ಚಿಕ್ಕಮಗಳೂರು

ಜೆಡಿಎಸ್ ಸಂಘಟನೆಗೆ ಶ್ರಮಿಸಿದ್ದ ಕೃಷ್ಣಪ್ಪ

Published On :

ಚಿಕ್ಕಮಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪ ಅವರಿಗೆ ನಗರದ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಗುರುವಾರ ಸಂತಾಪ ಸೂಚಕ ಸಭೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡ ಮತ್ತು ಪಕ್ಷದ ಮುಖಂಡರು ಎ. ಕೃಷ್ಣಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮೂಲಕ ಗೌರವ ಸಲ್ಲಿಸಿ ಮೌನಚರಣೆ ನಡೆಸಿದರು.
ಎಸ್.ಎಲ್. ಧರ್ಮೇಗೌಡ ಮಾತನಾಡಿ, ನಿರ್ಧಾಕ್ಷಿಣ್ಯವಾದ ಛಲವನ್ನು ಹೊಂದಿ ರಾಜ್ಯಾದ್ಯಂತ ಮಿಂಚಿನ ಸಂಚಲನಾ ಮಾಡಿ ಪಕ್ಷದ ಏಳಿಗೆಗೆ ಶ್ರಮಿಸಿದ ಪ್ರಾಮಾಣಿಕ ವ್ಯಕ್ತಿ ಕೃಷ್ಣಪ್ಪ ಎಂದು ತಿಳಿಸಿದರು.
ಇವರ ಅಗಲಿಕೆಯಿಂದ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟಾಗಿದೆ, ರಾಜ್ಯಾಧ್ಯಕ್ಷರಾದ ಮೇಲೆ ಎದೆಗುಂದದ ರೀತಿ ಆದರ್ಶ ಪಾಲನೆ ಮಾಡಿಕೊಂಡು ಪಕ್ಷ ಕಟ್ಟುವಲ್ಲಿ ಮುಂದಾಗಿ ಕಾರ್ಯಕರ್ತರಿಗೆ ಬಲ ತುಂಬಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಮಂತ್ರಿಯಾಗಿ ಜನಸೇವೆ ಮಾಡುವ ಮೂಲಕ ಎಲ್ಲರ ಪ್ರೀತಿ ವಿಶ್ವಾಸ ಸಂಪಾದಿಸಿದವರು ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಪತ್ನಿ ನಿಧನ ಹೊಂದಿದ್ದು, ಬಹಳಷ್ಟು ನೋವಿನ ಸಂಗತಿಯಾಗಿದ್ದು, ಇವರ ಕುಟುಂಬಕ್ಕೆ ದುಖ- ಭರಿಸುವ ಶಕ್ತಿ ದೇವರು ಕರುಣಿಸಲೆಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಚ್. ದೇವರಾಜ್, ಜಿಲ್ಲಾಧ್ಯಕ್ಷ ಎಚ್.ಎಸ್. ಮಂಜಪ್ಪ ಮಾತನಾಡಿ, ಹೋರಾಟದ ಮೂಲಕ ಬೆಳೆದು ಸರಳ ವ್ಯಕ್ತಿತ್ವದಿಂದ ಜನರ ಪ್ರೀತಿ ಸಂಪಾದಿಸಿ ಜನಪ್ರತಿನಿಧಿಯಾದ ವ್ಯಕ್ತಿ ಕೃಷ್ಣಪ್ಪ ಎಂದು ಹೇಳಿದರು.
ರಾಜ್ಯ ಉಪಾಧ್ಯಕ್ಷೆ ಪದ್ಮಾ ತಿಮ್ಮೇಗೌಡ, ಮಾಜಿ ನಗರಸಭೆ ಸದಸ್ಯರಾದ ಚಂದ್ರಪ್ಪ, ದೇವಿಪ್ರಸಾದ್, ಜಮೀಲ್ ಅಹಮದ್, ಜಯರಾಜ್ ಅರಸ್, ಮತ್ತಾವರ ತಮ್ಮಣ್ಣಗೌಡ , ಜಯಂತಿ, ವಿಕ್ರಾಂತ್ ಹಾಜರಿದ್ದರು.
ತಾಲೂಕು ಜೆಡಿಎಸ್ ಸಂತಾಪ
ನರಸಿಂಹರಾಜಪುರ:  ಜೆಡಿಎಸ್ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ ಅವರ ನಿಧನದ ಹಿನ್ನೆಲೆ ಜೆಡಿಎಸ್ ತಾಲೂಕು ಕಚೇರಿಯಲ್ಲಿ ಗುರುವಾರ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಎ.ಕೃಷ್ಣಪ್ಪ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ, 4 ಬಾರಿ ಶಾಸಕರಾಗಿದ್ದ ಕೃಷ್ಣಪ್ಪ ಅವರು ರಾಜಕೀಯದಲ್ಲಿ ಅಪಾರ ಅನುಭವ ಹೊಂದಿದ್ದರು. ಕಳೆದ 1 ವರ್ಷದ ಹಿಂದೆ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಜೆಡಿಎಸ್ ಪಕ್ಷವನ್ನು ಸಂಘಟಿಸಿದ್ದರು ಎಂದರು.
ಪ್ರಸ್ತುತ ತುಮಕೂರು ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಫರ್ಧಿಸಿದ್ದರು. ಕೃಷ್ಣಪ್ಪ ಅವರಂಥ ನಾಯಕರನ್ನು ಕಳೆದುಕೊಂಡು ಅನಾಥರಾಗಿದ್ದೇವೆ. ಸರಳ, ಸಜ್ಜನ ರಾಜಕಾರಣಿಯಾಗಿದ್ದ ಅವರು ರಾಜ್ಯಾಧ್ಯಕ್ಷರಾದ ನಂತರ 2 ಬಾರಿ ಶೃಂಗೇರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.
ಈ ಸಂದರ್ಭ ಜೆಡಿಎಸ್ ತಾಲೂಕು ಅಧ್ಯಕ್ಷ ಹೊಸೂರು ಸುರೇಶ್, ತಾಲೂಕು ಪಂಚಾಯ್ತಿ ಸದಸ್ಯ ಎಸ್.ಎಸ್. ಶಾಂತಕುಮಾರ್, ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಸುಬಾನ್, ಜೆಡಿಎಸ್ ನಗರ ಅಧ್ಯಕ್ಷ ಸತ್ಯನಾರಾಯಣಶ್ರೇಷ್ಠಿ, ಯುವ ಜನತಾ ದಳದ ಅಧ್ಯಕ್ಷ ಬಿ.ಟಿ. ರವಿ, ರೈತ ಮೋರ್ಚಾ ಅಧ್ಯಕ್ಷ ಯೋಗೇಂದ್ರ, ಕಾರ್ಯಾಧ್ಯಕ್ಷ ಚಂದ್ರಶೇಖರ್, ವರ್ಕಾಟೆ ಸುಧಾಕರ್, ಸತೀಶ್ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.