25ರಂದು ಬೆಳಗಾವಿಯಲ್ಲಿ ರೈತ ಸಂಘ ಪ್ರತಿಭಟನೆ: ಬಸವರಾಜಪ್ಪ
ಚಿಕ್ಕಮಗಳೂರು: ಕಬ್ಬು, ಬತ್ತ, ಜೋಳ, ಮೆಕ್ಕೆಜೋಳ, ಹತ್ತಿ ಸೇರಿದಂತೆ ಇತರೆ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ಒಣಭೂಮಿ, ಖುಷ್ಕಿ ಬೇಸಾಯದ ನೀತಿ ರೂಪಿಸಲು ಬಜೆಟ್ನಲ್ಲಿ ಗ್ರಾಮೀಣ ಪ್ರದೇಶಕ್ಕೆ ಶೇ.70ರಷ್ಟು ಮೀಸಲಿಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನ.25ರಂದು ಬೆಳಗಾವಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಕಾರ್ಯಾಧ್ಯಕ್ಷ ಬಸವರಾಜಪ್ಪ ಹೇಳಿದ್ದಾರೆ.
ಕಾಂಗ್ರೆಸ್ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರನ್ನು ಕಡೆಗಣಿಸಿದೆ. ಕೇಂದ್ರ ಸರ್ಕಾರದ ಆಹಾರ ಭದ್ರತಾ ಮಸೂದೆ, ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿ, ಕೇಂದ್ರ ಸರ್ಕಾರದ ಕೃಷಿ ಉತ್ಪನ್ನಗಳಿಗೆ ಕಡಿಮೆ ಆಮದು ಸುಂಕ ವಿಧಿಸಿರುವುದರಿಂದ ಸುಗ್ಗಿ ಬರುವುದಕ್ಕೆ ಮುಂಚಿತವಾಗಿ ಬೆಲೆಗಳು ಕುಸಿದಿವೆ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.
ಕ್ರಮ ಕೈಗೊಳ್ಳಿ: ಬೆಳೆಗೆ ವೈಜ್ಞಾನಿಕ ಬೆಲೆ ಮತ್ತು ಬೆಳೆ ನಷ್ಟ ಪರಿಹಾರ ನೀಡಬೇಕು. ರೈತರ ಸಾಲಗಳನ್ನು ಮನ್ನಾ ಮಾಡಬೇಕು. ಕಲಬೆರಕೆ ಮತ್ತು ನಕಲಿ ರಸಗೊಬ್ಬರ ತಯಾರಿಕಾ ಕಂಪನಿ, ವಿತರಕರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮೆಕ್ಕೆಜೋಳ, ಬತ್ತ, ರಾಗಿ, ಈರುಳ್ಳಿ ಬೆಳೆಗಳಿಗೆ ಕ್ವಿಂಟಾಲ್ಗೆ 2500, ತೊಗರಿಗೆ 5,000, ಹತ್ತಿಗೆ 10,000 ಬೆಲೆ ನಿಗದಿಯಾಗಬೇಕು. ರೇಷ್ಮೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ರೈತರ ಬೆಳೆ ನಷ್ಟದ ಸಂದರ್ಭದಲ್ಲಿ ಸಹಾಯ ನೀಡಲು ಪ್ರಕೃತಿ ವಿಕೋಪ ನಿಧಿಯ ಮಾದರಿಯ ನಿಧಿಯನ್ನು ಸರ್ಕಾರ ಸ್ಥಾಪನೆ ಮಾಡಬೇಕು. ಪ್ರಕೃತಿ ವಿಕೋಪದಿಂದ ಕಳಪೆ ಬೀಜ, ಕೀಟನಾಶಕ, ಕಾಡು ಪ್ರಾಣಿಗಳಿಂದ ಬೆಳೆ ನಷ್ಟವಾದಾಗ ಈಗಿರುವ ಪರಿಹಾರ ಮೊತ್ತವನ್ನು ಕನಿಷ್ಠ 10 ಪಟ್ಟು ಹೆಚ್ಚಿಸಿ ಪರಿಹಾರ ನೀಡಬೇಕು. ಡಾ. ಜಿ.ಎಂ. ಪರಮಶಿವಯ್ಯನವರ ಸಮಗ್ರ ಸಣ್ಣ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಕಳಸ- ಬಂಡೂರಿ ಯೋಜನೆಯನ್ನು ಕಾಲಮಿತಿಯೊಳಗೆ ಪೂರೈಸಬೇಕೆಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಹಿರಿಯ ರೈತ ಮುಖಂಡ ಕಡಿದಾಳ್ ಶಾಮಣ್ಣ, ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಎಂ. ಮಹೇಶ್, ಹಾಗೂ ಹಸಿರು ಸೇನೆಯ ರಾಜ್ಯ ಸಂಚಾಲಕ ಆರ್.ಆರ್. ಮಹೇಶ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

