ಪರಿಸರ ಸಮತೋಲನಕ್ಕೆ ಹಸಿರು ಮುಖ್ಯ: ಶಿವಯ್ಯ
ನರಸಿಂಹರಾಜಪುರ: ಪ್ರಕೃತಿಯಲ್ಲಿ ಸಮತೋಲನ ಇರಬೇಕಾದರೆ ಹಸಿರು ಹೊದಿಕೆಯು ಬಹಳ ಮುಖ್ಯ. ಎಲ್ಲರೂ ಒಟ್ಟಾಗಿ ಪ್ರಕೃತಿ ರಕ್ಷಣೆ ಮಾಡಬೇಕು ಎಂದು ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ. ಶಿವಯ್ಯ ಕರೆ ನೀಡಿದರು.
ಮಂಗಳವಾರ ಸರ್ಕಾರಿ ನಾಟಾ ಸಂಗ್ರಹಾಲಯ ಆವರಣದಲ್ಲಿ ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿಗಳ ವ್ಯಾಪ್ತಿಯ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರು, ಸದಸ್ಯರು, ಸ್ವಸಹಾಯ ಸಂಘದ ಸದಸ್ಯರಿಗಾಗಿ ಕರ್ನಾಟಕ ಸುಸ್ಥಿರ ಅರಣ್ಯ ನಿರ್ವಹಣೆ ಮತ್ತು ಜೀವ ವೈವಿಧ್ಯ ಸಂರಕ್ಷಣಾ ಯೋಜನೆಯಡಿ ಒಂದು ದಿನದ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಅರಣ್ಯ ನಾಶ: ದೇಶದ ಸಂವಿಧಾನದ ಪ್ರಕಾರ ಭೂಮಿಯ ಶೇ. 33 ರಷ್ಟು ಅರಣ್ಯ ಇರಬೇಕಾಗಿತ್ತು. ಆದರೆ, ಮನುಷ್ಯನ ದುರಾಸೆಯಿಂದಾಗಿ ಅರಣ್ಯ ನಾಶವಾಗುತ್ತಿದೆ. ವಿಶೇಷವೆಂದರೆ ಅವಿದ್ಯಾವಂತರು ಅರಣ್ಯ ನಾಶ ಮಾಡುತ್ತಿಲ್ಲ. ಬುದ್ಧಿವಂತರು, ವಿದ್ಯಾವಂತರು ಎನಿಸಿಕೊಂಡವರೆ ಅರಣ್ಯ ಒತ್ತುವರಿ ಮಾಡಿ ಅರಣ್ಯ ನಾಶ ಮಾಡುತ್ತಿದ್ದಾರೆ ಎಂದರು.
ಒತ್ತುವರಿ ತೆರವುಗೊಳಿಸಿ: ಕಾನೂನು ಪ್ರಕಾರ ಒತ್ತುವರಿ ಭೂಮಿ ತೆರವುಗೊಳಿಸಬೇಕಿದೆ. ಗ್ರಾಮ ಅರಣ್ಯ ಸಮಿತಿಯವರು 10 ಎಕರೆಗಿಂತ ಹೆಚ್ಚು ಒತ್ತುವರಿ ಮಾಡಿದ ದೊಡ್ಡ ರೈತರ ಒತ್ತುವರಿ ತೆರವುಗೊಳಿಸಬೇಕು ಎಂದು ಧ್ವನಿ ಎತ್ತಬೇಕು ಎಂದು ಟಿ.ಶಿವಯ್ಯ ಸಲಹೆ ನೀಡಿದರು.
