ಇನಾಂ ಭೂಮಿ: ರಾಜಕೀಯ ಲಾಭದ ಲೆಕ್ಕಚಾರ
ಆರ್. ತಾರಾನಾಥ್
ಚಿಕ್ಕಮಗಳೂರು: ಕಳಸದ ಶ್ರೀ ಕಳಸೇಶ್ವರ ದೇವಾಲಯದ ಇನಾಂ ಜಮೀನುಗಳ ವಿವಾದಕ್ಕೆ ಸಂಬಂಧಿಸಿದಂತೆ ಸುಮಾರು 700 ಕುಟುಂಬಗಳ 3000 ಜನರ ಪರವಾಗಿ ನ್ಯಾಯಾಲಯದ ಮುಂದೆ ನಿಲ್ಲುವಂತಹ ಅರ್ಹತೆಯನ್ನು ರಾಜ್ಯ ಸರ್ಕಾರ ಕಳೆದುಕೊಂಡಿದೆ.
ಪ್ರತಿಪಕ್ಷಗಳ ಹೋರಾಟ, ಈ ಭಾಗದ ಜನರ ಒತ್ತಡಕ್ಕೆ ಮಣಿದು ಈ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದೆಯಾದರೆ ಸರ್ಕಾರ ಮುಂದಿನ ದಿನಗಳಲ್ಲಿ ತಲೆ ತಗ್ಗಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಲಿದೆ. ಈ ವಿಷಯ ತಿಳಿದಿದ್ದರೂ ಕೂಡ ರಾಜಕೀಯ ಪಕ್ಷಗಳ ಮುಖಂಡರು, ತಮ್ಮ ಕಾರ್ಯಕರ್ತರೊಂದಿಗೆ ಇಲ್ಲಿನ ನಿರಾಶ್ರಿತರಾಗಲಿರುವ ಜನರೊಂದಿಗೆ ಪ್ರತಿಭಟನೆಯಲ್ಲಿ ಕುಳಿತು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ.
ಅರ್ಹತೆ ಇಲ್ಲದ ರಾಜ್ಯ ಸರ್ಕಾರ: ತಮಗೆ ನ್ಯಾಯ ಒದಗಿಸಿಕೊಡುತ್ತೇವೆ, ಧೈರ್ಯವಾಗಿರಿ ಎಂಬ ಬಣ್ಣದ ಮಾತುಗಳನ್ನು ಆಡಿ ಈ ಭಾಗದ ಜನರನ್ನು ಸಮಾಧಾನಪಡಿಸುತ್ತಿದ್ದಾರೆ. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಈವರೆಗೆ ಹೊರ ಬಂದಿರುವ ತೀರ್ಪುಗಳು, ನಿರ್ದೇಶನಗಳನ್ನು ಪರಿಶೀಲಿಸಿದರೆ, ಇಲ್ಲಿನ ಜನರ ಪರವಾಗಿ ನ್ಯಾಯಾಲಯದ ಅಂಗಳದಲ್ಲಿ ನಿಲ್ಲುವಂತಹ ಅರ್ಹತೆಯನ್ನು ರಾಜ್ಯ ಸರ್ಕಾರ ಕಳೆದುಕೊಂಡಿದೆ. ಈ ಮಾತು ಇಂದಿನ ಸರ್ಕಾರಕ್ಕೆ ಮಾತ್ರ ಅನ್ವಯವಾಗಲಿದೆಯೇ, ಹಾಗೆನಾದರೂ ಅಂದುಕೊಂಡರೆ ತಪ್ಪಾಗುತ್ತದೆ. 24-1-2001ರಲ್ಲಿ ಕಂದಾಯ ಇಲಾಖೆ ಈ ಪ್ರಕರಣಕ್ಕೆ ಸಂಬಂಧ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸುವ ಸಂದರ್ಭದಲ್ಲಿ ಜನಪ್ರತಿನಿಧಿಗಳು, ರಾಜ್ಯ ಸರ್ಕಾರ ಎಚ್ಚರಗೊಳ್ಳಬೇಕಾಗಿತ್ತು.
ಕಳಸೇಶ್ವರ ದೇವಾಲಯದ 14,340 ಎಕರೆ ಜಮೀನಿನ ಪೈಕಿ 6777 ಎಕರೆ ಜಮೀನು ಮೀಸಲು ಅರಣ್ಯ ಪ್ರದೇಶವೆಂದು ಘೋಷಿಸಲಾಗಿದ್ದು, ಇದರಲ್ಲಿ 340 ಎಕರೆ ಒತ್ತುವರಿಯಾಗಿದೆ ಎಂದು ಕಂದಾಯ ಇಲಾಖೆಯ ಕಾರ್ಯದರ್ಶಿಗಳು 2001ರಲ್ಲಿ ನ್ಯಾಯಾಲಯಕ್ಕೆ ಪ್ರಮಾಣಪತ್ರದ ಮೂಲಕ ಮಾಹಿತಿ ನೀಡಿದ್ದರು. ಆ ನಂತರದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿ 2001ರ ಜೂನ್ 27ರಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ 327 ಕುಟುಂಬಗಳಿಗೆ 706 ಎಕರೆ ಜಮೀನು ಮಂಜೂರು ಮಾಡಲಾಗಿದೆ. 606 ಕುಟುಂಬಗಳು 1800 ಎಕರೆ ಒತ್ತುವರಿ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ.
