣ್ಣಿಡಬೇಕಾಗಿದೆ.
ಬ್ಯಾಂಕಿಗೆ ಜಮಾ: ನಗರದ ಅನುದಾನ ರಹಿತ ಪ್ರೌಢಶಾಲೆಯೊಂದು ಕಳೆದ ವರ್ಷ 30 ಸಾವಿರ ಡೊನೇಷನ್ ಪಡೆಯುತ್ತಿತ್ತು. ಈ ಬಾರಿ ಆ ಶಾಲೆ 40 ಸಾವಿರ ರುಪಾಯಿ ಪಡೆಯುತ್ತಿದೆ. ಅಂದರೆ, ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಂತೆ ಡೊನೇಷನ್ ಏರಿಕೆ ಮಾಡಿದೆ.
ಈ ಶಾಲೆಯಲ್ಲಿ ಪ್ರವೇಶ ಪಡೆಯಬೇಕಾದರೆ, ಸಂಬಂಧಿತ ವಿದ್ಯಾರ್ಥಿಯ ಅಂಕಪಟ್ಟಿ ಪರಿಶೀಲಿಸಿ, ಪ್ರವೇಶಕ್ಕೆ ಒಪ್ಪಿಗೆ ನೀಡಿದ ನಂತರ ಆ ವಿದ್ಯಾರ್ಥಿಗೆ ತಮ್ಮ ಖಾತೆಗೆ ಹಣವನ್ನು ಜಮಾ ಮಾಡಿ ಅದರ ಓಚರ್ ತೆಗೆದುಕೊಂಡು ಬರುವಂತೆ ಬ್ಯಾಂಕಿನ ಅಕೌಂಟ್ ನಂಬರ್ ಕೊಡಲಾಗುತ್ತಿದೆ. ಹಣ ಜಮಾ ಮಾಡಿ ಓಚರ್ ತಂದ ನಂತರವೇ ಪ್ರವೇಶ ನೀಡಲಾಗುತ್ತಿದೆ.
ಅಂದರೆ, ವಿದ್ಯಾರ್ಥಿ ಕೊಡುವ ಹಣ ಕೈಯಿಂದ ಮುಟ್ಟುವುದು ತಪ್ಪೆಂದು ಆ ಶಾಲೆಯ ಆಡಳಿತ ಮಂಡಳಿಯವರ ಮನಸಿಗೆ ಬಂದಿರಬೇಕು. ಪ್ರತಿ ದಿನ ಬ್ಯಾಂಕಿಗೆ ಹೋಗಿ ಹಣ ಜಮಾ ಮಾಡುವ ಕೆಲಸವನ್ನು ಸಂಬಂಧಿತ ವಿದ್ಯಾರ್ಥಿ ಮತ್ತು ಪೋಷಕರಿಂದಲೇ ಮಾಡಿಸುತ್ತಿದ್ದಾರೆ. ಇದು, ಡೊನೇಷನ್ ಪಡೆಯುವ ಹೊಸ ಕ್ರಮವಾಗಿದೆ. ಇಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳದೆ ಹೋದರೆ ಈಗಾಗಲೇ ಬಡವರಿಂದ ದೂರವಾಗಿರುವ ಈ ಶಾಲೆಗಳು, ಮಧ್ಯಮ ವರ್ಗದಿಂದಲೂ ದೂರವಾಗಲಿವೆ.
ಮನವಿ ಸಲ್ಲಿಕೆ: ನಗರದ ವಿವಿಧ ಶಾಲಾ ಕಾಲೇಜುಗಳಲ್ಲಿ ಹಾಗೂ ಸರ್ಕಾರಿ ಅನುದಾನಿತ ಶಾಲಾ ಕಾಲೇಜುಗಳಲ್ಲಿಯೂ ಡೊನೇಷನ್ ವಸೂಲಿ ಮಾಡುತ್ತಿದ್ದಾರೆ. ಅಂತಹ ಶಾಲಾ ಕಾಲೇಜುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಈ ಸಂಬಂಧ ಅಪರ ಜಿಲ್ಲಾಧಿಕಾರಿ ಬಾಲಚಂದ್ರ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಅನುದಾನಿತ ಕಾಲೇಜುಗಳಲ್ಲಿ ವಿಜ್ಞಾನ ವಿಭಾಗಕ್ಕೆ 40 ಸಾವಿರದಿಂದ 50 ಸಾವಿರವರೆಗೂ, ವಾಣಿಜ್ಯ ವಿಭಾಗಕ್ಕೆ 30 ಸಾವಿರದಿಂದ 40 ಸಾವಿರ, ಕಲಾ ವಿಭಾಗಕ್ಕೆ 20 ಸಾವಿರದಿಂದ 30 ಸಾವಿರ ರು. ಡೋನೇಷನ್ ಪಡೆಯಲಾಗುತ್ತಿದೆ. ಪ್ರಥಮ ಪಿಯುಸಿಗೆ ಇಷ್ಟೊಂದು ಹಣ ವಸೂಲಿ ಮಾಡಿದರೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗಲಿದೆ. ದಯಮಾಡಿ ಇದರ ವಿರುದ್ಧ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ವಿನಂತಿಸಿದ್ದಾರೆ.
ಇದೇ ಸಂದರ್ಭದಲ್ಲಿ ಡಿ. ಚಂದ್ರಮೌಳಿ, ಜಿಲ್ಲಾ ಕನ್ನಡ ಅಭಿಮಾನಿಗಳ ಸಂಘದ ಅಧ್ಯಕ್ಷ ಬಿ.ಎಂ. ಕುಮಾರ್, ಜಿಲ್ಲಾ ರಾಜಕುಮಾರ್ ಸಂಘದ ಅಧ್ಯಕ್ಷರು ಕೃಷ್ಣಮೂರ್ತಿ, ತಾಯಿರ್ ಹುಸೇನ್, ಎಬಿವಿಪಿ ಮುಂಖಡರಾದ ನವೀನ್, ಸುರೇಶ್ ಹಾಗೂ ವಿವಿಧ ಸಂಘಟನೆಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.