ಚಿಕ್ಕಮಗಳೂರು

ಸಾಗುವಳಿ ಚೀಟಿ ನೀಡದ ಶೃಂಗೇರಿ ಕ್ಷೇತ್ರ ಶಾಸಕ

Published On :

ಕ.ಪ್ರ.ವಾರ್ತೆ, ನರಸಿಂಹರಾಜಪುರ, ಏ.2
ಶೃಂಗೇರಿ ಕ್ಷೇತ್ರದ ಶಾಸಕರು ಕಳೆದ 5 ವರ್ಷಗಳಿಂದ ಒತ್ತುವರಿ ಮಾಡಿದ್ದ ಅರ್ಹ ಫಲಾನುಭವಿಗಳಿದ್ದರೂ ಒಂದೇ ಒಂದು ಸಾಗುವಳಿ ಚೀಟಿ ನೀಡಿಲ್ಲ. ಈಗ ಚುನಾವಣೆಯ ಸಮಯದಲ್ಲಿ ಅವರಿಗೆ ಅಡಕೆ ಬೆಳೆಗಾರರ, ಒತ್ತುವರಿದಾರರ ನೆನಪು ಆಗುತ್ತಿದೆಯೇ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಆರ್. ರವಿಶಂಕರ್ ಪ್ರಶ್ನಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2004 ರವರೆಗೆ ಕಾಂಗ್ರೆಸ್ ಪಕ್ಷ ಸರಿಯಾದ ರೀತಿಯಲ್ಲಿ ಒತ್ತುವರಿ ಮಾಡಿದ ಅರ್ಹ ಫಲಾನುಭವಿ ರೈತರಿಗೆ ಹಕ್ಕುಪತ್ರ ನೀಡಿದೆ. 2004ರ ನಂತರ ಶಾಸಕ ಡಿ.ಎನ್. ಜೀವರಾಜ್ ಅವರು ಬಿಜೆಪಿ ಪಕ್ಷದವರಿಗೆ ಮಾತ್ರ ಸಾಗುವಳಿ ಚೀಟಿ ನೀಡಿದ್ದಾರೆ. ಅರಣ್ಯ ಒತ್ತುವರಿ ಮಾಡಿದವರಿಗೂ, ಅಕ್ರಮವಾಗಿ ಅರಣ್ಯ ನಾಶ ಮಾಡಿದವರಿಗೂ ಬೆಂಬಲ ನೀಡುತ್ತ ಬಂದಿದ್ದಾರೆ ಎಂದರು.
2004ರ ನಂತರ ಶೃಂಗೇರಿ ಕ್ಷೇತ್ರದಲ್ಲಿ ಒಂದೇ ಒಂದು ಆಶ್ರಯ ನಿವೇಶನ ಸಹ ನೀಡಿಲ್ಲ. ಈಗ ಶೃಂಗೇರಿ ಕ್ಷೇತ್ರದ ಶಾಸಕರೇ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದು ಅವರ ಮೇಲೆ ಆರೋಪಗಳಿವೆ. ಕೇಸುಗಳು ಸಹ ನಡೆಯುತ್ತಿದೆ. ಅವರಿಗೆ ಬಿಜೆಪಿ ಪಕ್ಷದ ಪರವಾಗಿ ಮತ ಕೇಳಲು ನೈತಿಕ ಹಕ್ಕಿದೆಯೇ ಎಂದು ಅವರು ಪ್ರಶ್ನೆ ಮಾಡಿದರು.
ಶೋಭಾ ಕರಂದ್ಲಾಜೆಗೆ ಪರಿಚಯ ಇಲ್ಲ:  ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರಿಗೆ ಚಿಕ್ಕಮಗಳೂರು ಜಿಲ್ಲೆಯ ಪರಿಚಯ ಇಲ್ಲವಾಗಿದೆ. ಆದರೆ, ಕಾಂಗ್ರೆಸ್ ಪಕ್ಷದ ಸಂಸದ ಜಯಪ್ರಕಾಶ ಹೆಗ್ಡೆ 1 ವರ್ಷ 10 ತಿಂಗಳ ಅವಧಿಯಲ್ಲಿ ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