ಜಿಲ್ಲಾಡಳಿತ ಜಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ನಲ್ಲಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಜಮೀನು ಮಂಜೂರು ಮಾಡಿರುವುದು ತಪ್ಪೆಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿತ್ತು. ಆಗ ಸರ್ಕಾರ 2005ರಲ್ಲಿ ರಿಟ್ ಅಪೀಲು ಸಲ್ಲಿಸಿತು. ಹೈಕೋರ್ಟ್ನ ವಿಭಾಗೀಯ ಪೀಠ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ 1928ರ ಸರ್ಕಾರದ ಅಧಿಸೂಚನೆ ಮೇರೆಗೆ ಘೋಷಣೆಯಾಗಿರುವ ಇನಾಂ ಮೀಸಲು ಅರಣ್ಯ ವ್ಯಾಪ್ತಿಯಲ್ಲಿರುವ ಎಲ್ಲಾ ಸ್ವಾಧೀನದಾರರನ್ನು ತೆರವುಗೊಳಿಸುವಂತೆ 2012ರ ಡಿಸೆಂಬರ್ 31ರ ಮುಂಚಿತವಾಗಿ ವರದಿ ನೀಡುವಂತೆ 2012ರ ಏಪ್ರಿಲ್ 20 ರಂದು ಹೊರಡಿಸಿರುವ ನಿರ್ದೇಶನದಲ್ಲಿ ತಿಳಿಸಿದೆ.
ಎಡವಟ್ಟು: ಅಧಿಕಾರಿಗಳು 2005ರಲ್ಲಿ ರಿಟ್ ಅಪೀಲ್ ಸಲ್ಲಿಸುವ ಮೊದಲೇ ಬುದ್ಧಿವಂತಿಕೆಯಿಂದ ಹೆಜ್ಜೆ ಹಾಕಿದ್ದರೆ, ಇಲ್ಲಿನ ಜನರಿಗೆ ಈ ರೀತಿಯ ಪರಿಸ್ಥಿತಿ ಬರುತ್ತಿರಲಿಲ್ಲ. ಸರ್ಕಾರ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡಿದೆ. ಇದರಿಂದ ತನ್ನನ್ನು ತಾನೇ ಬಿಡಿಸಿಕೊಳ್ಳಲಾರದ ಸ್ಥಿತಿಯಲ್ಲಿದೆ.
ಕಳೆದ 13 ವರ್ಷಗಳಿಂದ ಈ ಪ್ರಕರಣ ನ್ಯಾಯಾಲಯದ ಅಂಗಳದಲ್ಲಿ ಓಡಾಡುತ್ತಿತ್ತು. ವಿಚಾರಣೆ ಸಂದರ್ಭದಲ್ಲಿ ಅಧಿಕಾರಿಗಳು ಕಾಲಕಾಲಕ್ಕೆ ನ್ಯಾಯಾಲಯಕ್ಕೆ ಬೇಕಾದ ಮಾಹಿತಿಗಳನ್ನು ದಾಖಲೆ ಸಹಿತ ನೀಡುತ್ತಾ ಬಂದಿದ್ದಾರೆ. ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳು ಇಲ್ಲಿನ ಜನರ ಭವಿಷ್ಯದ ಬಗ್ಗೆ ಚಕಾರ ಎತ್ತಲಿಲ್ಲ, ತಮಗೆ ಈ ಬಗ್ಗೆ ಅರಿವಿರಲಿಲ್ಲ ಎಂಬ ನುಣುಚಿಕೊಳ್ಳುವ ಉತ್ತರವನ್ನು ಇದೀಗ ನೀಡಿ ಜನರ ಸಿಂಪತಿಯನ್ನು ಗಳಿಸಲು ಯತ್ನಿಸುತ್ತಿವೆ.
ಇನಾಂ ಮೀಸಲು ಅರಣ್ಯದಲ್ಲಿರುವ ಎಲ್ಲಾ ಸ್ವಾಧೀನದಾರರನ್ನು ತೆರವುಗೊಳಿಸಿ ಎಂದು ನ್ಯಾಯಾಲಯ ಹೇಳಿ 22 ತಿಂಗಳು ಕಳೆದು ಹೋಗಿವೆ. ಭೂಮಿಯನ್ನು ಸ್ವಾಧೀನ ಪಡಿಸಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಅರಣ್ಯ ಇಲಾಖೆ ಇದೆ. ತೆರವು ಕಾರ್ಯಾಚರಣೆಯನ್ನು ಸ್ವಲ್ಪ ದಿನ ಮುಂದೂಡಿ ಎಂದು ರಾಜ್ಯ ಸರ್ಕಾರ ಮೌಖಿಕವಾಗಿ ಅಧಿಕಾರಿಗಳಿಗೆ ಸೂಚನೆ ನೀಡುತ್ತಿದೆ. ಇದು, ತಾತ್ಕಾಲಿಕ ಪರಿವಾರ. ಶಾಶ್ವತ ಪರಿಹಾರದ ಬಾಗಿಲು ಮುಚ್ಚಿದೆ.
ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ಖುಲ್ಲಾಗೊಳಿಸುವ ಮುನ್ನ ತಮ್ಮ ಅಹವಾಲುಗಳನ್ನು ಕೇಳಬೇಕೆಂದು ಕೆಲವು ಮಂದಿ ಹೈಕೋರ್ಟ್ನಲ್ಲಿ ಮನವಿ ಮಾಡಿದ್ದು, ಬುಧವಾರ ಈ ಅರ್ಜಿಯ ವಿಚಾರಣೆ ನಡೆಯಲಿದೆ. ಇಲ್ಲಿನ ಜನರು ತಮ್ಮನ್ನು ತಾವೇ ಉಳಿಸಿಕೊಳ್ಳಲು ಕಾನೂನು ಹೋರಾಟದ ಹಾದಿ ಹಿಡಿಯಬೇಕು. ಇದೊಂದೇ ಕೊನೆಯ ಅಸ್ತ್ರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

