ಚಿಕ್ಕಮಗಳೂರು

ಜಿಲ್ಲಾ ಕೇಂದ್ರಕ್ಕೆ ಬಂದ ರೈಲು ತಾಲೂಕಿಗೆ ಬಾರದೇ?

Published On :

ನರಸಿಂಹರಾಜಪುರ: ಸ್ವಾತಂತ್ರ ಪೂರ್ವದಲ್ಲೇ ಬ್ರಿಟಿಷರು ಮಲೆನಾಡು ಭಾಗವಾದ ನರಸಿಂಹರಾಜಪುರಕ್ಕೆ ರೈಲು ಸಂಚಾರದ ವ್ಯವಸ್ಥೆ ಮಾಡಿದ್ದರು ಎನ್ನುವುದು ಈಗ ಇತಿಹಾಸದ ಪುಟ ಸೇರಿದ್ದರೂ ಈಗಲೂ ಜನಪ್ರತಿನಿಧಿಗಳು ತಮ್ಮ ಇಚ್ಚಾಶಕ್ತಿ ಪ್ರದರ್ಶಿಸಿದರೆ ಮತ್ತೆ ಶೃಂಗೇರಿ ಕ್ಷೇತ್ರಕ್ಕೆ ರೈಲು ಸಂಚಾರ ಪ್ರಾರಂಭಿಸಬಹುದು ಎಂಬುದು ಶೃಂಗೇರಿ ಕ್ಷೇತ್ರದ ಜನರ ಒತ್ತಾಯವಾಗಿದೆ.
ಕಡೂರು- ಚಿಕ್ಕಮಗಳೂರು ಸಂಪರ್ಕಕ್ಕೆ ರೈಲುಮಾರ್ಗ ಪ್ರಾರಂಭವಾಗಿ ಆ ಭಾಗದ ಜನತೆ ಹರ್ಷಪಟ್ಟಿದ್ದಾರೆ. ಆದರೆ, ಆ ರೈಲು ಸಂಪರ್ಕದ ಪ್ರಯೋಜನ ಮಲೆನಾಡು ಭಾಗವಾದ ನರಸಿಂಹರಾಜಪುರ, ಕೊಪ್ಪ, ಶೃಂಗೇರಿಗೆ ಸಿಗುವುದಿಲ್ಲ. ಶೃಂಗೇರಿ ಕ್ಷೇತ್ರದಲ್ಲಿ 3 ತಾಲೂಕುಗಳು ಹಾಗೂ ಖಾಂಡ್ಯ ಹೋಬಳಿಯೂ ಬರಲಿದೆ.
ಯಾತ್ರಾಸ್ಥಳ: ಶೃಂಗೇರಿ ಕ್ಷೇತ್ರ ಬಹು ದೊಡ್ಡ ಯಾತ್ರಾ ಸ್ಥಳವಾಗಿ ಬೆಳೆದಿದ್ದು, ಬಾಳೆಹೊನ್ನೂರಿನ ರಂಭಾಪುರಿ ಮಠ, ಹರಿಹರಪುರ ಮಠ, ಶಕಟಪುರ ಮಠವೂ ಸಹ ಶೃಂಗೇರಿ ಕ್ಷೇತ್ರದಲ್ಲೇ ಬರಲಿದೆ. ಈ ನಿಟ್ಟಿನಲ್ಲಿ ಶೃಂಗೇರಿ ಕ್ಷೇತ್ರಕ್ಕೆ ಅಗತ್ಯವಾಗಿ ರೈಲು ಸಂಚಾರ ಮಾಡಬೇಕಾಗಿದೆ ಎಂಬುದು ಶೃಂಗೇರಿ ಕ್ಷೇತ್ರದ ಜನತೆಯ ಆಗ್ರಹವಾಗಿದೆ.
ಮಲೆನಾಡು ಭಾಗದ ನರಸಿಂಹರಾಜಪುರಕ್ಕೆ ರೈಲು ಸಂಚಾರವಿತ್ತು ಎಂಬುದನ್ನು ಜನ ಸಂಪೂರ್ಣ ಮರೆತಿರುವಾಗ ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದಾಗ ರಾಜ್ಯ ಸರ್ಕಾರ ಶೃಂಗೇರಿಗೆ ರೈಲು ಮಾರ್ಗ ಬೇಕು ಎಂದು  ಕೇಂದ್ರಕ್ಕೆ ಒಂದು ಮನವಿ ಸಲ್ಲಿಸಲಾಗಿತ್ತು.
ಸರ್ವೆಗೆ ಹಣ: ಆ ಸಂದರ್ಭದಲ್ಲಿ ದೇವೇಗೌಡರು ಹಾಲಿ ಇರುವ ಭದ್ರಾವತಿ- ನರಸಿಂಹರಾಜಪುರ ರೇಲ್ವೆ ಮಾರ್ಗದ ಸರ್ವೆ ಮಾಡಿಸಲು ಹಣ ಮೀಸಲಿಟ್ಟಿದ್ದರು. ಸರ್ವೇ ಮಾಡಿಸಲೂ ಸಹ ಆದೇಶ ನೀಡಿದ್ದರು.
