ಚಿಕ್ಕಮಗಳೂರು

ಶಿಕ್ಷಣ ಹೃದಯಗಳ ಸಂವಾದವಾಗಲಿ

Published On :

ಕ.ಪ್ರ.ವಾರ್ತೆ ಬಾಳೆಹೊನ್ನೂರು ನ.29
ಇಂದಿನ ಶಿಕ್ಷಣ ವಿಚಾರವೆಂಬ ಕಲ್ಲಾಗಿದ್ದು, ಶಿಕ್ಷಣ ಪದ್ಧತಿಯು ಬದಲಾಗಬೇಕಿದೆ ಎಂದು ಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಶ್ರೀಪತಿ ಹಳಗುಂದ ಹೇಳಿದ್ದಾರೆ.
ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ರಾಜ್ಯೋತ್ಸವ ಹಾಗೂ ದಿ. ಕೆ.ಟಿ. ಚಿನ್ನಯ್ಯಗೌಡ ಸ್ಮರಣಾರ್ಥ ಶುಕ್ರವಾರ ಇಲ್ಲಿನ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಣ ಪದ್ಧತಿ ಹೇಗಿರಬೇಕು ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಮನುಷ್ಯತ್ವ ಕೇಂದ್ರಿತ ಶಿಕ್ಷಣ: ಯುವಕರಲ್ಲಿ ರಾಷ್ಟ್ರಪ್ರೇಮ, ಸ್ವಾಭಿಮಾನ ಅಳವಡಿಸಿಕೊಳ್ಳುವ ಶಿಕ್ಷಣ ಪದ್ಧತಿ ಇಂದು ಮೂಡಿಬರಬೇಕು. ಶಿಕ್ಷಣವು ಬುದ್ಧಿಗಳ ನಡುವೆ ನಡೆಯುವ ಸಂವಾದವಾಗಿರದೇ ಹೃದಯಗಳ ನಡುವೆ ನಡೆಯುವ ಸಂವಾದವಾಗಿರಬೇಕು. ಮನುಷ್ಯ ಕೇಂದ್ರಿತ ಶಿಕ್ಷಣಕ್ಕಿಂತ ಮನುಷ್ಯತ್ವ ಕೇಂದ್ರಿತ ಶಿಕ್ಷಣ ಇಂದು ಅಗತ್ಯವಾಗಿ ಇರಬೇಕಿದೆ. ಆದರೆ, ಇಂದು ಶಿಕ್ಷಣವೆಂಬ ಉದ್ಯಮವು ಹಣ ಮಾಡುವ ದಂಧೆಯಾಗಿ ಮಾರ್ಪಡುತ್ತಿರುವುದು ವಿಷಾದನೀಯವಾಗಿದೆ. ಇಂದಿನ ಶಿಕ್ಷಣದಲ್ಲಿ ಕಲಿಸುವ ಕ್ರಮ ಸರಿಯಾಗಿ ಮೂಡಿಬರದ ಕಾರಣ ಯುವಕರು ಉದ್ಯೋಗದ ಸಂದರ್ಶದನದ ಸಮಯದಲ್ಲಿ ಸಂದರ್ಶಕರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದೆ ಉದ್ಯೋಗರಂಗದಲ್ಲಿ ಎಡವುತ್ತಿರುವುದು ಸಾಮಾನ್ಯವಾಗಿದೆ ಎಂದು ಹೇಳಿದರು.
ಪ್ರಸ್ತುತ ಯುಗ ವೇಗದ ಯುಗವಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಪದ್ಧತಿ ಮಾರ್ಪಡಿಸಿ 18 ವರ್ಷಕ್ಕೆ ಯುವ ಜನರನ್ನು ಸಮಾಜ ಸೇವೆಗೆ ತೊಡಗಿಸುವಂತಹ ಕ್ರಮವನ್ನು ಸರ್ಕಾರ ಕೈಗೊಳ್ಳಬೇಕಿದೆ. ಆಗ ಅವರು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಹಕಾರಿಯಾಗುತ್ತದೆ. ಕೆಲವು ಪೋಷಕರ ನಿರ್ಧಾರಗಳು ತಮ್ಮ ಮಕ್ಕಳ ಭವಿಷ್ಯಕ್ಕೆ ಮಾರಕವಾಗುತ್ತಿದ್ದು, ಇದರ ಕುರಿತು ಜಾಗೃತಿ ಮೂಡಿಸಬೇಕಿದೆ. ವಿದ್ಯಾರ್ಥಿಗಳು ತಮ್ಮ ಪೋಷಕರನ್ನು ಗೌರವಿಸಿ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದ ಅವರು, ಇಂದು ಬರೀ ಕನ್ನಡ ಕಟ್ಟುವ ಕೆಲಸ ಆಗದೇ ಕಾಯುವ ಕೆಲಸ ಆಗಬೇಕು ಎಂದರು.