ದೊಡ್ಡ ರೈತರು ತಾವು ಮಾಡಿದ ಒತ್ತುವರಿ ಪ್ರದೇಶ ಅರಣ್ಯ ಇಲಾಖೆಗೆ ಬಿಟ್ಟುಕೊಡಬೇಕು. ಇಲ್ಲದಿದ್ದರೆ ನ್ಯಾಯಾಲಯದ ಆದೇಶದಂತೆ ಅರಣ್ಯ ಇಲಾಖೆಯೇ ಒತ್ತುವರಿ ತೆರವುಗೊಳಿಸುತ್ತದೆ. ಕೊಪ್ಪ ಡಿವಿಜನ್ ವ್ಯಾಪ್ತಿಯಲ್ಲಿ ಈಗಾಗಲೇ 350 ಎಕರೆ ಒತ್ತುವರಿ ಭೂಮಿ ತೆರವುಗೊಳಿಸಲಾಗಿದೆ. ಕೆಲವು ಒತ್ತುವರಿದಾರರು ಸ್ವಯಂಪ್ರೇರಿತರಾಗಿ ಒತ್ತುವರಿ ತೆರವುಗೊಳಿಸಿದ್ದಾರೆ. ಸಮಾಜ ಪರಿವರ್ತನಾ ಸಂಸ್ಥೆಯ ಹಿರೇಮಠ್ ಅವರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಪ್ರಕಾರ ನ್ಯಾಯಾಲಯವು ಅರಣ್ಯ ಇಲಾಖೆಗೆ ಕೆಲವು ಸೂಚನೆ ನೀಡಿದೆ ಎಂದರು.
ಬೆಂಗಳೂರಿನ ಔಟ್ ರೀಚ್ ಸಂಸ್ಥೆಯ ರಾಜ್ಯ ಸಂಪನ್ಮೂಲ ವ್ಯಕ್ತಿ ಜಯಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, 2005- 06 ನೇ ಸಾಲಿನ ಕರ್ನಾಟಕ ಸುಸ್ಥಿರ ಯೋಜನೆಯು 5 ವರ್ಷದ ಅವಧಿಗೆ ಸೀಮಿತವಾಗಿತ್ತು. ಈಗ ಅದನ್ನು ಮುಂದುವರಿಸಿಕೊಂಡು ಬರುತ್ತಿದ್ದು, ಗ್ರಾಮ ಅರಣ್ಯ ಸಮಿತಿ ಹಾಗೂ ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದೆ ಎಂದರು.
ಅಧ್ಯಕ್ಷತೆಯನ್ನು ಕರ್ಕೇಶ್ವರ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಎಚ್.ಎ. ಶಿವಕುಮಾರ್ ವಹಿಸಿದ್ದರು. ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಕೇಶವಮೂರ್ತಿ, ಕಾನೂರು ಗ್ರಾಪಂ ಅಧ್ಯಕ್ಷೆ ರಂಜಿತ, ಉಪಾಧ್ಯಕ್ಷ ತಮ್ಮಯ್ಯ, ಸದಸ್ಯ ಎಂ.ಸಿ.ನಾಗೇಶ್ ಇದ್ದರು.
ಇದೇ ಸಂದರ್ಭದಲ್ಲಿ ಕೃಷಿ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಸಹಾಯಕ ಕೃಷಿ ಅಧಿಕಾರಿ ವಿ.ಎಸ್. ಶಿವಮೂರ್ತಿ ಹಾಗೂ ಜಾನುವಾರುಗಳಿಗೆ ಬರುವ ಕಾಲು ಬಾಯಿ ಜ್ವರ ಮತ್ತು ಹತೋಟಿ ಬಗ್ಗೆ ಪಶುವೈದ್ಯಾಧಿಕಾರಿ ಡಾ. ರಾಕೇಶ್ ಮಾಹಿತಿ ನೀಡಿದರು.
ಗ್ರಾಮ ಅರಣ್ಯ ಸಮಿತಿಗಳ ನಿರ್ವಹಣೆ ಬಗ್ಗೆ ಬೆಂಗಳೂರಿನ ಔಟ್ ರೀಚ್ ಸಂಸ್ಥೆಯ ಜಯಣ್ಣ ಮಾಹಿತಿ ನೀಡಿದರು. ನಂತರ ಗ್ರಾಮ ಅರಣ್ಯ ಸಮಿತಿಯ ಸದಸ್ಯರೊಂದಿಗೆ ಸಂವಾದ ನಡೆಸಿದರು. ವಿಶಾಲಾಕ್ಷಿ ಸ್ವಾಗತಿಸಿದರು. ಗೌಸ್ ಮೊಯಿದ್ದೀನ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