140 ದಿನಗಳ ಅಧಿವೇಶನದಲ್ಲಿ 114 ದಿನಗಳು ಹಾಜರಾಗಿದ್ದಾರೆ. ಅವರ 67 ಪ್ರಶ್ನೆಗಳು ಸಂಸತ್‌ನಲ್ಲಿ ಚರ್ಚೆ ಆಗಿದೆ. 12 ಪ್ರಶ್ನೆಗಳನ್ನು ಕೇಳಲು ಅವಕಾಶ ನೀಡಲಾಗಿತ್ತು. ಉಡುಪಿ- ಚಿಕ್ಕಮಗಳೂರು ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಎರಡು ಬಿಲ್ ಪಾಸಾಗಿದೆ. ಆದರೂ, ಬಿಜೆಪಿ ಶಾಸಕರು ಕೆಲವು ದಿನಗಳಿಂದ ಸಂಸದ ಜಯಪ್ರಕಾಶ ಹೆಗ್ಡೆ ಅವರ ಮೇಲೆ ಆರೋಪ ಮಾಡಿ ಹೆಗ್ಡೆ  ಅವರು ಸಂಸತ್‌ನಲ್ಲಿ ಒಂದೂ ಪ್ರಶ್ನೆ ಕೇಳಿಲ್ಲ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದರು.
ಹಿಂದೆ ಬಿಜೆಪಿ ಪಕ್ಷದವರೇ 3 ಬಾರಿ ಸಂಸದರಾಗಿದ್ದರು. ಉಡುಪಿ- ಚಿಕ್ಕಮಗಳೂರು ಕ್ಷೇತ್ರಕ್ಕೆ ಬಿಜೆಪಿ ಸಂಸದರು ಏನೇನು ಕೊಡುಗೆ ನೀಡಿದ್ದಾರೆ ಎಂದು ಬಹಿರಂಗಪಡಿಸಲೆಂದು ಆಗ್ರಹಿಸಿದರು.
ಸಾಧನೆಗಳ ಪುಸ್ತಕ ಬಿಡುಗಡೆ:  ಕಾಂಗ್ರೆಸ್ ಸಂಸದ ಜಯಪ್ರಕಾಶ ಹೆಗ್ಡೆ ಸಾಧನೆಗಳ ಬಗ್ಗೆ ಪುಸ್ತಕಗಳನ್ನು ಬಿಡುಗಡೆ ಮಾಡಿ ಅದನ್ನು ಮತದಾರರ ಮನೆ, ಮನೆಗೆ ಹಂಚುವ ಅಭಿಯಾನ ಹಮ್ಮಿಕೊಂಡಿದ್ದೇವೆ. ಬಿಜೆಪಿ ಸವಾಲನ್ನು ಕಾಂಗ್ರೆಸ್ ಪಕ್ಷ ಸ್ವೀಕರಿಸಿದೆ. ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ ಹೆಗ್ಡೆ ಪ್ರತಿ ಬೂತ್ ಮಟ್ಟದ ಪ್ರಚಾರ ನಡೆಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು, ಕಾಂಗ್ರೆಸ್ ಅಧ್ಯಕ್ಷರು  ಜಿಲ್ಲೆಗೆ ಬಂದು ಪ್ರಚಾರ ಮಾಡಿದ್ದಾರೆ. ಮುಂದೆ ಸಾರ್ವಜನಿಕ ಸಭೆಗಳು ಹಾಗೂ ರೋಡ್ ಶೋ ನಡೆಯಲಿದೆ. ಸಚಿವ ಡಿ.ಕೆ.ಶಿವಕುಮಾರ್ ಶೃಂಗೇರಿ ಕ್ಷೇತ್ರಕ್ಕೆ ಆಗಮಿಸಿ ಪ್ರಚಾರ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಗರ ಅಧ್ಯಕ್ಷ ಕೆ.ವಿ. ವಸಂತಕುಮಾರ್, ಕಸಬಾ ಹೋಬಳಿ ಅಧ್ಯಕ್ಷ ಇ.ಸಿ. ಶೇವಿಯಾರ್ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.