ಅಮೃತಕ್ಕೆ ಸಮಾನ: ಶಿಕ್ಷಕ ಕೆ.ಎಂ. ರಾಘವೇಂದ್ರ ಮಾತನಾಡಿ, ಈ ಹಿಂದೆ ಕಸಾಪ ನೇತೃತ್ವದಲ್ಲಿ ಕರ್ನಾಟಕದ ಏಕೀಕರಣವಾಗಿತ್ತು. ಕನ್ನಡಿಗರು ಸೌಮ್ಯ ಸ್ವಭಾವದವರಾಗಿದ್ದು, ಶೌರ್ಯ ತೋರಲು ಹಿಂಜರಿಯುವರಲ್ಲ. ಕನ್ನಡ ಭಾಷೆಯು ಅಮೃತಕ್ಕೆ ಸಮಾನವಾಗಿದ್ದು, ನವೆಂಬರ್ ಕನ್ನಡಿಗರಾಗದೇ ನಿತ್ಯೋತ್ಸವದ ಕನ್ನಡಿಗರಾಗಬೇಕು. ಕರುನಾಡಿನ ಪ್ರಾಕೃತಿಕ, ಖನಿಜ ಹಾಗೂ ನದಿಮೂಲದಂತಹ ಸಂಪತ್ತು ಬೇರೆ ಯಾವ ರಾಜ್ಯಗಳಲ್ಲೂ ಇಲ್ಲದ ಸಂಪತ್ತಾಗಿದೆ. ಕನ್ನಡ ನಾಡಿನಲ್ಲಿ ವಿಚಾರವಂತರಿಗೆ, ದೈವಭಕ್ತರಿಗೆ, ಉದಾರ ಮನಸ್ಸಿನವರಿಗೆ ಯಾವುದೇ ಕೊರತೆಯಿಲ್ಲ ಎಂದು ಹೇಳಿದರು.
ತಾಲೂಕು ಕಸಾಪ ಅಧ್ಯಕ್ಷ ಎಸ್.ಜಿ. ಕೃಷ್ಣಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ದತ್ತಿ ಉಪನ್ಯಾಸದಂತಹ ಕಾರ್ಯಕ್ರಮಗಳನ್ನು ಕಸಾಪ ಹಮ್ಮಿಕೊಳ್ಳುತ್ತಿದೆ. ಸಾಹಿತ್ಯಾಸಕ್ತರಿಗೆ ಚಿನ್ನಯ್ಯಗೌಡ ಅವರ ವಿಚಾರಧಾರೆ ತಲುಪಿಸುವ ಉದ್ದೇಶವೇ ಈ ಕಾರ್ಯಕ್ರಮವಾಗಿದೆ. 5ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾಲೂಕಿನ ಸೀತೂರಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದರು.
ಹೋಬಳಿ ಕಸಾಪ ಅಧ್ಯಕ್ಷ ರಾ. ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಇದಕ್ಕೂ ಮುನ್ನ ಬಿ.ಕಣಬೂರು ಗ್ರಾಪಂ ಅಧ್ಯಕ್ಷೆ ಶಾಹಿದಾ ಬಾನು ರಾಷ್ಟ್ರ ಧ್ವಜಾರೋಹಣ, ತಾಲೂಕು ಕಸಾಪ ಅಧ್ಯಕ್ಷ ಎಸ್.ಜಿ. ಕೃಷ್ಣಮೂರ್ತಿ ಕನ್ನಡ ಧ್ವಜಾರೋಹಣ ನೆರವೇರಿಸಿದರು.
ದತ್ತಿದಾನಿ, ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್ ಅಧ್ಯಕ್ಷೆ ಬಿ.ಸಿ. ಗೀತಾ, ತಾಲೂಕು ಕಸಾಪ ಪೂರ್ವಾಧ್ಯಕ್ಷ ಕೆ.ಟಿ. ವೆಂಕಟೇಶ್, ಬಿ. ಕಣಬೂರು ಗ್ರಾಪಂ ಅಧ್ಯಕ್ಷೆ ಶಾಹಿದಾಬಾನು, ಉಪಾಧ್ಯಕ್ಷೆ ಹೂವಮ್ಮ ಪರಮೇಶ್ವರಗೌಡ, ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಹಮ್ಮದ್ ಆಲಿ, ಕಸಬಾ ಹೋಬಳಿ ಕಸಾಪ ಅಧ್ಯಕ್ಷ ಪಿ.ಸಿ. ಮ್ಯಾಥ್ಯೂ, ತಾಲೂಕು ಕಾರ್ಯದರ್ಶಿ ಭಾಗ್ಯ ನಂಜುಂಡಸ್ವಾಮಿ, ಸಾಸ್ವೆಹಳ್ಳಿ ಸತೀಶ್, ಸಂಘಟನಾ ಕಾರ್ಯದರ್ಶಿ ಚಕ್ರಪಾಣಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.