ಚಿಕ್ಕಮಗಳೂರು

ಎಂಇಎಸ್ ಶಾಸಕರ ವಿರುದ್ಧ ಕ್ರಮಕ್ಕೆ ಆಗ್ರಹ

Published On :

ಕ.ಪ್ರ.ವಾರ್ತೆ ಕಡೂರು ನ. 29
ನಮ್ಮ ಕನ್ನಡ ಭಾಷೆ, ನೆಲ ಜಲದ ಅರಿವನ್ನು ಮೂಡಿಸಿ ಕನ್ನಡ ರಾಜ್ಯೋತ್ಸವ ಆಚರಿಸುವ ಜೊತೆಗೆ ಬಡವರ ಆರೋಗ್ಯದ ಕುರಿತ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸಿ ವಿಭಿನ್ನವಾಗಿ ರಾಜ್ಯೋತ್ಸವವನ್ನು ಆಚರಿಸಬೇಕು ಎಂದು ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೆ.ಎಂ. ಕೆಂಪರಾಜು ಕರೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರ ರಸ್ತೆಯ ಕದಂಬ ವೃತ್ತದಲ್ಲಿ ಕದಂಬ ಯುವಕ ಸಂಘ ಆಯೋಜಿಸಿದ್ದ 58 ನೇ ಕನ್ನಡ ರಾಜ್ಯೋತ್ಸವ ಆಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕನ್ನಡವೇ ಪ್ರಥಮ: ನಮ್ಮ ಭಾಷೆ, ನೆಲ, ಜಲ ಸಂಪತ್ತು ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾದ ಹೊಣೆ ನಮ್ಮ ಮುಂದಿದೆ. ಅವರವರ ಭಾಷೆ ಮಾತನಾಡಲು ಯಾರದೇ ತಕರಾರಿಲ್ಲ. ಕರ್ನಾಟಕದಲ್ಲಿ ಕನ್ನಡವೇ ಪ್ರಥಮ ಭಾಷೆಯಾಗಿರಬೇಕು. ಆದರೆ ಬೆಳಗಾವಿ ಅಧಿವೇಶನದಲ್ಲಿ ನೋವಿನ ಸಂಗತಿ ನಡೆಯುವ ಮೂಲಕ ಎಂಇಎಸ್ ಸಮಿತಿಯ ಸಾಂಭಾಜಿ ಪಾಟೀಲ್ ಹಾಗೂ ಮತ್ತೊಬ್ಬ ಶಾಸಕನ ಉದ್ದಟತನದ ದುರ್ವರ್ತನೆಗೆ ಸರ್ಕಾರ ಅವರವಿರುದ್ಧ ಕಾನೂನು ಕ್ರಮ ಕೈಗೊಂಳ್ಳಬೇಕು ಎಂದರು.
ನಮ್ಮ ಕಾವೇರಿ ನೀರು ಬಳಸಲು ನಾವು ತಮಿಳುನಾಡಿನ ಅಪ್ಪಣೆ ಪಡೆಯಬೇಕಾದ ಸ್ಥಿತಿ ಕನ್ನಡಿಗರಿಗೆ ಬಂದಿರುವುದು ದುರಂತದ ಸಂಗತಿ. ಅಲ್ಲದೆ ಸರ್ಕಾರವು ಕನ್ನಡ ಕಲಿಕೆ ಕಡ್ಡಾಯ ಮಾಡಿದ್ದರೂ ಕೂಡ ಸರಿಯಾಗಿ ಅನುಷ್ಠಾನಗೊಂಡಿಲ್ಲ. ಈ ನಿಟ್ಟಿನಲ್ಲಿ ಸರ್ಕಾರವು ಕಾನೂನಿಗೆ ತಿದ್ದುಪಡಿ ತರಬೇಕು. ಸರ್ಕಾರದ ಸುತ್ತೋಲೆಗಳು ಕೇವಲ ಸುತ್ತೋಲೆಗಳಾಗಿವೆಯೇ ವಿನಃ  ನಿಜವಾಗಿಯೂ ಜಾರಿಯಾಗುತ್ತಿಲ್ಲ ಎಂದರು.
ಮಾಜಿ ಪುರಸಭಾಧ್ಯಕ್ಷ  ಕೆ.ಜಿ. ಶ್ರೀನಿವಾಸಮೂರ್ತಿ ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿ ಹಾಗು ಪರಂಪರೆಯ ಉಳಿವಿಗೆ ಯುವಶಕ್ತಿಯು ಸಂಘಟಿತರಾಗಿ ಭಾಷೆಯ ಉಳಿವಿಗೆ ಕಂಕಣ ಬದ್ದರಾಗಿ ದುಡಿಯಬೇಕು ಎಂದರು.  ರಾಜ್ಯೋತ್ಸವದಲ್ಲಿ ನೇಕಾರ ಒಕ್ಕೂಟದ ಜಿಲ್ಲಾಧ್ಯಕ್ಷ ಬೆಂಕಿ ಶೇಖರಪ್ಪ, ಮುಖಂಡ ಕೆ.ಎಸ್.ತಿಪ್ಪೇಶ್, ಯುವಕ ಸಂಘದ ಅಧ್ಯಕ್ಷ ಕದಂಬ ವೆಂಕಟೇಶ್, ಪುರಸಭಾ ಸದಸ್ಯರಾದ ತೋಟದ ಮನೆ ಮೋಹನ್, ಎನ್.ಬಶೀರ್ ಸಾಬ್,ಎಂ.ಸೋಮಶೇಖರ್,ರೇಣುಕಾರಾಧ್ಯ, ಕದಂಬ ಸಂಘದ ಪದಾಧಿಕಾರಿಗಳಾದ ಅಜೇಯ ಒಡೆಯರ್, ಶ್ರೀನಿವಾಸ್, ಮನೋಹರ್, ಮಲ್ಲೇಶ್, ಕೆ.ಎಸ್. ಪರಮೇಶ್,ರಂಗ ಸುಭ್ರಹ್ಮಣ್ಯ, ರಘು ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.