ಸುದ್ದಿ ಸಂಕ್ಷೇಪ
ನಾಳೆ ಸಚಿವರ ಪ್ರವಾಸ
ಚಿಕ್ಕಮಗಳೂರು: ಮುಖ್ಯಮಂತ್ರಿಗಳು ನ.19 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅಭಯಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ನ.19 ರಂದು ಬೆಳಿಗ್ಗೆ 11 ಗಂಟೆಗೆ ಕರೆಯಲಾಗಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯನ್ನು ಮುಂದೂಡಲಾಗಿದೆ.
ಲೋಕಾಯುಕ್ತ ಅಧಿಕಾರಿಗಳ ಪ್ರವಾಸ
ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಸೋಮವಾರ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ತರೀಕೆರೆ ಪ್ರವಾಸಿ ಮಂದಿರಕ್ಕೆ ಆಗಮಿಸಲಿದ್ದಾರೆ. ಆಯಾ ತಾಲೂಕಿನ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ತಮ್ಮ ಕೆಲಸಗಳ ನಿಮಿತ್ತ ಅರ್ಜಿ, ದೂರು ಸಲ್ಲಿಸಿದ್ದು, ತಮ್ಮ ಅರ್ಜಿ, ದೂರನ್ನು ಸಂಬಂಧಪಟ್ಟ ಅಧಿಕಾರಿಯು ವಿಲೇವಾರಿ ಮಾಡದೆ, ಸಮಸ್ಯೆಯನ್ನು ಬಗೆಹರಿಸದೆ ಇದ್ದಲ್ಲಿ ತಮ್ಮ ದೂರುಗಳನ್ನು ಸಲ್ಲಿಸಲು ಕೋರಲಾಗಿದೆ.
ಪರೀಕ್ಷಾ ಪೂರ್ವ ಉಚಿತ ತರಬೇತಿ
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗಾಗಿ ಉಚಿತ ಪರೀಕ್ಷಾ ಪೂರ್ವ ತರಬೇತಿಯನ್ನು ನ. 21 ರಿಂದ 30 ರವರೆಗೆ ಮಧ್ಯಾಹ್ನ 3 ಗಂಟೆಯಿಂದ ನೀಡಲಾಗುವುದು. ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಪಡೆದವರು (ಟಿಸಿಹೆಚ್ ಅಥವಾ ಡಿಇಡಿ) ತರಬೇತಿಯಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಚಿಕ್ಕಮಗಳೂರು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.
ಭಕ್ತಿ ಮಾರ್ಗದಿಂದ
ಪರಮಾತ್ಮನ ಅನುಗ್ರಹ
ಶೃಂಗೇರಿ: ಭಗವಂತನ ಅನುಗ್ರಹದಿಂದ ಸುಂದರ ಬದುಕು ಸಾಧ್ಯವಿದ್ದು, ಶ್ರದ್ಧೆ, ಭಕ್ತಿಯಿಂದ ಪರಮಾತ್ಮನ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತ ಭೀಮೇಶ್ವರ ಜೋಷಿ ಹೇಳಿದರು.
ಪಟ್ಟಣದ ಮಹಾತ್ಮಾ ಗಾಂಧಿ ಮೈದಾನದಲ್ಲಿ 3 ದಿನಗಳ ಕಾಲ ನಡೆಯುತ್ತಿರುವ ವಿಶ್ವ ಹೃದಯ ಸಮ್ಮೇಳನದ 3ನೇ ದಿನದ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು. ಭಾರತದ ಸಂಸ್ಕೃತಿ ಅತ್ಯಂತ ಪ್ರಾಚೀನವಾದುದು. ಜಗತ್ತಿನ ಸಂಸ್ಕೃತಿ ಪರಂಪರೆಗೆ ಭಾರತದ ಕೊಡುಗೆ ಅಪಾರ.ನಮ್ಮ ದೇಶದ ಸಂಸ್ಕೃತಿ, ಪರಂಪರೆ, ಧರ್ಮವನ್ನು ರಕ್ಷಿಸಿ ಉಳಿಸಬೇಕಿದೆ. ನಮ್ಮಲ್ಲಿ ಎರಡು ರೀತಿಯ ಜೀವನ ಕೃಷಿ ಪದ್ಧತಿ ಇದ್ದು, ಮೊದಲನೆಯದು ಅಂತರಂಗ ಕೃಷಿ, ಎರಡನೆಯದು ಬಾಹ್ಯ ಕೃಷಿ ಎಂದರು.