ನಂತರ ಅದೂ ಸಹ ನೆನಗುದಿಗೆ ಬಿದ್ದಿತ್ತು.
2009 ರಲ್ಲಿ ಶೃಂಗೇರಿಗೆ ಆಗಮಿಸಿದ್ದ ಕೇಂದ್ರ ರೇಲ್ವೆ ಸಚಿವ ಕೆ.ಎಚ್. ಮುನಿಯಪ್ಪ ಅವರು ಭದ್ರಾವತಿ-ನರಸಿಂಹರಾಜಪುರ- ಕೊಪ್ಪ- ಶೃಂಗೇರಿ ಮಾರ್ಗವಾಗಿ ರೈಲು ಸಂಚಾರದ ಬಗ್ಗೆ ಕೇಂದ್ರ ಸರ್ಕಾರದ ಪ್ರಸ್ತಾವನೆಯಲ್ಲಿದೆ ಎಂಬ ಹೇಳಿಕೆಯು ಮತ್ತೆ ಶೃಂಗೇರಿಯ ಜನತೆಯಲ್ಲಿ ರೈಲು ಸಂಚಾರದ ಬಗ್ಗೆ ಮತ್ತೆ ಭರವಸೆಯ ಕನಸುಗಳು ಬಿತ್ತಿದ್ದವು.
ಆ ಸಂದರ್ಭದಲ್ಲಿ ಶಾಸಕ ಡಿ.ಎನ್.ಜೀವರಾಜ್, ಸಂಸದ ಸದಾನಂದಗೌಡರ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರೊಡನೆ ಚರ್ಚಿಸಿ ರಾಜ್ಯ ಸರ್ಕಾರದ ಮೂಲಕ ಅಂದಿನ ಕೇಂದ್ರದ ರೇಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆಯಲಾಯಿತು. ಆದರೆ,ಯಾವುದೂ ಪ್ರಯೋಜನವಾಗದೆ ಎಲ್ಲಾ ಪ್ರಸ್ತಾಪಗಳು ಮೂಲೆಗುಂಪಾಯಿತು.
ಜಯಪ್ರಕಾಶ ಹೆಗ್ಡೆ ಭರವಸೆ: ಶೃಂಗೇರಿಗೆ ರೈಲು ಪ್ರಸ್ತಾಪದ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿದ ಸಂಸದ  ಜಯಪ್ರಕಾಶ ಹೆಗ್ಡೆ, ಕಳೆದ ಬಜೆಟ್ನಲ್ಲಿ ನನ್ನ ಲೋಕಸಭಾ ಕ್ಷೇತ್ರಕ್ಕೆ ರೇಲ್ವೆ ಇಲಾಖೆಯವರು ಸಾಕಷ್ಟು ಕೊಡುಗೆ ನೀಡಿದ್ದರು. ಶೃಂಗೇರಿ ಕ್ಷೇತ್ರದ ರೈಲು ಪ್ರಸ್ತಾಪವೂ ನನ್ನ ಗಮನದಲ್ಲಿದ್ದು, ಈ ಬಗ್ಗೆ ಇಲಾಖೆಯೊಂದಿಗೆ ವ್ಯವಹಾರ ನಡೆಸುತ್ತಿದ್ದೇನೆ. ಮುಂದಿನ ಬಜೆಟ್ನಲ್ಲಿ ಖಂಡಿತ ಶೃಂಗೇರಿ ರೈಲು ಮಾರ್ಗದ ಪ್ರಸ್ತಾಪ ಇರುತ್ತದೆ ಎಂದು ಭರವಸೆ ನೀಡಿದರು.
ನ.ರಾ.ಪುರ ತಾಲೂಕಿನವರು ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ ರೈಲು ಮಾರ್ಗದ ಬಗ್ಗೆ ಮಾತನಾಡಿ, ಚುನಾಯಿತ ಪ್ರತಿನಿಧಿಗಳು ತಮ್ಮ ಇಚ್ಚಾಶಕ್ತಿ ಪ್ರದರ್ಶಿಸಿದರೆ ಖಂಡಿತ ಶಂೃಂಗೇರಿ ಕ್ಷೇತ್ರಕ್ಕೆ ರೈಲು ಬರುತ್ತದೆ ಎಂದರು.
-ಯಡಗೆರೆ ಮಂಜುನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.