ಮೂಲ ಸೌಕರ್ಯಕ್ಕೆ ಆಗ್ರಹಿಸಿ ಸಚಿವರಿಗೆ ಮನವಿ
ಕೊಪ್ಪ: ತಾಲೂಕಿನ ನಕ್ಸಲ್ ಪೀಡಿತ ಪ್ರದೇಶದಲ್ಲಿ 300 ಕುಟುಂಬಗಳು ವಿದ್ಯುತ್ ಸೌಲಭ್ಯವಿಲ್ಲದೆ ಕತ್ತಲೆಯಲ್ಲಿ ಕಾಲ ಕಳೆಯುತ್ತಿದ್ದು, ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವಂತೆ ಗಿರಿವಾಸಿಗಳು ಒತ್ತಾಯಿಸಿದರು.
ತಾಲೂಕಿನ ಮೇಗೂರು ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಬುಧವಾರ ನಡೆದ ಜನ ಸಂಪರ್ಕ ಸಭೆಯಲ್ಲಿ ನೂರಾರು ಗ್ರಾಮಸ್ಥರು ತಮ್ಮ ಅಹವಾಲುಗಳ ಮಹಾಪೂರವನ್ನೇ ಹರಿಸಿದರು.
ಸೀಮೇಎಣ್ಣೆ ನೀಡಿ: ಗಿರಿಜನ ಪ್ರದೇಶವಾದ ಎಡಗುಂದ, ಬಿಟ್ಟಮಕ್ಕಿ, ಬೆಂಡೆಹಕ್ಲು, ಕೆರೆಕೊಳಲು ಸೇರಿದಂತೆ ಹಲವು ಗ್ರಾಮಗಳಲ್ಲಿ ವಿದ್ಯುತ್ ಇಲ್ಲದೆ ಜನ ಬವಣೆ ಪಡುತಿದ್ದು, ಪಡಿತರದಾರಿಗೆ ಕನಿಷ್ಠ 5 ಲೀ. ಸೀಮೇಎಣ್ಣೆ ವಿತರಿಸುವಂತೆ ಅಗ್ರಹಿಸಿಲಾಯಿತು.
ಮೇಗೂರು, ಮೆಣಸಿನಹಾಡ್ಯ ಅಶ್ರಮ ಶಾಲೆಗಳು ಮಕ್ಕಳ ಕೊರತೆ ಎದುರಿಸುತ್ತಿದ್ದು, ಇವುಗಳನ್ನು ಮೆಲ್ದರ್ಜೆಗೇರಿಸಿದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಹರಳಾನೆಯಲ್ಲಿ ಜಾನುವಾರು ಆಸ್ಪತ್ರೆ ಇದ್ದರೂ ವೈದ್ಯರಿಲ್ಲ. ಈ ಭಾಗಗಳಿಗೆ ಸರಿಯಾದ ಸಾರಿಗೆ ಸೌಲಭ್ಯವಿಲ್ಲ. ಕಿತ್ತಲೆಗುಳಿ, ಬಂಗಾರಿ ದಿನಸಿ ಅಂಗಡಿಗಳಲ್ಲಿ ಅಕ್ರಮ ಮದ್ಯಮಾರಾಟ ನಡೆದಿದ್ದರೂ, ಅಬಕಾರಿ ಇಲಾಖೆ ಮೌನವಾಗಿದೆ ಎಂದು ಗ್ರಾಮಸ್ಥರು ದೂರಿದರು.
ಕಳೆದ 60 ವರ್ಷದಿಂದ ಈ ಭಾಗದ ಮೂಲ ನಿವಾಸಿಗಳಿಗೆ ಒಕ್ಕಲೆಬ್ಬಿಸುವ ಭೀತಿ ದೂರವಾಗಿಲ್ಲ. ಸೂಕ್ತ ಪರಿಹಾರ ನೀಡಿ ಬೇರೆಡೆಗೆ ಕಳುಹಿಸಿ ಎಂದ ಅವರು, ಇಲ್ಲದಿದ್ದಲ್ಲಿ ಇಲ್ಲಿ ನಮ್ಮ ಕೃಷಿಯನ್ನು ಅಭಿವೃದ್ಧಿಗೆ ಸಹಕರಿಸಿ, ಗಿರಿವಾಸಿಗಳಿಗೆ ಹಕ್ಕು ಪತ್ರ, ಮೂಲ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿದರು.
ಪ್ರಾಮಾಣಿಕ ಪ್ರಯತ್ನ; ಜಿಲ್ಲಾ ಉಸ್ತುವಾರಿ ಸಚಿವ ಅಭಯ ಚಂದ್ರ ಜೈನ್ ಮಾತನಾಡಿ, ಈ ಭಾಗದ ಗ್ರಾಮಸ್ಥರು ನೋವಿನಿಂದ ತಮ್ಮ ಅಹವಾಲು ಹೇಳಿದ್ದು, ಅವುಗಳ ಪರಿಹಾರಕ್ಕೆ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು. ಜಿಲ್ಲೆಗೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ, ಸಮಸ್ಯೆ ಪರಿಹಾರಕ್ಕೆ, ಪ್ರಯತ್ನಿಸಲಾಗುವುದೆಂದರು.
ಸಂಸದ ಜಯಪ್ರಕಾಶ ಹೆಗ್ಡೆ ಮಾತನಾಡಿ, ರೈತರ ಸಾಲ ವಸೂಲಾತಿ ತಡೆಗೆ ಶೀಘ್ರವೇ ಮುಖ್ಯಮಂತ್ರಿಗಳ ಬಳಿಗೆ ರೈತ ಮುಖಂಡರು ಉಸ್ತುವಾರಿ ಸಚಿವರು ಹಾಗೂ ಬ್ಯಾಂಕ್ ಅಧಿಕಾರಿಗಳ ನಿಯೋಗ ಕರೆದೊಯ್ದು, ಚರ್ಚೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಜಿಲ್ಲಾಧಿಕಾರಿ ಶೇಖರಪ್ಪ, ಉಪ ವಿಭಾಗಾಧಿಕಾರಿ ಚನ್ನಬಸಪ್ಪ, ತಾಪಂ ಸದಸ್ಯರಾದ ಪದ್ಮಾವತಿ ರಮೇಶ್, ಉಪಾಧ್ಯಕ್ಷ ಪೂರ್ಣಚಂದ್ರ, ಸದಸ್ಯ ಬೆಂಡೆಹಕ್ಲು ನಾರಾಯಣ್, ಸುಜಾತಾ, ಲಲಿತಾ, ರೈತ ಮುಖಂಡ ನವೀನ್ ಕರುವಾನೆ, ಡಿ.ಬಿ. ರಾಜೇಂದ್ರ, ಕಾಂಗ್ರೆಸ್ ಮುಖಂಡ ಓಣಿತೋಟ ರತ್ನಕಾರ್ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