ಬೌದ್ಧಿಕ ಬೆಳವಣಿಗೆಗೆ ಸಾಹಿತ್ಯ ಸಹಕಾರಿ: ಚಂದ್ರನ್
ಮೂಡಿಗೆರೆ: ಸಾಹಿತ್ಯವು ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸಹಕಾರಿ ಎಂದು ಸಾಹಿತಿ, ಗಾಯಕರಾದ ಉಮೇಶ್ಚಂದ್ರನ್ ಹೇಳಿದರು.
ತಾಲೂಕಿನ ಕಳಸಹೋಬಳಿ ಬಾಳೆಹೊಳೆ ಸರ್ಕಾರಿ ಪದವಿಪೂರ್ವ ಹಾಗೂ ಪ್ರೌಢ ಶಾಲೆಯಲ್ಲಿ ಕಳಸ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕುಮಾರಿ ಬಿ.ಎಲ್. ಶರ್ಮಿಳ ಲಕ್ಷ್ಮಣಗೌಡ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಕ್ಕಳ ಮನೋವಿಜ್ಞಾನ ಹಾಗೂ ಮಕ್ಕಳ ಸಾಹಿತ್ಯ ಕುರಿತಾಗಿ ಮಾತನಾಡಿ, ಸಾಹಿತ್ಯವು ಅದರಲ್ಲಿ ಬರುವ ಪಾತ್ರಗಳ ಮೂಲಕ ಮಕ್ಕಳಿಗೆ ಮಾನಸಿಕವಾಗಿ ನೀತಿ ಪಾಠ ಪ್ರಚೋದಿಸುತ್ತದೆ. ಇದರಿಂದ ಮಕ್ಕಳಲ್ಲಿ ಆದರ್ಶ ಬೆಳೆದು ಸತ್ಪ್ರಜೆಗಳನ್ನಾಗಿ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಸಾಪ ತಾಲೂಕು ನಿಕಟಪೂರ್ವ ಅಧ್ಯಕ್ಷರಾದ ಆ.ರಾ. ರಾಧಕೃಷ್ಣ ಮಾತನಾಡಿ, ಹಳ್ಳಿಯ ಶಾಲೆಗಳಲ್ಲಿ ಹೆಚ್ಚಾಗಿ ಇಂತಹ ದತ್ತಿ ಕಾರ್ಯಕ್ರಮಗಳು ನಡೆಯಬೇಕು. ಅಲ್ಲದೆ, ನಾಡಿನ ಹಿರಿಯರು ನೀಡಿದ ಈ ದತ್ತಿ ಉಪನ್ಯಾಸ ನಿಧಿಗಳಿಂದ ಪರಿಷತ್ತು ಸದಾ ಕನ್ನಡ ನಾಡು, ನುಡಿ ಕಾರ್ಯಕ್ರಮ ನೀಡಲು ಸಹಕಾರಿಯಾಗಿದೆ ಎಂದರು.
ಕಸಾಪ ಹೋಬಳಿ ಅಧ್ಯಕ್ಷ ಅಬ್ದುಲ್ ಕರೀಂ ಮಾತನಾಡಿ, ಹೋಬಳಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆದು ದಶಕಗಳೇ ಕಳೆದಿವೆ. ಇದನ್ನು ನಡೆಸಲು ಸಾಹಿತ್ಯಾಸಕ್ತರು ಮುಂದೆ ಬರಬೇಕು ಎಂದು ಹೇಳಿದರು. ರಾಜೇಂದ್ರ ಹಿತ್ಲುಮಕ್ಕಿ, ಪ್ರಕಾಶ್, ಸದಾನಂದ ಭಟ್, ಗ್ರಾಪಂ ಸದಸ್ಯ ಸುದರ್ಶನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

